ಕಾಂಗ್ರೆಸ್ಸಿದ್ದರೆ ಜನ ಬೀದಿ ಹೆಣವಾಗುತ್ತಿದ್ದರು: ಬೊಮ್ಮಾಯಿ ವಾಗ್ಬಾಣ!

* ಸ್ಪಾನಿಶ್‌ ಫ್ಲೂ ವೇಳೆ ಸಹಸ್ರಾರು ಜನ ಹಸಿವಿಂದ ಸತ್ತಿದ್ದರು

* ಕೊರೋನಾ ವೇಳೆ ಆಹಾರವಿಲ್ಲದೆ ಒಬ್ಬರೂ ಸತ್ತಿಲ್ಲ: ಸಿಎಂ

* ಬೆಲೆ ಏರಿಕೆ ಎಲ್ಲ ಸರ್ಕಾರದಲ್ಲೂ ಸಾಮಾನ್ಯ

* ಹಿಂದಕ್ಕೆ ಹೋಲಿಸಿದರೆ ಕಡಿಮೆ ಏರಿಕೆಯಾಗಿದೆ

 

Bommai mounts counter attack after Congress kicks up a storm over rise in fuel prices pod

 ವಿಧಾನಸಭೆ(ಸೆ.21): ‘ವಿಶ್ವಾದ್ಯಂತ ಈ ಹಿಂದೆ ಸ್ಪಾ್ಯನಿಶ್‌ ಫä್ಲ ಬಂದಾಗ ನಮ್ಮ ದೇಶದಲ್ಲಿ ಹಸಿವಿನಿಂದಲೇ ಸಾವಿರಾರು ಮಂದಿ ಸಾವನ್ನಪ್ಪಿದ್ದರು. ಕೊರೋನಾದಂತಹ ಮಹಾಮಾರಿ ಬಂದಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರು ಹಸಿವಿನಿಂದ ಒಬ್ಬರನ್ನೂ ಸಾಯಲು ಬಿಟ್ಟಿಲ್ಲ. ಕಾಂಗ್ರೆಸ್‌ ಅವಧಿಯಲ್ಲಿ ಇಂತಹ ಕಾಯಿಲೆ ಬಂದಿದ್ದರೆ ಜನ ರಸ್ತೆಗಳಲ್ಲೇ ಸಾಯುತ್ತಿದ್ದರು...’

ಬೆಲೆ ಏರಿಕೆ ವಿರುದ್ಧ ಧ್ವನಿ ಎತ್ತಿರುವ ಕಾಂಗ್ರೆಸ್‌ ವಿರುದ್ಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಿಡಿಕಾರಿದ ರೀತಿ ಇದು. ಮುಖ್ಯಮಂತ್ರಿಗಳ ಈ ಹೇಳಿಕೆಯಿಂದ ಸದನದಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ಗದ್ದಲ ಉಂಟಾಗಿ ಅಂತಿಮವಾಗಿ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿದ ಘಟನೆ ಸೋಮವಾರ ವಿಧಾನಸಭೆಯಲ್ಲಿ ನಡೆಯಿತು.

ಇದಕ್ಕೂ ಮುನ್ನ ಬೆಲೆ ಏರಿಕೆ ಕುರಿತ ವಿಪಕ್ಷಗಳ ಟೀಕೆಗೆ ಉತ್ತರಿಸಿದ ಅವರು, ಬೆಲೆ ಏರಿಕೆ ಎಂಬುದು ಪ್ರತಿ ಸರ್ಕಾರದಲ್ಲೂ ಇರುವ ಸಾಮಾನ್ಯ ಸಂಗತಿ. ಹಿಂದಿನ ಸರ್ಕಾರಗಳಿಗೆ ಹೋಲಿಸಿದರೆ ಕಡಿಮೆ ಪ್ರಮಾಣದಲ್ಲಿ ನಮ್ಮ ಅವಧಿಯಲ್ಲಿ ಬೆಲೆ ಏರಿಕೆಯಾಗಿದೆ. ಎಲ್ಲಾ ಆರ್ಥಿಕ ಮೂಲಗಳು ಸ್ತಬ್ಧಗೊಂಡ ಕೊರೋನಾ ಅವಧಿಯಲ್ಲೂ ಕೇವಲ ಇಂಧನ ತೆರಿಗೆಯ ಮೂಲದಿಂದ ಇಡೀ ದೇಶದ ಜನರ ಅಗತ್ಯಗಳನ್ನು ನರೇಂದ್ರ ಮೋದಿ ಪೂರೈಸಿದ್ದಾರೆ. ಹೀಗಾಗಿ ನಮ್ಮ ಅವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿಲ್ಲ. ಬದಲಿಗೆ ದೇಶದ ಬೆಲೆ ಹೆಚ್ಚಾಗಿದೆ. ನರೇಂದ್ರ ಮೋದಿ ಹತ್ತಿರವೂ ನಿಮ್ಮ ಯಾವೊಬ್ಬ ನಾಯಕನೂ ಸುಳಿಯಲಾರ ಎಂದು ಸಮರ್ಥಿಸಿಕೊಂಡರು.

ವಿಶ್ವ ಆರೋಗ್ಯ ಸಂಸ್ಥೆಯೇ ಭಾರತದ ಕೊರೋನಾ ನಿರ್ವಹಣೆಯನ್ನು ಕೊಂಡಾಡಿದೆ. ಈ ಹಿಂದೆ ಸ್ಪಾ್ಯನಿಶ್‌ ಫä್ಲ ಬಂದಿತ್ತು. ಅದು ಗಂಭೀರವಲ್ಲದ ಕಾಯಿಲೆ ಆಗಿದ್ದರೂ ಹಸಿವಿನಿಂದಲೇ ಸಾವಿರಾರು ಮಂದಿ ಸಾವನ್ನಪ್ಪುವಂತೆ ಮಾಡಿತ್ತು. ಆದರೆ, ಎಂಟು ತಿಂಗಳಿಂದ ಗರೀಬ್‌ ಕಲ್ಯಾಣ ಯೋಜನೆಯಡಿ ಮೋದಿ ಉಚಿತವಾಗಿ ಆಹಾರ ಧಾನ್ಯ ನೀಡಿದ್ದಾರೆ. ಈ ಮೂಲಕ ಒಬ್ಬರೂ ಹಸಿವಿನಿಂದ ಸಾಯದಂತೆ ನೋಡಿಕೊಂಡಿದ್ದಾರೆ. ಇದು ನರೇಂದ್ರ ಮೋದಿ ಸರ್ಕಾರದ ಬಲ. ಅಷ್ಟುಮಾತ್ರವಲ್ಲ, ಗ್ರಾಮೀಣ ಸಡಕ್‌, ಕೃಷಿ ಸಮ್ಮಾನ್‌, ಆಯುಷ್ಮಾನ್‌ ಭಾರತ್‌ ಯೋಜನೆಗಳಿಗೆ ಪ್ರಥಮ ಬಾರಿಗೆ ನೇರ ನಗದು ಪಾವತಿ ಮಾಡಿದ್ದಾರೆ ಎಂದರು.

ಜನರನ್ನು ರಕ್ಷಿಸಲು ಜನರಿಗೆ ತೆರಿಗೆ:

ರಾಜನಾದವನು ಹೇಗಿರಬೇಕು ಎಂಬ ಸಿದ್ದರಾಮಯ್ಯ ಅವರ ಕುಮಾರವ್ಯಾಸ ಭಾರತದ ಪದ್ಯಕ್ಕೆ ಅದೇ ಕುಮಾರವ್ಯಾಸ ಭಾರತದ ಪದ್ಯದ ಮೂಲಕವೇ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು. ರಾಜನಾದವನು ಹೇಗಿರಬೇಕು ಎಂದು ಕುಮಾರವ್ಯಾಸ ಭಾರತದಲ್ಲಿ ಹೇಳಲಾಗಿದೆ. ‘ಹೂವಾಡಿಗ ಹೂವು ಬಿಡಿಸಿ ಗಿಡಕ್ಕೆ ತೊಂದರೆಯಾಗದಂತೆ ಹೇಗೆ ನೋಡುತ್ತಾನೋ, ದುಂಬಿ ಹೂವಿಗೆ ಹಾನಿಯಾಗದಂತೆ ಹೇಗೆ ಮಕರಂದ ಹೀರುತ್ತದೆಯೋ, ಪಶುಪಾಲಕ ಹಾಲು ಕರೆದು ಹೇಗೆ ಗೋವನ್ನು ರಕ್ಷಿಸುತ್ತಾನೋ, ಅದೇ ರೀತಿ ಯಾರಿಗೂ ತೊಂದರೆಯಾಗದಂತೆ ಆರ್ಥಿಕತೆಯನ್ನು ಸರಿದೂಗಿಸಬೇಕು’. ಹೀಗಾಗಿಯೇ ಜನರನ್ನು ರಕ್ಷಿಸಲೇ ಜನರಿಗೆ ತೆರಿಗೆ ವಿಧಿಸುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.

ಯುಪಿಎ ಅವಧಿಯಲ್ಲೇ ಹಣದುಬ್ಬರ ಹೆಚ್ಚು:

ನಮ್ಮ ಅವಧಿಯಲ್ಲಿ ಬೆಲೆ ಏರಿಕೆಯಾಗಿಲ್ಲ ಎಂದು ಅಂಕಿ-ಅಂಶ ಬಿಚ್ಚಿಟ್ಟಬೊಮ್ಮಾಯಿ ಅವರು, ಯುಪಿಎ ಅವಧಿಯಲ್ಲಿ ಪೆಟ್ರೋಲ್‌-ಡೀಸೆಲ್‌ ಬೆಲೆ ದುಪ್ಪಟ್ಟು ಆಗಿದ್ದರೆ ನಮ್ಮ ಅವಧಿಯಲ್ಲಿ ಶೇ.30ರಷ್ಟುಮಾತ್ರ ಹೆಚ್ಚಾಗಿದೆ. ಯುಪಿಯ ಅವಧಿಯಲ್ಲಿ ಶೇ.8ರಿಂದ 16ರವರೆಗೆ ಹಣದುಬ್ಬರ ದಾಖಲಾಗಿತ್ತು. ನಮ್ಮ ಅವಧಿಯಲ್ಲಿ ಹಣದುಬ್ಬರ ಶೇ.6ಕ್ಕಿಂತ ಕಡಿಮೆಯೇ ಇದೆ. ಶೇ.16ರಷ್ಟುಹಣದುಬ್ಬರ ಆಗಿ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಜನ ಬೆಂದು ಹೋಗುತ್ತಿದ್ದಾಗ ಮಾತನಾಡದವರು ಈಗ ಮಾತನಾಡುತ್ತಿದ್ದಾರೆ. ಇಂಧನವನ್ನು ದೇಶ ಬಳಕೆ ಮಾಡುತ್ತದೆಯೇ ಹೊರತು ಉತ್ಪಾದನೆ ಮಾಡುವುದಿಲ್ಲ. ಹೀಗಾಗಿ ಇಂಧನ ಬೆಲೆ ಕೊರೋನಾದಿಂದ ಹೆಚ್ಚಳವಾಗಿದೆ. ಮತ್ತೆ ಅದನ್ನು ಇಳಿಕೆ ಮಾಡುತ್ತೇವೆ. ಅಲ್ಲದೆ ಎಥನಾಲ್‌ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದೆ. ಸದ್ಯದಲ್ಲೇ ನಾವು ಇಂಧನದಲ್ಲಿ ಸ್ವಾವಲಂಬನೆ ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಗದೀಕರಣ ಶುರು ಮಾಡಿದ್ದು ಕಾಂಗ್ರೆಸ್‌:

ಸಾರ್ವಜನಿಕ ಆಸ್ತಿ ಮಾರಾಟ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲವನ್ನೂ ಮಾರಿಬಿಡುತ್ತಿದ್ದಾರೆ ಎಂದು ಕಾಂಗ್ರೆಸ್‌ನವರು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಮುಂಬೈ-ಪುಣೆ ಹೆದ್ದಾರಿಯನ್ನು ಅಡವಿಟ್ಟು 80 ಸಾವಿರ ಕೋಟಿ ರು. ಎತ್ತಿದ್ದು ಯುಪಿಎ ಸರ್ಕಾರ. ದೆಹಲಿ ರೈಲ್ವೆ ನಿಲ್ದಾಣವನ್ನು ನಗದೀಕರಣ ಮಾಡಲು ಸಹ ಪ್ರಸ್ತಾವನೆ ಸಿದ್ಧಪಡಿಸಿತ್ತು. ಇದೀಗ ನಮ್ಮಿಂದ ಮಾನಿಟೈಸೇಷನ್‌ ಶುರುವಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

60 ವರ್ಷದಲ್ಲಿ 13 ಕೋಟಿ ಎಲ್‌ಪಿಜಿ ಸಂಪರ್ಕ ನೀಡಿದ್ದೀರಿ. 7 ವರ್ಷದಲ್ಲಿ ಮೋದಿ 16.11 ಕೋಟಿ ಸಂಪರ್ಕ ನೀಡಿದ್ದಾರೆ. ಅಡುಗೆ ಅನಿಲದ ಮೇಲೆ ನೀಡುವ ಸಬ್ಸಿಡಿ ನೀತಿ ಹಲವು ಬಾರಿ ಬದಲಾವಣೆಯಾಗಿದೆ. ಯುಪಿಎ ಸರ್ಕಾರವು ಸಹ 12 ಸಿಲಿಂಡರ್‌ಗೆ ಸಬ್ಸಿಡಿ ನೀಡುವ ಪದ್ಧತಿಯನ್ನು 6 ಸಿಲಿಂಡರ್‌ಗೆ ಇಳಿಸಿ ನಂತರ ಮತ್ತೆ 9 ಸಿಲಿಂಡರ್‌ಗೆ ಏರಿಸಿತ್ತು. ಹೀಗೆ ದರ ಏರಿಕೆ, ಸಬ್ಸಿಡಿ ಬದಲಾವಣೆ ಹೊಸದಲ್ಲ. ಪ್ರಧಾನಿ ನರೇಂದ್ರ ಮೋದಿಯವರು ಕಷ್ಟಕಾಲದಲ್ಲಿ ಕೆಲವು ನಿರ್ಧಾರ ಮಾಡಿದ್ದಾರೆ. ಹಾಗಾಗಿ ಪ್ರಧಾನಿ ಅವರ ಕ್ರಮವನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್‌ ನಾಟಕ ಜನರಿಗೆ ಗೊತ್ತಿದೆ: ಸಿಎಂ

ಕಾಂಗ್ರೆಸ್‌ನವರು ಸೈಕಲ್‌ನಲ್ಲಿ ಬಂದರೂ, ಚಕ್ಕಡಿಯಲ್ಲಿ ಬಂದರೂ ಅಧಿಕಾರಕ್ಕೆ ಬರುವುದಿಲ್ಲ. ಏಕೆಂದರೆ ಸೈಕಲ್‌ ಇಳಿದ ತಕ್ಷಣ ನೀವು ಬೆಂಜ್‌ ಕಾರು ಹತ್ತುವುದು ಜನರಿಗೆ ಗೊತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.

ಕಾಂಗ್ರೆಸ್‌ನವರು ತುಳಿಯಲು ಕಷ್ಟವಾಗದಂತಹ ಗೇರ್‌ ಸೈಕಲ್‌ ತೆಗೆದುಕೊಂಡು ಬಂದಿದ್ದರು. ಇನ್ನು ಎತ್ತಿನಗಾಡಿ ಹೊಡೆಯುವಾಗ ಸಿದ್ದರಾಮಯ್ಯ ಮೂಗುದಾರ ಹಿಡಿದರೆ ಡಿ.ಕೆ. ಶಿವಕುಮಾರ್‌ ಬಾರುಕೋಲು ಹಿಡಿದು ಎತ್ತುಗಳಿಗೆ ಬಾರಿಸುತ್ತಿದ್ದರು. ಹೀಗಾಗಿ ಎತ್ತುಗಳು ಮುಂದಕ್ಕೆ ಹೋಗದಂತಾಗಿದೆ ಎಂದು ಸೂಚ್ಯವಾಗಿ ಕಾಂಗ್ರೆಸ್‌ನ ಸ್ಥಿತಿ ಬಗ್ಗೆ ವ್ಯಂಗ್ಯವಾಡಿದರು.

Latest Videos
Follow Us:
Download App:
  • android
  • ios