ವಿದ್ಯುತ್ ಶುಲ್ಕ ಹೆಚ್ಚಳಕ್ಕೆ ಬಿಜೆಪಿ ಹೊಣೆ: ಸಚಿವ ಜಾರ್ಜ್
ವಿದ್ಯುತ್ ಬೆಲೆ ಏರಿಕೆ ಬಗ್ಗೆ ಬಿಜೆಪಿಯವರು ಪ್ರತಿಭಟನೆ ನಡೆಸುತ್ತಿರುವುದಕ್ಕೆ ನನ್ನ ವಿರೋಧ ಇಲ್ಲ. ಹೀಗಾಗಿಯೇ ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸುದ್ದಿಗಾರರು ಈ ಬಗ್ಗೆ ಪ್ರಶ್ನಿಸುತ್ತಿರುವುದಕ್ಕೆ ವಾಸ್ತವ ಬಿಚ್ಚಿಡುತ್ತಿದ್ದೇನೆ: ಇಂಧನ ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು(ಜೂ.08): ಈ ತಿಂಗಳು ವಿದ್ಯುತ್ ಶುಲ್ಕ ಹೆಚ್ಚಳವಾಗಿರುವುದಕ್ಕೆ ನಮ್ಮ ಸರ್ಕಾರ ಹೊಣೆಯಲ್ಲ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರುವ ಮೊದಲೇ ಏ.1ರಿಂದ ಪೂರ್ವಾನ್ವಯವಾಗುವಂತೆ ದರ ಹೆಚ್ಚಳ ಮಾಡಲಾಗಿದೆ. ಹೀಗಾಗಿ ಬಿಜೆಪಿ ಅವಧಿಯಲ್ಲಾದ ಹೆಚ್ಚಳಕ್ಕೆ ಬಿಜೆಪಿಯೇ ಪ್ರತಿಭಟನೆ ಮಾಡುತ್ತಿರುವುದು ವಿಪರ್ಯಾಸ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಕಿಡಿ ಕಾರಿದ್ದಾರೆ.
ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯುತ್ ಬೆಲೆ ಏರಿಕೆ ಬಗ್ಗೆ ಬಿಜೆಪಿಯವರು ಪ್ರತಿಭಟನೆ ನಡೆಸುತ್ತಿರುವುದಕ್ಕೆ ನನ್ನ ವಿರೋಧ ಇಲ್ಲ. ಹೀಗಾಗಿಯೇ ಈ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಸುದ್ದಿಗಾರರು ಈ ಬಗ್ಗೆ ಪ್ರಶ್ನಿಸುತ್ತಿರುವುದಕ್ಕೆ ವಾಸ್ತವ ಬಿಚ್ಚಿಡುತ್ತಿದ್ದೇನೆ ಎಂದು ಹೇಳಿದರು.
200 ಯೂನಿಟ್ ವಿದ್ಯುತ್ ಫ್ರೀ: ಜು.1ರಿಂದ ಜಾರಿ
ಮೇ 12ರಂದು ಏ.1ರಿಂದ ಪೂರ್ವಾನ್ವಯವಾಗುವಂತೆ ವಿದ್ಯುತ್ ಹಾಗೂ ನಿಗದಿತ ಶುಲ್ಕ ಹೆಚ್ಚಳ ಮಾಡಲಾಗಿದೆ. ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬರುವ ಮೊದಲೇ ಕೆಇಆರ್‌ಸಿ ಆದೇಶ ಹೊರಡಿಸಿದೆ. ಈ ಹೆಚ್ಚಳಕ್ಕೆ ನಾವು ಹೊಣೆಯಾಗುವುದಿಲ್ಲ. ದರ ಹೆಚ್ಚಳಕ್ಕೆ ಪ್ರಸ್ತಾಪ ಮಾಡಿದ್ದು ಹಿಂದಿನ ಸರ್ಕಾರ ಹೀಗಾಗಿ ಬಿಜೆಪಿಯೇ ಇದಕ್ಕೆ ಕಾರಣ ಎಂದು ಸ್ಪಷ್ಟಪಡಿಸಿದರು.
ಬಿಜೆಪಿಯ ಅವಧಿಯಲ್ಲಿ ದರ ಹೆಚ್ಚಳ ಮಾಡಿರುವ ಬಗ್ಗೆಯೂ ನಾವು ಟೀಕಿಸುವುದಿಲ್ಲ. ಕೇಂದ್ರ ಮಟ್ಟದಲ್ಲಿ ಕಲ್ಲಿದ್ದಲು ಬೆಲೆ ಹೆಚ್ಚಳ ಮಾಡಲಾಗಿದೆ. ಮೊದಲು ಆಮದು ಕಲ್ಲಿದ್ದಲಿಗೆ ಒಂದು ದರ ಹಾಗೂ ದೇಶದಲ್ಲೇ ದೊರೆಯುವ ಕಲ್ಲಿದ್ದಲಿಗೆ ಒಂದು ದರ ನಿಗದಿ ಮಾಡಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಎರಡನ್ನೂ ಬ್ಲೆಂಡ್ ಮಾಡಿದೆ. ಹೀಗಾಗಿ ದರ ಹೆಚ್ಚಳವಾಗಿದೆ ಎಂದು ದೂರಿದರು.
ಇನ್ನು ಉಡುಪಿ ವಿದ್ಯುತ್ ಉತ್ಪಾದನೆ ಘಟಕಕ್ಕೆ ಬಿಜೆಪಿ ಸರ್ಕಾರ ಕಾಲಕಾಲಕ್ಕೆ ವಿದ್ಯುತ್ ಶುಲ್ಕ ಪಾವತಿ ಮಾಡಿಲ್ಲ. ಅವರು ಹೈಕೋರ್ಚ್ ಮೊರೆ ಹೋಗಿ ಒಂದೇ ಸಲ 1,400 ಕೋಟಿ ರು. ಕಟ್ಟಬೇಕಾಗಿ ಬಂತು. ಹೀಗಾಗಿ ಸಾರ್ವಜನಿಕರ ವಿದ್ಯುತ್ ದರ ಹೆಚ್ಚಳಕ್ಕೆ ಪ್ರಸ್ತಾಪ ಮಾಡಿದ್ದರು. ಆಗಿಂದಾಗ್ಗೆ ಬಿಜೆಪಿ ಸರ್ಕಾರ ಘಟಕಕ್ಕೆ ಹಣ ಪಾವತಿಸಿದ್ದರೆ ಈ ಹೊರೆ ಬರುತ್ತಿರಲಿಲ್ಲ ಎಂದು ಕಿಡಿ ಕಾರಿದರು.