ಬೆಂಗಳೂರು(ಜ.04): ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ) ವು ನಗರ ಸಂಚಾರಕ್ಕಾಗಿ 643 ನಾನ್‌ ಎಸಿ ಭಾರತ್‌ ಸ್ಟೇಜ್‌-6 ಡೀಸೆಲ್‌ ಬಸ್‌ ಖರೀದಿಸುವ ಸಂಬಂಧ ಟೆಂಡರ್‌ ಕರೆದಿದೆ.

ಟೆಂಡರ್‌ಗೆ ಅರ್ಜಿಸಲ್ಲಿಸಲು ಫೆ.1 ಕಡೆಯ ದಿನವಾಗಿದೆ. ಫೆ.4ರಂದು ಫ್ರೀ ಕ್ವಾಲಿಫಿಕೇಶಷನ್‌ ಬಿಡ್‌ ತೆರೆಯಲಾಗುತ್ತದೆ. ಫೆ.12ರಂದು ಕಮರ್ಷಿಯಲ್‌ ಬಿಡ್‌ ತೆರೆಯಲಾಗುತ್ತದೆ ಎಂದು ನಿಗಮವು ಟೆಂಡರ್‌ ಜಾಹೀರಾತಿನಲ್ಲಿ ತಿಳಿಸಿದೆ.

ಅಕ್ರಮವಾಗಿ ಸೈಟ್‌ ಮಾರಲು ನೆರವಾಗಿದ್ದ ಬಿಡಿಎ ನೌಕರ ಸೆರೆ

ಆದರೆ, ಕೊರೋನಾದಿಂದ ಸಾರಿಗೆ ಆದಾಯ ಕುಸಿತವಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನಿಗಮವು ಇಂತಹ ಸಂಕಷ್ಟದ ಸಮಯದಲ್ಲಿ ಬಸ್‌ ಖರೀದಿಗೆ ಮುಂದಾಗಿರುವುದು ನೌಕರರ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

ನೌಕರರ ವೇತನ ನೀಡಲಾಗದೇ ಪ್ರತಿ ತಿಂಗಳು ಸರ್ಕಾರ ಕದ ತಟ್ಟುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಅನುದಾನ ನೀಡಿದರೂ ಸಕಾಲಕ್ಕೆ ವೇತನ ನೀಡದೆ ವಿಳಂಬ ಮಾಡಲಾಗುತ್ತಿದೆ. ಇನ್ನು ಕೊರೋನಾದಿಂದ ಪ್ರಯಾಣಿಕರ ಕೊರತೆಯಾಗಿ ಪೂರ್ಣ ಪ್ರಮಾಣದಲ್ಲಿ ಬಸ್‌ಗಳ ಕಾರ್ಯಾಚರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಕೊರೋನಾದಿಂದ ಆರ್ಥಿಕ ಹೊರೆ ಹೆಚ್ಚಳದ ಕಾರಣ ಮುಂದಿಟ್ಟು ನೌಕರರ ಹಲವು ಭತ್ಯೆಗಳು ಹಾಗೂ ಸೌಲಭ್ಯಗಳನ್ನು ಸ್ಥಗಿತಗೊಳಿಸಲಾಗಿದೆ. ಇಂತಹ ಸಂದರ್ಭದಲ್ಲಿ ನಿಗಮವು ಡೀಸೆಲ್‌ ಬಸ್‌ಗಳನ್ನು ಖರೀದಿಸಲು ಮುಂದಾಗಿರುವುದು ಸರಿಯಲ್ಲ ಎಂದು ನೌಕರರ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ.