ಬೆಂಗಳೂರು(ಜೂ.18): ಕೊರೋನಾ ಸುರಕ್ಷತೆಗೆ ಬೇಕಾದ ಪರಿಕರಗಳನ್ನು ನೀಡಿಲ್ಲ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ ಕಾರಣಕ್ಕೆ ನಿರ್ವಾಹಕಿಯೊಬ್ಬರನ್ನು ಬಿಎಂಟಿಸಿ ಹಿರಿಯ ಅಧಿಕಾರಿಗಳು ಅಮಾನತು ಮಾಡಿ ಅದೇಶಿಸಿದ್ದಾರೆ.

ಬಿಎಂಟಿಸಿ ಸಿಬ್ಬಂದಿಗೆ ಸೂಕ್ತ ಸುರಕ್ಷತಾ ಪರಿಕರ ನೀಡುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮಾಧ್ಯಮಗಳು ಕೆಲವು ಚಾಲಕ ಮತ್ತು ನಿರ್ವಾಹಕರೊಂದಿಗೆ ಸಂವಾದ ನಡೆಸಿದ್ದವು. ಈ ವೇಳೆ ದೀಪಾಂಜಲಿನಗರ ಡಿಪೋ ನಿರ್ವಾಹಕಿ ನೇತ್ರಾವತಿ ಅದೋನಿ ಎಂಬುವವರು ತಮಗೆ ಯಾವುದೇ ಸುರಕ್ಷತಾ ಪರಿಕರ ನೀಡಿಲ್ಲ ಎಂದು ಹೇಳಿಕೆ ನೀಡಿದ್ದರು.

ಈ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ಬಿಎಂಟಿಸಿ ಪಶ್ಚಿಮ ವಲಯ ವಿಭಾಗ ನಿಯಂತ್ರಣಾಧಿಕಾರಿಗಳು, ನಿಗಮದ ಬಗ್ಗೆ ಪ್ರತಿಕೂಲ ಅಭಿಪ್ರಾಯ ಉಂಟಾಗುವಂತೆ ಮಾಧ್ಯಮಗಳಲ್ಲಿ ಹೇಳಿಕೆ ನೀಡಿರುವ ಕುರಿತು ಸ್ಪಷ್ಟನೆ ನೀಡುವಂತೆ ನೋಟಿಸ್‌ ನೀಡಿದ್ದಲ್ಲದೆ, ಅವರನ್ನು ಅಮಾನತು ಮಾಡಿದ್ದಾರೆ.