ವಿಧಾನಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದ ಕುರಿತು ವಿವರಣೆ ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಾಸಕಾಂಗ ಪಕ್ಷದ ನಾಯಕ ಆರ್.ಅಶೋಕ್ ದೆಹಲಿಗೆ ತೆರಳಲಿದ್ದಾರೆ. ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಲಿದ್ದಾರೆ.
ಬೆಂಗಳೂರು (ಜೂ.20): ವಿಧಾನಪರಿಷತ್ ಚುನಾವಣೆ(Assembly elections)ಯಲ್ಲಿ ನಡೆದ ಅಡ್ಡ ಮತದಾನ(Cross voting)ದ ಕುರಿತಂತೆ ವಿವರಣೆ ನೀಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ(BJP State President BY Vijayendra) ಹಾಗೂ ಶಾಸಕಾಂಗ ಪಕ್ಷದ ನಾಯಕ(Leader of the Legislature Party) ಆರ್.ಅಶೋಕ್(R Ashok) ಅವರು ದೆಹಲಿಗೆ ತೆರಳಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್(nitin nabeen) ಅವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ.
ಮಂಗಳವಾರ ಸಂಜೆ ಭೇಟಿ ಮಾಡಲು ನಿತಿನ್ ನವೀನ್ ಅವರು ಸಮಯ ನೀಡಿದ್ದು, ರಾಜ್ಯದ ಉಭಯ ನಾಯಕರು ಸೋಮವಾರ ಸಂಜೆ ಅಥವಾ ಮಂಗಳವಾರ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶುಕ್ರವಾರ ಬೆಳಗ್ಗೆ ನಿತಿನ್ ನವೀನ್ ಅವರು ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ಸಂಪರ್ಕಿಸಿ ಅಡ್ಡಮತದಾನ ಬಗ್ಗೆ ವಿಚಾರಿಸಿದರು. ಆ ವೇಳೆ ದೆಹಲಿಗೆ ಬಂದು ಖುದ್ದಾಗಿ ವಿವರಣೆ ನೀಡಲು ಭೇಟಿಗೆ ಸಮಯಾವಕಾಶ ನೀಡುವಂತೆ ವಿಜಯೇಂದ್ರ ಅವರು ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ನಿತಿನ್ ನವೀನ್ ಅವರು ಸಂಜೆ ಹೊತ್ತಿಗೆ ತಮ್ಮ ಆಪ್ತ ಸಹಾಯಕರ ಮೂಲಕ ಮಂಗಳವಾರ ಆಗಮಿಸುವಂತೆ ರಾಜ್ಯದ ನಾಯಕರಿಗೆ ಸೂಚಿಸಿದರು ಎಂದು ಮೂಲಗಳು ತಿಳಿಸಿವೆ.
ಇದಕ್ಕೂ ಮೊದಲು ಶುಕ್ರವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಯಾರು ಅಡ್ಡ ಮತದಾನ ಮಾಡಿ ಆಟ ಆಡಿರಬಹುದು ಎಂಬ ಮಾಹಿತಿ ಸಿಕ್ಕಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಮಾಹಿತಿ ನೀಡಲು ಭೇಟಿ ಮಾಡಲು ಅವಕಾಶಕ್ಕೆ ಮನವಿ ಮಾಡಿದ್ದೇನೆ. ಅವರು ಯಾವಾಗ ಅವಕಾಶ ಕೊಟ್ಟರೂ ಭೇಟಿ ಮಾಡಿ ವಿವರ ನೀಡಲಿದ್ದೇನೆ ಎಂದು ವಿವರಿಸಿದರು.


