ಬೆಂಗಳೂರು(ಮೇ.12): ಗುಜರಾತ್‌, ಮಹಾರಾಷ್ಟ್ರ, ಒಡಿಶಾ ಮುಂತಾದ ರಾಜ್ಯಗಳಲ್ಲಿ ಈಗಾಗಲೇ ವ್ಯಾಪಕವಾಗಿ ಕಂಡುಬಂದಿರುವ ಬ್ಲ್ಯಾಕ್‌ ಫಂಗಸ್‌ (ಮ್ಯುಕೋರ್‌ಮಯೋಸಿಸ್‌) ಸಮಸ್ಯೆ ಇದೀಗ ಬೆಂಗಳೂರಿನಲ್ಲೂ ತನ್ನ ಪ್ರತಾಪ ತೋರಿಸತೊಡಗಿದ್ದು, 50ಕ್ಕೂ ಹೆಚ್ಚು ಮಂದಿಗೆ ಈ ಸೋಂಕು ದೃಢಪಟ್ಟಿದೆ.

ಕಳೆದ ವರ್ಷದ ನವೆಂಬರ್‌ನಲ್ಲೂ ಈ ಕಪ್ಪು ಶಿಲೀಂಧ್ರವು ರಾಜ್ಯದಲ್ಲಿ ಎಂಟು ಮಂದಿಗೆ ಸೋಂಕುಂಟು ಮಾಡಿ ಆರು ಮಂದಿಯನ್ನು ಬಲಿ ಪಡೆದಿತ್ತು. ಅಲ್ಲದೆ ಇಬ್ಬರಿಗೆ ಶಾಶ್ವತ ಅಂಧತ್ವ ಉಂಟು ಮಾಡಿತ್ತು.

ಇದೀಗ ಎರಡನೇ ಅಲೆಯಲ್ಲಿ ರಾಜ್ಯಾದ್ಯಂತ ಅದರಲ್ಲೂ ಬೆಂಗಳೂರಿನಲ್ಲಿ ಬ್ಲಾಕ್‌ ಫಂಗಸ್‌ ಪ್ರಕರಣಗಳು ಹೆಚ್ಚಾಗುತ್ತಿವೆ. ನಗರದ ಟ್ರಸ್ಟ್‌ವೆಲ್‌ ಆಸ್ಪತ್ರೆ ಒಂದರಲ್ಲೇ 38 ಪ್ರಕರಣ ದೃಢಪಟ್ಟಿದೆ. ಅಲ್ಲದೆ ವಿಕ್ಟೋರಿಯಾದ ಟ್ರಾಮಾ ಕೇರ್‌ನಲ್ಲಿ ಎರಡು ಶಂಕಿತ ಪ್ರಕರಣಗಳು ವರದಿಯಾಗಿವೆ. ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಎಚ್ಚರ ವಹಿಸುವಂತೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

"

ವಿವಿಧ ರೋಗಗಳಿಂದ ರೋಗನಿರೋಧಕ ಶಕ್ತಿ ಕ್ಷೀಣಿಸಿರುವ ಕೊರೋನಾ ಸೋಂಕಿತರಲ್ಲಿ ಬ್ಲಾಕ್‌ ಫಂಗಸ್‌ (ಕಪ್ಪು ಶಿಲೀಂದ್ರ) ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಜ್ಯಗಳಿಗೆ ರೋಗ ಪತ್ತೆ, ಚಿಕಿತ್ಸೆ ಕುರಿತು ಶನಿವಾರ ಮಾರ್ಗಸೂಚಿ ರವಾನಿಸಿದೆ.

ಆದರೆ, ರಾಜ್ಯದಲ್ಲಿ ನವೆಂಬರ್‌ ತಿಂಗಳಲ್ಲಿ ದೇಶದಲ್ಲೇ ಮೊದಲ ಬಾರಿಗೆ ಇಂತಹ ಅಧ್ಯಯನವನ್ನು ಬಿಎಂಸಿಆರ್‌ಐನ ಮಿಂಟೋ ಆಸ್ಪತ್ರೆ ವೈದ್ಯರು ಕೈಗೊಂಡಿದ್ದರು. ಮಿಂಟೋ ಆಸ್ಪತ್ರೆಯ ಡಾ. ಸುಜಾತಾ ರಾಥೋಡ್‌, ಡಾ.ಕೆ. ಕಿರಣ್‌ಕುಮಾರ್‌ ನೇತೃತ್ವದ ತಂಡ ನಡೆಸಿದ್ದ ಅಧ್ಯಯನದಲ್ಲಿ ಎಂಟು ಮಂದಿಗೆ ಶಿಲೀಂಧ್ರ ಸೋಂಕು ದೃಢಪಟ್ಟಿತ್ತು. ಈ ಪೈಕಿ ಬಹುತೇಕರಿಗೆ 60 ವರ್ಷ ಮೇಲ್ಪಟ್ಟು ವಯಸ್ಸಾಗಿತ್ತು. ಇದರಲ್ಲಿ 39 ಹಾಗೂ 60 ವರ್ಷದ ಇಬ್ಬರು ಮಾತ್ರ ಬದುಕುಳಿದಿದ್ದು, ಇವರಿಗೂ ಸಂಪೂರ್ಣ ದೃಷ್ಟಿದೋಷ ಉಂಟಾಗಿದೆ.

ಏನಿದು ಬ್ಲ್ಯಾಕ್‌ ಫಂಗಸ್‌?

ಕೆಲವು ಕೊರೋನಾ ಸೋಂಕಿತರು ಸ್ಟಿರಾಯ್ಡ್‌ ತೆಗೆದುಕೊಂಡಿದ್ದರೆ ಅಥವಾ ದೀರ್ಘ ಕಾಲ ವೆಂಟಿಲೇಟರ್‌ನಲ್ಲಿದ್ದರೆ ಅವರಿಗೆ ಬ್ಲ್ಯಾಕ್‌ ಫಂಗಸ್‌ ಸೋಂಕು ಅಂಟಬಹುದು. ರೋಗನಿರೋಧಕ ಶಕ್ತಿ ಕಮ್ಮಿ ಇರುವವರಿಗೆ ಈ ಸಾಧ್ಯತೆ ಹೆಚ್ಚು. ಈ ಸೋಂಕಿನಿಂದ ಕಣ್ಣು, ಶ್ವಾಸಕೋಶ, ಮೆದುಳಿನ ಮೇಲೆ ಪರಿಣಾಮ ಉಂಟಾಗುತ್ತದೆ. ದೃಷ್ಟಿಹೋಗಬಹುದು ಅಥವಾ ಸಾವೂ ಸಂಭವಿಸಬಹುದು.

ಪ್ರಾಣಾಪಾಯ ತರುವ ಸೋಂಕು

ಗುಣಮುಖರಾಗುತ್ತಿರುವ ಕೆಲ ಕೊರೋನಾ ಸೋಂಕಿತರಲ್ಲಿ ಕಪ್ಪು ಶಿಲೀಂದ್ರ ಸೋಂಕು ಅಂದರೆ ಮ್ಯೂಕೋರ್‌ಮಯೋಸಿಸ್‌ ಎಂಬ ಅಪರೂಪದ ಕಾಯಿಲೆ ಕಾಣಿಸಿಕೊಳ್ಳುತ್ತಿದೆ. ಇದನ್ನು‘ಕಪ್ಪು ಶಿಲೀಂದ್ರ’ (ಬ್ಲಾಕ್‌ ಫಂಗಸ್‌) ಎಂದೂ ಕರೆಯಾಗುತ್ತದೆ. ಕಣ್ಣು, ಶ್ವಾಸಕೋಶ, ಮೆದುಳಿನ ಮೇಲೆ ಪರಿಣಾಮ ಬೀರುತ್ತಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ, ಅನಾರೋಗ್ಯ ಸಮಸ್ಯೆಗಳಿಗೆ ಸ್ಟಿರಾಯ್ಡ್‌ನಂತಹ ಔಷಧ ಹೆಚ್ಚು ತೆಗೆದುಕೊಂಡಿರುವ, ಕೊರೋನಾ ಸೋಂಕಿನಿಂದಾಗಿ ದೀರ್ಘ ಕಾಲ ವೆಂಟಿಲೇಟರ್‌ನಲ್ಲಿದ್ದವರಿಗೆ ಇಂತಹ ಸೋಂಕು ಕಾಣಿಸಿಕೊಳ್ಳುತ್ತಿದೆ. ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಇದು ಪ್ರಾಣಾಪಾಯವಾಗಿದ್ದು, ಕೆಲವೊಮ್ಮೆ ಬದುಕುಳಿದರೂ ಕಣ್ಣಿನ ದೃಷ್ಟಿಹೋಗುತ್ತದೆ ಎಂದು ಮಿಂಟೋ ಕಣ್ಣಿನ ಆಸ್ಪತ್ರೆ ನಿರ್ದೇಶಕಿ ಡಾ.ಬಿ.ಎಲ್‌. ಸುಜಾತಾ ರಾಥೋಡ್‌ ಎಚ್ಚರಿಸಿದ್ದಾರೆ.

ರೋಗ ಲಕ್ಷಣಗಳೇನು?

ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆ ನಿರ್ದೇಶಕ ಡಾ.ಸಿ.ನಾಗರಾಜ್‌ ಪ್ರಕಾರ, ಮೂಗಿನ ಸುತ್ತಲೂ ಕಪ್ಪಾಗುವುದು, ಕೆನ್ನೆಯ ಮೂಳೆಯಲ್ಲಿ ನೋವು, ಮುಖದ ಒಂದು ಭಾಗದಲ್ಲಿ ನೋವು, ಮರಗಟ್ಟುವಿಕೆ. ಮೂಗಿನ ಮೇಲೆ ಕಪ್ಪು ಬಣ್ಣ, ಹಲ್ಲುಗಳು ಸಡಿಲವಾಗುವುದು, ಮಸುಕಾದ ಅಥವಾ ಎರಡು ದೃಷ್ಟಿಜೊತೆಗೆ ನೋವು, ಥ್ರಂಬೋಸಿಸ್‌, ನೆಕ್ರೋಸಿಸ್‌, ಚರ್ಮಕ್ಕೆ ಹಾನಿ, ಎದೆನೋವು, ಶ್ವಾಸಕೋಶದಲ್ಲಿ ನೀರು ಸೇರಿಕೊಳ್ಳುವುದು (ಫ್ಲೆರಲ್‌ ಎಪ್ಯೂಷನ್‌), ಉಸಿರಾಟದ ಲಕ್ಷಣಗಳು ಹದಗೆಡುವುದು ಕಂಡ ಕೂಡಲೇ ಎಚ್ಚೆತ್ತುಕೊಳ್ಳಬೇಕು..

ಸೈಲೆಂಟ್‌ ಕಿಲ್ಲರ್‌!

ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಈ ರೋಗ ಹೆಚ್ಚಾಗುತ್ತದೆ. ಇದು ಸೈಲೆಂಟ್‌ ಕಿಲ್ಲರ್‌ನಂತೆ ರೋಗಿಯನ್ನು ಸಾಯಿಸುತ್ತದೆ ಎಂದು ಟ್ರಸ್ಟ್‌ವೆಲ್‌ ಆಸ್ಪತ್ರೆಯ ಬ್ಲಾಕ್‌ ಫಂಗಸ್‌ ವಿಶೇಷ ಚಿಕಿತ್ಸಾ ವಿಭಾಗದ ಮುಖ್ಯಸ್ಥ ದೀಪಕ್‌ ಹಲ್ದೀಪುರ ಹೇಳುತ್ತಾರೆ.

ಉಳಿದಂತೆ 8 ಜಿಲ್ಲೆಯಲ್ಲಿ ಎರಡಂಕಿಯಲ್ಲಿ ಕೋವಿಡ್‌ ಸಾವು ವರದಿಯಾಗಿದೆ. ರಾಜ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ ಶೇ.1 ಮೀರಿದ ಸಾವಿನ ದರ ದಾಖಲಾಗುತ್ತಿದೆ.

ಈ ಮಧ್ಯೆ ಮೇ 2ರ ಬಳಿಕ ಹೊಸ ಸೋಂಕಿನ ಪ್ರಕರಣ 40 ಸಾವಿರದ ಗಡಿಯೊಳಗೆ ಬಂದಿದೆ. ಆದರೆ ಕೋವಿಡ್‌ ಪರೀಕ್ಷೆಯ ಪ್ರಮಾಣ ಕೂಡ ಸುಮಾರು 30 ರಿಂದ 40 ಸಾವಿರದಷ್ಟುಕಡಿಮೆ ಆಗಿದೆ. ಸೋಮವಾರ 1.24 ಲಕ್ಷ ಕೋವಿಡ್‌ ಪರೀಕ್ಷೆ ನಡೆದಿದೆ. ರಾಜ್ಯದಲ್ಲಿ ಈವರೆಗೆ 19.73 ಲಕ್ಷ ಕೋವಿಡ್‌ ಪ್ರಕರಣ ದಾಖಲಾಗಿದ್ದು 13.83 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಒಟ್ಟು 19,372 ಮಂದಿ ಮರಣವನ್ನಪ್ಪಿದ್ದಾರೆ. ಈವರೆಗೆ ಒಟ್ಟು 2.71 ಕೋಟಿ ಕೋವಿಡ್‌ ಪರೀಕ್ಷೆ ನಡೆದಿದೆ.

"

ಪತ್ತೆ ಹೇಗೆ?

ರೋಗ ಲಕ್ಷಣ ಉಳ್ಳವರಿಗೆ ವೈದ್ಯರು ಉಸಿರಾಟ ವ್ಯವಸ್ಥೆಯಿಂದ ದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸುತ್ತಾರೆ. ಅಥವಾ ಅಂಗಾಂಶ ಬಯಾಪ್ಸಿ, ಶ್ವಾಸಕೋಶದ, ಸೈನಸ್‌ನ ಸಿ.ಟಿ. ಸ್ಕಾ್ಯನ್‌ ಇತ್ಯಾದಿ ನಡೆಸುವ ಮೂಲಕ ಪತ್ತೆ ಹಚ್ಚಲಾಗುವುದು.

ಚಿಕಿತ್ಸೆ ಏನು?

ಬೇಗ ಎಚ್ಚೆತ್ತುಕೊಂಡರೆ ಚಿಕಿತ್ಸೆ ಇದೆ, ಆ್ಯಂಪೊಟೆರಿಸಿನ್‌ ಬಿ ಮತ್ತು ಆ್ಯಂಟಿಫಂಗಲ್‌ ಥೆರಪಿಯ ಮೊದಲು ಸಾಮಾನ್ಯ ಲವಣಯುಕ್ತ (ಐವಿ) ದ್ರಾವಣದ ಚಿಕಿತ್ಸೆಯನ್ನು ಕನಿಷ್ಠ 4-6 ವಾರ ನೀಡಲಾಗುವುದು.ಮಧುಮೇಹ ನಿಯಂತ್ರಿಸುವುದು, ಸ್ಟಿರಾಯ್ಡ್‌ ಬಳಕೆ ಕಡಿಮೆ ಮಾಡುವುದು. ಇಮ್ಯುನೋಮಾಡ್ಯುಲೇಟಿಂಗ್‌ ಔಷಧಿಗಳನ್ನು ನಿಲ್ಲಿಸುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಡಾ.ಸಿ.ನಾಗರಾಜು ಹೇಳುತ್ತಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona