ಬಿಜೆಪಿ ಸರ್ಕಾರ ಘೋಷಿಸಿದ್ದ 21 ಗೋ ಶಾಲೆಗಳಿಗೆ ಕೊಕ್!
ಪ್ರಸ್ತುತ ನಿರ್ಮಾಣ ಮಾಡಿರುವ 14 ಗೋಶಾಲೆಗಳಿಗೇ ಅಗತ್ಯ ಪ್ರಮಾಣದಲ್ಲಿ ಗೋವುಗಳು ಬರುತ್ತಿಲ್ಲ. ಹೀಗಾಗಿ ಹೊಸದಾಗಿ ಗೋಶಾಲೆಗಳನ್ನು ನಿರ್ಮಿಸುವ ಬದಲು ಇರುವ ಗೋಶಾಲೆಗಳನ್ನೇ ಅಭಿವೃದ್ಧಿಪಡಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ ಸಚಿವ ಎಚ್.ಕೆ. ಪಾಟೀಲ್
ಬೆಂಗಳೂರು(ಜ.03): ಬಿಜೆಪಿ ಸರ್ಕಾರದ ಅವಧಿಯಲ್ಲಿ ಪ್ರತಿ ಜಿಲ್ಲೆಗೊಂದರಂತೆ ಘೋಷಿಸಿದ್ದ ನೂತನ ಗೋ ಶಾಲೆಗಳ ನಿರ್ಮಾಣ ನಿರ್ಧಾರವನ್ನು ಹಿಂಪಡೆದು, ಅದಕ್ಕಾಗಿ ಮೀಸಲಿಟ್ಟ ಹಣವನ್ನು ಹಾಲಿ ಇರುವ ಬಲವರ್ಧನೆಗೆ ವಿನಿಯೋಗಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಹಿಂದಿನ ಸರ್ಕಾರ 2022-23ನೇ ಸಾಲಿನ ಆಯವ್ಯಯದಲ್ಲಿ ಪ್ರತಿ ಜಿಲ್ಲೆಗೊಂದರಂತೆ ಒಟ್ಟಾರೆ 35 ಗೋಶಾಲೆ ನಿರ್ಮಿಸಲು ಉದ್ದೇಶಿಸಿತ್ತು. ಈ ಪೈಕಿ ಕಾರವಾರ, ಹಾಸನ, ಬೆಂಗಳೂರು ನಗರ, ಮಂಡ್ಯ, ಬೆಂಗಳೂರು ಗ್ರಾಮಾಂತರ, ದಕ್ಷಿಣ ಕನ್ನಡ, ಧಾರವಾಡ, ಉಡುಪಿ, ಮೈಸೂರು, ತುಮಕೂರು, ಉಡುಪಿ, ಬೀದರ್, ದಕ್ಷಿಣ ಕನ್ನಡ, ಬೆಳಗಾವಿ ಹೀಗೆ 14 ಕಡೆ ಗೋಶಾಲೆಗಳನ್ನು ನಿರ್ಮಿಸಿದ್ದು, ಈಗಾಗಲೇ ಅವು ಕಾರ್ಯನಿರ್ವಹಿಸುತ್ತಿವೆ. ಇದೀಗ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಬಿಜೆಪಿ ಸರ್ಕಾರದ ಘೋಷಣೆ ಪೈಕಿ ಈಗಾಗಲೇ ನಿರ್ಮಾಣವಾಗಿರುವ 14 ಗೋಶಾಲೆ ಹೊರತಾಗಿ ಯಾವುದೇ ಹೊಸ ಗೋಶಾಲೆ ನಿರ್ಮಿಸದಿರಲು ತೀರ್ಮಾನಿಸಲಾಗಿದೆ. ಹೊಸ ಗೋಶಾಲೆಗಳ ನಿರ್ಮಾಣಕ್ಕೆ ಪ್ರಸ್ತುತ ಲಭ್ಯವಿರುವ 10.5 ಕೋಟಿ ರು. ಅನುದಾನವನ್ನು ಹಾಲಿ ಇರುವ ಗೋಶಾಲೆಗಳ ಬಲವರ್ಧನೆಗೆ ಬಳಕೆ ಮಾಡಲು ನಿರ್ಧರಿಸಲಾಗಿದೆ.
ಇದಕ್ಕೆ ಸಮರ್ಥನೆ ನೀಡಿದ ಸಚಿವ ಎಚ್.ಕೆ. ಪಾಟೀಲ್, ಪ್ರಸ್ತುತ ನಿರ್ಮಾಣ ಮಾಡಿರುವ 14 ಗೋಶಾಲೆಗಳಿಗೇ ಅಗತ್ಯ ಪ್ರಮಾಣದಲ್ಲಿ ಗೋವುಗಳು ಬರುತ್ತಿಲ್ಲ. ಹೀಗಾಗಿ ಹೊಸದಾಗಿ ಗೋಶಾಲೆಗಳನ್ನು ನಿರ್ಮಿಸುವ ಬದಲು ಇರುವ ಗೋಶಾಲೆಗಳನ್ನೇ ಅಭಿವೃದ್ಧಿಪಡಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದರು. ಹಾಗಿದ್ದರೆ ಬಿಜೆಪಿಯವರು ಅನಗತ್ಯವಾಗಿ ಗೋಶಾಲೆ ನಿರ್ಮಿಸಲು ಮುಂದಾಗಿದ್ದರೇ ಎಂಬ ಪ್ರಶ್ನೆಗೆ, ಗೋವುಗಳು ಬರುತ್ತಿಲ್ಲ ಎನ್ನುವುದಾದರೆ ಅದು ಅಗತ್ಯವಿಲ್ಲ ಎಂದೇ ಅರ್ಥವಲ್ಲವೇ? ಎಂದು ಸಚಿವರು ಸಮರ್ಥನೆ ನೀಡಿದರು.
200 ಪಶು ಚಿಕಿತ್ಸಾಲಯ ಕಟ್ಟಡ ನಿರ್ಮಾಣ:
ಪಶುಗಳ ಆರೋಗ್ಯಕ್ಕೆ ಸರ್ಕಾರ ಒತ್ತು ನೀಡುತ್ತಿದೆ. ಆಯವ್ಯಯದಲ್ಲಿ ಘೋಷಣೆ ಮಾಡಿರುವಂತೆ ಬಾಡಿಗೆ ಮತ್ತು ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುವ 200 ಪಶು ವೈದ್ಯಕೀಯ ಸಂಸ್ಥೆಗಳಿಗೆ 100 ಕೋಟಿ ರು. ವೆಚ್ಚದಲ್ಲಿ ನೂತನ ಕಟ್ಟಡ ನಿರ್ಮಿಸಲು ನಿರ್ಧರಿಸಲಾಗಿದೆ.
ಹೊಸ ಮೀನುಗಾರಿಕೆ ಬಂದರು:
ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯಲ್ಲಿನ ಮೀನುಗಾರಿಕೆ ಬಂದರು ನಿರ್ಮಾಣಕ್ಕೆ 188.73 ಕೋಟಿ ರು. ಬದಲಿಗೆ 209.13 ಕೋಟಿ ರು.ಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆಯನ್ನು ಇದೇ ವೇಳೆ ಸಚಿವ ಸಂಪುಟ ಸಭೆಯಲ್ಲಿ ನೀಡಲಾಗಿದೆ. ಜತೆಗೆ ಕೇಂದ್ರ ಪುರಸ್ಕೃತ ಮತ್ಯ್ಯ ಸಂಪದ ಯೋಜನೆಯಡಿ ಹಾಲಿ ಇರುವ ಮೀನುಗಾರಿಕೆ ಬಂದರುಗಳ ಆಧುನೀಕರಣ ಹಾಗೂ ಮೀನು ಗಾರಿಕೆ ಬಂದರು ನಿರ್ವಹಣೆ, ಹೂಳೆತ್ತುವಿಕೆ ಸೇರಿ 84.57 ಕೋಟಿ ರು. ವಿವಿಧ ಕಾಮಗಾರಿಗಳ ಅಂದಾಜು ಮೊತ್ತಕ್ಕೂ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ.