ಜೀವ ರಕ್ಷಿಸಿದ ವೀರ ಮಕ್ಕಳಿಗೆ ಶೌರ‍್ಯ ಪ್ರಶಸ್ತಿ ಮಕ್ಕಳ ದಿನಾಚರಣೆಯಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರಿಂದ ಪ್ರದಾನ

ಬೆಂಗಳೂರು (ನ.15) : ಅಪ್ರತಿಮ ಸಾಹಸ ತೋರಿದ ಐವರು ಮಕ್ಕಳಿಗೆ 2022-23ನೇ ಸಾಲಿನ ಹೊಯ್ಸಳ, ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯನ್ನು ಸೋಮವಾರ ಪ್ರದಾನ ಮಾಡಲಾಯಿತು. ಬೆಂಗಳೂರಿನ ಕಬ್ಬನ್‌ ಉದ್ಯಾನದಲ್ಲಿರುವ ಜವಾಹರ ಬಾಲಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜವಾಹರ ಬಾಲಭವನ ಸೊಸೈಟಿ ಆಯೋಜಿಸಿದ್ದ ‘ಮಕ್ಕಳ ದಿನಾಚರಣೆ’ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಲಾಯಿತು. ಪ್ರಶಸ್ತಿಯು .10 ಸಾವಿರ ನಗದು, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ಒಳಗೊಂಡಿದೆ.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌, ಸಂವಿಧಾನಾತ್ಮಕವಾಗಿ ಕೊಡಲಾಗಿರುವ ಮೂಲಭೂತ ಹಕ್ಕುಗಳು ದೇಶದ ಪ್ರತಿಯೊಂದು ಮಗುವಿಗೂ ಸಿಗುವಂತಾಗಬೇಕು. ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಕರೆ ನೀಡಿದರು.

ಒಂದು ತಿಂಗಳಲ್ಲಿ 20 ಸಾವಿರ ಮನೆ ನಿರ್ಮಾಣ: ಸಿಎಂ ಬೊಮ್ಮಾಯಿ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್‌ ಮಾತನಾಡಿ, ಮಕ್ಕಳಿಗೆ ಪೌಷ್ಟಿಕ ಆಹಾರ, ಶಿಕ್ಷಣ ಒದಗಿಸುವ ಮೂಲಕ ಆರೋಗ್ಯಯುತ ಸಮಾಜ ನಿರ್ಮಾಣದ ಗುರಿ ಹೊಂದಲಾಗಿದೆ. ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮದಿಂದ ಮಕ್ಕಳು ಹಾಗೂ ಮಹಿಳೆಯರಿಗೆ ಸಹಾಯಕವಾಗಿದೆ. ಹೆಣ್ಣು ಮಗುವಿನ ಉಳಿವು ಮತ್ತು ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಬಜೆಟ್‌ನಲ್ಲಿ ಘೋಷಿಸಿದಂತೆ ಮುಂದಿನ ದಿನಗಳಲ್ಲಿ 4,266 ಅಂಗನವಾಡಿಗಳನ್ನು ನಿರ್ಮಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಶಾಸಕ ರಿಜ್ವಾನ್‌ ಅರ್ಷದ್‌, ಸಂಸದ ಲೆಹರ್‌ ಸಿಂಗ್‌ ಸಿರೋಯಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ ಎನ್‌.ಮಂಜುಳಾ, ನಿರ್ದೇಶಕಿ ಡಾ ಕೆ.ಎನ್‌.ಅನುರಾಧಾ ಉಪಸ್ಥಿತರಿದ್ದರು.

ಪ್ರತಿಭಾ ಪುರಸ್ಕಾರ: 2021-22ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಬಾಲಮಂದಿರದ ವಿದ್ಯಾರ್ಥಿಗಳಾದ ಜೆ.ಜೆ.ಶ್ರುತಿ ಮತ್ತು ಗಂಗೋತ್ರಿ (ದ್ವಿತೀಯ ಪಿಯು) ಹಾಗೂ ಪ್ರೀತಿ ಘಾಟೆ, ಕೆ.ಆರ್‌.ರಾಧಿಕಾ, ಆರ್‌.ನಿರ್ಮಲಾ (ಎಸ್ಸೆಸ್ಸೆಲ್ಸಿ) ಅವರಿಗೆ ಪ್ರತಿಭಾ ಪುರಸ್ಕಾರ ಪತ್ರ ವಿತರಿಸಲಾಯಿತು.

ಮಕ್ಕಳ ಕಲ್ಯಾಣಕ್ಕೆ ಶ್ರಮಿಸಿದವರಿಗೆ ಪ್ರಶಸ್ತಿ:

ಸಂಸ್ಥೆಗಳು: ಕಲಾ ಚೈತನ್ಯ ಸೇವಾ ಸಂಸ್ಥೆ (ಚಿತ್ರದುರ್ಗ), ತವರು ಚಾರಿಟಬಲ್‌ ಟ್ರಸ್ಟ್‌ (ಹಾಸನ), ಸ್ಪಂದನ ವಿಶೇಷ ದತ್ತು ಸ್ವೀಕಾರ ಕೇಂದ್ರ(ಹಾವೇರಿ), ಇನ್ನರ್‌ ವ್ಹೀಲ್‌ ಕ್ಲಬ್‌ ಸ್ವಯಂ ಸೇವಾ ಸಂಸ್ಥೆ(ಕೊಪ್ಪಳ)

Connect Karnataka Expo: ಕನೆಕ್ಟ್ ಕರ್ನಾಟಕಕ್ಕೆ ಅಭೂತಪೂರ್ವ ಪ್ರತಿಕ್ರಿಯೆ

ವ್ಯಕ್ತಿಗಳು:

  • ಡಾಹುಲಿಕಲ್‌ ನಟರಾಜ್‌ (ಬೆಂಗಳೂರು ಗ್ರಾಮಾಂತರ),
  • ಡಾ.ಪವಿತ್ರಾ (ಶಿವಮೊಗ್ಗ), ಭೀಮಣ್ಣ ಮಾರುತಿ ಹುಲಕರ್ಕಿ (ಧಾರವಾಡ), ಗುಂಡಿ ರಮೇಶ್‌ (ವಿಜಯನಗರ)

ಯಾರಿಗೆ ಪ್ರಶಸ್ತಿ?

  • ಕೆರೆಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವೃದ್ಧರೊಬ್ಬರನ್ನು ಸಮಯ ಪ್ರಜ್ಞೆಯಿಂದ ರಕ್ಷಿಸಿದ ಕೊಡಗು ಜಿಲ್ಲೆಯ ನಮ್ರತಾ.
  • ವಿದ್ಯುತ್‌ ಶಾಕ್‌ ತಗುಲಿದ್ದ ತನ್ನ ಸಹೋದರನನ್ನು ಸಮಯ ಪ್ರಜ್ಞೆಯಿಂದ ರಕ್ಷಿಸಿದ ಶಿವಮೊಗ್ಗ ಜಿಲ್ಲೆಯ ಪ್ರಾರ್ಥನಾ.
  • ರಸ್ತೆ ಅಪಘಾತದಿಂದ ಜೀಪ್‌ನಲ್ಲಿ ಸಿಲುಕಿಕೊಂಡಿದ್ದ ತನ್ನ ತಂದೆಯನ್ನು ರಕ್ಷಿಸಿದ ಕಾರವಾರ ಜಿಲ್ಲೆಯ ಕೌಶಲ್ಯ ವೆಂಕಟರಮಣ.
  • ರೈಲು ಹಳಿ ದಾಟುವಾಗ ಸಿಲುಕಿಕೊಂಡಿದ್ದ ವೃದ್ಧೆಯನ್ನು ಹಳಿಯಿಂದ ದೂರಕ್ಕೆ ಎಳೆದು ರಕ್ಷಿಸಿದ ಚಿಕ್ಕಮಗಳೂರು ಜಿಲ್ಲೆಯ ಕಾವ್ಯಾ ಭಾಸ್ಕರ್‌ ಹೆಗಡೆ.
  • ಹಳ್ಳಕ್ಕೆ ಬಿದ್ದ ಜೀಪಿನ ಗಾಜನ್ನು ಮೆಟಲ್‌ ಬಾಟಲಿಯಿಂದ ಒಡೆದು ನೀರನ್ನು ಹೊರ ಹಾಕಿ ತಂದೆ, ತಾಯಿಯನ್ನು ರಕ್ಷಿಸಿದ ದಾವಣಗೆರೆ ಜಿಲ್ಲೆಯ ಕೀರ್ತಿ ವಿವೇಕ್‌ ಎಂ.ಸಾಹುಕಾರ್‌.