ಬೆಂಗಳೂರು :  ಬಿಜೆಪಿ ನಾಯಕರು ಇಲ್ಲಿಯವರೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ 25ರಿಂದ 30 ಶಾಸಕರಿಗೆ ಕೋಟಿ ಕೋಟಿ ರು. ಆಮಿಷ ವೊಡ್ಡಿದ್ದಾರೆ. ಮಂಗಳವಾರ ಕೂಡ ಜೆಡಿಎಸ್‌ ಶಾಸಕರೊಬ್ಬರ ಮನೆಗೆ 30 ಕೋಟಿ ರು. ಹಣ ತೆಗೆದುಕೊಂಡು ಹೋಗಿದ್ದಾರೆ. ಮತ್ತೊಬ್ಬ ಶಾಸಕರ ಮನೆಯಲ್ಲಿ ಐದು ಕೋಟಿ ರು. ಹಣ ಇಟ್ಟು ಬಂದಿದ್ದಾರೆ.  ಹೀಗೆಂದು ಕಾಂಗ್ರೆಸ್‌ ಶಾಸ​ಕಾಂಗ ಪಕ್ಷದ ನಾಯಕ ಸಿದ್ದ​ರಾ​ಮಯ್ಯ ಗಂಭೀರ ಆರೋಪ ಮಾಡಿ​ದ್ದಾ​ರೆ.

ಬಿಜೆಪಿಯವರು 30 ಕೋಟಿ ರು. ನೀಡಲು ಬಂದರೂ ಜೆಡಿಎಸ್‌ನ ಶಾಸಕರೊಬ್ಬರು ಕೈ ಮುಗಿದು ಆ ಹಣವನ್ನು ವಾಪಸ್‌ ತೆಗೆದುಕೊಂಡು ಹೋಗುವಂತೆ ಹೇಳಿದ್ದಾರೆ. ಮತ್ತೊಬ್ಬ ಶಾಸಕರ ಮನೆಯಲ್ಲಿ ಬೇಡವೆಂದರೂ ಐದು ಕೋಟಿ ರು. ಹಣ ಇಟ್ಟು, ಆಮೇಲೆ ಮಾತನಾಡೋಣ ಎಂದು ಹೇಳಿ ಬಂದಿದ್ದಾರೆ. ಶಾಸಕರನ್ನು ಕೊಂಡುಕೊಳ್ಳಲು ಇಷ್ಟುದೊಡ್ಡ ಮೊತ್ತದ ಆಮಿಷವೊಡ್ಡು​ತ್ತಿ​ರುವ ಬಿಜೆಪಿಯವರಿಗೆ ಹಣ ಎಲ್ಲಿಂದ ಬರುತ್ತಿದೆ ಎಂದು ಅವರು ಪ್ರಶ್ನಿಸಿದರು.

ಆಪರೇಷನ್‌ ಕಮಲಕ್ಕೆ ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್‌ ಶಾ ಕೂಡ ಕೈಜೋಡಿದ್ದಾರೆ. ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಇದರ ಹಿಂದೆ ಇದ್ದಾರೆ. ಪ್ರತಿ ಶಾಸಕರಿಗೂ 30 ಕೋಟಿ ರು.ವರೆಗೂ ಆಮಿಷವೊಡ್ಡಲಾಗುತ್ತಿದೆ. 

ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕರಾವಳಿ ಭಾಗದಲ್ಲಿ ಕೋಮುವಾದದ ವಿಷ ಬೀಜ ಬಿತ್ತಲಾಗುತ್ತಿದೆ. ಇಂತಹ ಕೋಮುವಾದಿ ಪಕ್ಷವನ್ನು ಕೇಂದ್ರದಲ್ಲಿ ಅಧಿಕಾರದಿಂದ ತೊಲಗಿಸಲು ರಾಜ್ಯದಲ್ಲಿ ಜೆಡಿಎಸ್‌ ಮೈತ್ರಿಯೊಂದಿಗೆ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಬೇಕಾಗಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಕನಿಷ್ಠ 25 ಕ್ಷೇತ್ರಗಳನ್ನು ಗೆಲ್ಲುವ ಗುರಿ ನಮ್ಮದಾಗಿದೆ ಎಂದರು.