ರಾಜ್ಯ ಕಾಂಗ್ರೆಸ್‌ ಸರ್ಕಾರದ ಜನವಿರೋಧಿ ಮತ್ತು ರೈತ ವಿರೋಧಿ ನೀತಿಯನ್ನು ಖಂಡಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಬೃಹತ್‌ ಪ್ರತಿಭಟನೆ ನಡೆಸಿತು.

ಬೆಂಗಳೂರು (ಸೆ.9) :  ರಾಜ್ಯ ಕಾಂಗ್ರೆಸ್‌ ಸರ್ಕಾರದ ಜನವಿರೋಧಿ ಮತ್ತು ರೈತ ವಿರೋಧಿ ನೀತಿಯನ್ನು ಖಂಡಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಬೃಹತ್‌ ಪ್ರತಿಭಟನೆ ನಡೆಸಿತು. ಶುಕ್ರವಾರ ನಗರದ ಫ್ರೀಡಂಪಾರ್ಕ್ನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಆರ್‌.ಅಶೋಕ್‌, ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ಬೆಂಗಳೂರಿನ ಸಂಸದರು, ಶಾಸಕರು ಇತರರು ಭಾಗವಹಿಸಿದ್ದರು.

ರಾಜ್ಯಾದ್ಯಂತ ಮಳೆ ಇಲ್ಲದೆ ಬರ ಆವರಿಸಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಸರ್ಕಾರ ಸ್ಪಂದಿಸುತ್ತಿಲ್ಲ. 198ಕ್ಕಿಂತ ಹೆಚ್ಚು ತಾಲೂಕುಗಳಲ್ಲಿ ಬರದ ದುಸ್ಥಿತಿ ಇದೆ. ಆದರೆ, ಬರಪೀಡಿತ ತಾಲೂಕುಗಳನ್ನು ರಾಜ್ಯ ಸರ್ಕಾರ ಇನ್ನೂ ಘೋಷಿಸಿಲ್ಲ ಮತ್ತು ಬರ ಪರಿಹಾರ ಕಾಮಗಾರಿಗಳನ್ನು ಕೈಗೊಂಡಿಲ್ಲ ಎಂದು ಬಿಜೆಪಿ ಮುಖಂಡರು ಕಿಡಿಕಾರಿದರು.

ಕಾವೇರಿ ನೀರು ಹೋರಾಟ: ಬೆಂಗಳೂರು, ಮೈಸೂರು ಜನರು ನೀರಿಲ್ಲದೇ ಪೇಪರ್‌ ಬಳಸುವ ಸ್ಥಿತಿ ಬರುತ್ತದೆ

ಯಡಿಯೂರಪ್ಪ ಮಾತನಾಡಿ, ಭ್ರಷ್ಟಸರ್ಕಾರವು ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಹಕ್ಕನ್ನು ಕಳೆದುಕೊಂಡಿದೆ. ಇದು ಜನವಿರೋಧಿ ಮತ್ತು ರೈತವಿರೋಧಿ ಸರ್ಕಾರ ಆಗಿದೆ. ಸರ್ಕಾರದ ವಿರುದ್ಧ ಹೋರಾಟದಲ್ಲಿ ಜನರೆಲ್ಲರೂ ಒಗ್ಗಟ್ಟಾಗಿ ಭಾಗವಹಿಸಬೇಕು. ಕಾಂಗ್ರೆಸ್‌ ಸರ್ಕಾರವು ಜನಹಿತವನ್ನು ಸಂಪೂರ್ಣವಾಗಿ ಮರೆತಿದೆ. ಇದರ ವಿರುದ್ಧ ಎಲ್ಲಾ ತಾಲೂಕು ಮತ್ತು ಜಿಲ್ಲಾ ಕೇಂದ್ರದಲ್ಲಿ ಹೋರಾಟ ನಡೆಸಲಾಗುತ್ತಿದೆ. ವಿದ್ಯುತ್‌ ಅಭಾವದಿಂದ ರೈತರ ಪಂಪ್‌ಸೆಟ್‌ ಆನ್‌ ಮಾಡಲಾಗುತ್ತಿಲ್ಲ. ದಿನಕ್ಕೆ 3-4 ಗಂಟೆ ವಿದ್ಯುತ್‌ ಸಹ ಕೊಡುತ್ತಿಲ್ಲ. ನೀರಾವರಿ ಯೋಜನೆಗಳು ಸ್ಥಗಿತಗೊಂಡಿವೆ. ಜನಹಿತವನ್ನು ಸಂಪೂರ್ಣ ಮರೆತ ಭ್ರಷ್ಟಸರ್ಕಾರ ವಿರುದ್ಧ ಹೋರಾಟ ಪ್ರಾರಂಭವಾಗಿದೆ ಎಂದರು.

ಕಾವೇರಿ ನದಿಯಲ್ಲಿ ನೀರಿನ ಕೊರತೆ ಕುರಿತು ಕಾವೇರಿ ಪ್ರಾಧಿಕಾರಕ್ಕೆ ತಿಳಿಸುವಲ್ಲಿ ಈ ಸರ್ಕಾರವು ವಿಫಲವಾಗಿದೆ. ನಾವು ಕಾವೇರಿ ನೀರಿನ ವಿಚಾರವಾಗಿ ಹೋರಾಟವನ್ನು ತೀವ್ರಗೊಳಿಸಲಿದ್ದೇವೆ. ರೈತರ ಪರವಾಗಿ ನಿಲ್ಲುತ್ತೇವೆ. ರಾಜ್ಯದ 180-190 ತಾಲೂಕುಗಳು ಬರದ ಪರಿಸ್ಥಿತಿ ಅನುಭವಿಸುತ್ತಿದ್ದು, ದನಕರುಗಳಿಗೆ ಮೇವಿಲ್ಲದ ದುಸ್ಥಿತಿ ಇದೆ. ರಾಜ್ಯದ ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ರಾಜ್ಯ ಸರ್ಕಾರವು ರಾಜ್ಯವನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲು ಮೀನಾಮೇಷ ಮಾಡುತ್ತಿದೆ. ಇದು ಅತ್ಯಂತ ಖಂಡನೀಯ ಎಂದು ಸರ್ಕಾರ ವಿರುದ್ಧ ಕಿಡಿಕಾರಿದರು.

ವೈಫಲ್ಯ ಮುಚ್ಚಲು ಅಕ್ಕಿ ವಿಚಾರದಲ್ಲಿ ಸುಳ್ಳು ಆರೋಪ: ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರತಿಭಟನೆ

ವಿದ್ಯುತ್‌ ಬಿಲ್‌ ದುಪ್ಪಟ್ಟಾಗಿದ್ದು, ಎರಡು ಸಾವಿರ ರು.ಬಿಲ್‌ ಇದ್ದದ್ದು, ನಾಲ್ಕು ಸಾವಿರ ರು.ಆಗಿದೆ. ವಿದ್ಯುತ್‌ ದರವನ್ನು ಏಕಾಏಕಿ ಹೆಚ್ಚಳ ಮಾಡಿದ್ದೇ ಇದಕ್ಕೆ ಕಾರಣವಾಗಿದೆ. ಒಂದು ಕಡೆ ಜನರಿಗೆ ಸೌಕರ್ಯ ಕೊಡುವುದಾಗಿ ಹೇಳಿ, ಇನ್ನೊಂದೆಡೆ ಜನರ ಜೀವನ ಜತೆ ಈ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಹೇಳಿದರು