ಅಧಿವೇಶನ ಆರಂಭಕ್ಕೆ ಮುನ್ನ ರೇಷನ್ ಕಾರ್ಡ್ ವಾಪಸ್ ಕೊಡದಿದ್ದರೆ ತೀವ್ರ ಹೋರಾಟ: ಆರ್.ಅಶೋಕ
ರಾಜ್ಯ ಸರ್ಕಾರ ರೇಷನ್ ಕಾರ್ಡ್‌ಗಳನ್ನು ವಾಪಸ್ ನೀಡಬೇಕು, ಇಲ್ಲದಿದ್ದರೆ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಎಚ್ಚರಿಸಿದ್ದಾರೆ. ಲಕ್ಷಾಂತರ ಜನರ ಕಾರ್ಡ್‌ಗಳನ್ನು ರದ್ದುಗೊಳಿಸಿರುವುದನ್ನು ಖಂಡಿಸಿದ ಅವರು, ಸರ್ಕಾರದ ಖಜಾನೆ ಖಾಲಿಯಾಗಿದೆ, ಆದರೆ ಶಾಸಕರ ಬಂಡಾಯ ಶಮನ ಮತ್ತು ಸಚಿವರ ಮನೆಗಳ ನವೀಕರಣಕ್ಕೆ ಹಣ ಖರ್ಚು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು (ನ.21): ರಾಜ್ಯದಲ್ಲಿ ಸದನ ಆರಂಭವಾಗುವ ಮುನ್ನವೇ ರಾಜ್ಯ ಸರ್ಕಾರ ಜನರಿಗೆ ರೇಷನ್ ಕಾರ್ಡ್ ವಾಪಸ್ ನೀಡಬೇಕು. ಇಲ್ಲವಾದರೆ ತೀವ್ರವಾದ ಹೋರಾಟ ಮಾಡಿ ಸರ್ಕಾರಿ ಕಚೇರಿಗಳಿಗೆ ಹಾಗೂ ವಿಧಾನಸೌಧಕ್ಕೆ ಬೀಗ ಹಾಕುತ್ತೇವೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಎಚ್ಚರಿಕೆ ನೀಡಿದರು.
ಜಯನಗರದ ಅರಸು ಕಾಲೋನಿಯಲ್ಲಿ ರೇಷನ್ ಕಾರ್ಡ್ ರದ್ದುಗೊಂಡ ಕುಟುಂಬಗಳನ್ನು ಭೇಟಿ ಮಾಡಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅನ್ನಭಾಗ್ಯ ಎಂದು ಹೇಳಿ ಕನ್ನಭಾಗ್ಯ ಕೊಟ್ಟಿದ್ದಾರೆ. ಅನ್ನವನ್ನು ಕದ್ದು ಲಕ್ಷಾಂತರ ಜನರಿಗೆ ಅನ್ಯಾಯ ಮಾಡಿದ್ದಾರೆ. ಅರಸು ಕಾಲೋನಿಯಲ್ಲಿ 45 ವರ್ಷದಿಂದ ರೇಷನ್ ಕಾರ್ಡ್ ಹೊಂದಿದ್ದ ವೃದ್ಧೆ, ಈಗ ಅರ್ಹತೆ ಕಳೆದುಕೊಂಡಿದ್ದಾರೆ. ಅಂಕಿ ಅಂಶದ ಪ್ರಕಾರ, 250 ಸರ್ಕಾರಿ ನೌಕರರ ಬಳಿ ರೇಷನ್ ಕಾರ್ಡ್ ಇದ್ದರೂ, 12 ಲಕ್ಷ ಜನರ ಕಾರ್ಡ್ ರದ್ದು ಮಾಡಲು ಸರ್ಕಾರ ಮುಂದಾಗಿದೆ. ಏನೂ ಭಯ ಬೇಡವೆಂದು ಸಿಎಂ ಸಿದ್ದರಾಮಯ್ಯ ಹೇಳಿದರೆ, ಆಹಾರ ಸಚಿವರು ಮತ್ತೆ ಅರ್ಜಿ ಹಾಕಿ ಎಂದು ಹೇಳುತ್ತಾರೆ. ಕಾಂಗ್ರೆಸ್ ನಾಯಕರು ತಪ್ಪು ಮಾಡಿದ ಮೇಲೆ ಜನರು ಯಾಕೆ ಮರಳಿ ಅರ್ಜಿ ಹಾಕಬೇಕು? ಎಂದು ಪ್ರಶ್ನೆ ಮಾಡಿದರು.
ಮರಳಿ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಿದರೆ ಒಂದು ಕಾರ್ಡ್‌ಗೆ 10-15 ಸಾವಿರ ರೂ. ಲಂಚ ನೀಡಬೇಕಾಗುತ್ತದೆ. ಯಾರೂ ಅರ್ಜಿ ಹಾಕಬಾರದು, ಸರ್ಕಾರವೇ ಮರಳಿ ರೇಷನ್ ಕಾರ್ಡ್ ಕೊಡಬೇಕು. ದೇವಸ್ಥಾನದ ಮುಂದೆ ಹೂ ಮಾರುವವರು, ಸೊಪ್ಪು ಮಾರುವವರ ರೇಷನ್ ಕಾರ್ಡ್ ರದ್ದುಪಡಿಸಲಾಗಿದೆ. ಇದರ ವಿರುದ್ಧ ಸದನದಲ್ಲಿ ಹಾಗೂ ಹೊರಗೆ ಪ್ರತಿಭಟಿಸಲಾಗುವುದು. ಏಕಾಏಕಿ ರೇಷನ್ ಕಾರ್ಡ್ ರದ್ದು ಮಾಡಲು ಸರ್ಕಾರಕ್ಕೆ ಅಧಿಕಾರವಿಲ್ಲ. ಸರ್ಕಾರದ ಖಜಾನೆಯಲ್ಲಿ ಹಣ ಖಾಲಿಯಾಗಿದ್ದು, ರಸ್ತೆ ಗುಂಡಿ ಮುಚ್ಚಲು ಕೂಡ ಹಣವಿಲ್ಲ. 20-30 ಸಾವಿರ ಕೋಟಿ ರೂ. ಉಳಿಸಿ, ಶಾಸಕರ ಬಂಡಾಯ ಶಮನಕ್ಕೆ ಬಳಸಲಾಗುತ್ತದೆ. ಸಚಿವರ ಮನೆ ಆಧುನೀಕರಣಕ್ಕೆ 40-50 ಕೋಟಿ ರೂ., ಸಿಎಂ ಮನೆ ನವೀಕರಣಕ್ಕೆ 2 ಕೋಟಿ ರೂ. ಖರ್ಚು ಮಾಡಲಾಗಿದೆ. ಆದರೆ ಬಡ ಜನರಿಗೆ ಅಕ್ಕಿ ಕೊಡಲು ಸರ್ಕಾರದ ಬಳಿ ಹಣವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಿಪಿಎಲ್ ಕಾರ್ಡ್ ಪರಿಷ್ಕರಣೆ ಸ್ಥಗಿತ; ರದ್ದಾಗಿರುವ ಕಾರ್ಡ್‌ಗೂ ರೇಷನ್ ಕೊಡ್ತೀವಿ: ಮುನಿಯಪ್ಪ
ಸಂಜಯಗಾಂಧಿ ಆಸ್ಪತ್ರೆಗೆ ಭೇಟಿ: ಬೆಂಗಳೂರಿನಲ್ಲಿ ಚಿಕಿತ್ಸಾ ದರ ಹೆಚ್ಚಳದ ಬೆನ್ನಲ್ಲಿಯೇ ಜಯನಗರದ ಸಂಜಯಗಾಂಧಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್. ಅಶೋಕ್ ಅವರು, ಕಾಂಗ್ರೆಸ್ ಸರ್ಕಾರ ಕಳೆದ 16 ತಿಂಗಳಲ್ಲಿ ಜನರ ತಲೆಗೆ ಚಪ್ಪಡಿ ಎಳೆಯುವ ಕೆಲಸ ಮಾಡಿದೆ. ಆರೋಗ್ಯ ಇಲಾಖೆಯಲ್ಲಿ ಹಣ ಕೊರತೆಯಿಂದಾಗಿ ಔಷಧಿ ಖರೀದಿ ಸಾಧ್ಯವಾಗುತ್ತಿಲ್ಲ. ಸರ್ಕಾರ ಶಿಕ್ಷಣ ಮತ್ತು ಆರೋಗ್ಯಕ್ಕೆ ಅನುದಾನ ಕಡಿತ ಮಾಡಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ವಹಣೆಗೂ ಹಣವಿಲ್ಲ. ಇದಕ್ಕಾಗಿ ಸೇವಾ ಶುಲ್ಕವನ್ನು ಏರಿಸಲಾಗಿದೆ. ಅನ್ನ ಮತ್ತು ಆರೋಗ್ಯದ ವಿಚಾರದಲ್ಲಿ ಸಿದ್ದರಾಮಯ್ಯನವರ ಸರ್ಕಾರ ಜನರಿಗೆ ಮೋಸ ಮಾಡಿದೆ ಎಂದು ಆರೋಪಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ 12,80,540 ಬಿಪಿಎಲ್ ಕಾರ್ಡ್ ಕೊಟ್ಟಿದೆ, ಯಾವುದನ್ನೂ ರದ್ದು ಮಾಡಿಲ್ಲ; ವಕ್ತಾರ ಎಂ. ಲಕ್ಷ್ಮಣ್!
ಒಂದು ಕಡೆ ಜಮೀನು ಹೋಗುತ್ತಿದೆ, ಮತ್ತೊಂದು ಕಡೆ ರೇಷನ್ ಕಾರ್ಡ್ ಹೋಗುತ್ತಿದೆ, ಈಗ ಉಚಿತ ಆರೋಗ್ಯವೂ ದೊರೆಯುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲ ಶುಲ್ಕಗಳನ್ನು ಹೆಚ್ಚು ಮಾಡಿರುವುದೇ ಖಜಾನೆ ಖಾಲಿಯಾಗಿರುವುದಕ್ಕೆ ಸಾಕ್ಷಿ. ಐದು ಗ್ಯಾರಂಟಿಗಳಿಗಾಗಿ ಜನರ ಮೇಲೆ ತೆರಿಗೆ ಹೊರೆ ಹಾಕಲಾಗುತ್ತಿದೆ. ಸಿಎಂ ಸಿದ್ದರಾಮಯ್ಯನವರ ಪ್ರಕಾರ ಇದು ಬಡವರ ಪರವಾದ ಸರ್ಕಾರವೇ? ಮುಡಾ ಹಗರಣದ ನಂತರ ಸಿಎಂ ಸಿದ್ದರಾಮಯ್ಯ ಮಾನಸಿಕ ಸ್ಥಿಮಿತ ಕಳೆದುಕೊಂಡು ಜನರ ಮೇಲೆ ತೆರಿಗೆ ಹಾಕುತ್ತಿದ್ದಾರೆ. ಲಂಚ ಇದ್ದರೆ ಮಾತ್ರ ವಿಧಾನಸೌಧಕ್ಕೆ ಪ್ರವೇಶ ಎಂಬ ಸ್ಥಿತಿ ಇದೆ. ಆರೋಗ್ಯ ಸೇವೆಯನ್ನು ಸಂಪೂರ್ಣ ಉಚಿತವಾಗಿ ನೀಡಬೇಕು. ಇದರ ಮೇಲೂ ಸರ್ಕಾರ ವಕ್ರದೃಷ್ಟಿ ಬೀರಿದೆ ಎಂದು ಆಕ್ರೋಶ ಹೊರಹಾಕಿದರು.