ಕತ್ತಿ ಪ್ರತ್ಯೇಕ ರಾಜ್ಯ ಹೇಳಿಕೆಗೆ ಬಿಜೆಪಿಗರಿಂದಲೇ ಆಕ್ಷೇಪ
* ಸಚಿವ, ಶಾಸಕರಿಂದ ಕತ್ತಿ ಮಾತಿಗೆ ಖಂಡನೆ
* ಪ್ರಸ್ತಾಪ ಇಲ್ಲ: ಸಿಎಂ ಬೊಮ್ಮಾಯಿ
* ಕತ್ತಿ ಹೇಳಿಕೆಗೆ ನೇರ ಅಸಮಾಧಾನ ಹೊರಹಾಕಿದ ಡಾ.ಅಶ್ವತ್ಥ ನಾರಾಯಣ
ಬೆಂಗಳೂರು(ಜೂ.24): ‘ಪ್ರಧಾನಿ ಮೋದಿ ಅವರು ಉತ್ತರ ಕರ್ನಾಟಕವನ್ನು ಪ್ರತ್ಯೇಕ ರಾಜ್ಯ ಮಾಡಲಿದ್ದಾರೆ’ ಎಂಬ ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಬಿಜೆಪಿ ಮುಖಂಡರಿಂದಲೇ ಗುರುವಾರ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಕತ್ತಿ ಅವರ ಪ್ರತ್ಯೇಕ ರಾಜ್ಯ ಕುರಿತ ಹೇಳಿಕೆಯನ್ನು ಆರೂವರೆ ಕೋಟಿ ಕನ್ನಡಿಗರ ಪರ ಖಂಡಿಸುತ್ತೇನೆಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಅಸಮಾಧಾನ ಹೊರಹಾಕಿದರೆ, ಸರ್ಕಾರದ ಮುಂದೆ ಪ್ರತ್ಯೇಕ ರಾಜ್ಯದ ಪ್ರಸ್ತಾಪವೇ ಇಲ್ಲ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಪ್ರಸ್ತಾಪ ಇಲ್ಲ:
ಸಚಿವ ಉಮೇಶ್ ಕತ್ತಿ ಹೇಳಿಕೆ ಕುರಿತು ದೆಹಲಿಯಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಉಮೇಶ್ ಕತ್ತಿ ಹಲವು ಬಾರಿ ಈ ರೀತಿ ಹೇಳಿಕೆ ನೀಡಿದ್ದಾರೆ. ಸರ್ಕಾರದ ಮುಂದೆಯಂತೂ ಆ ರೀತಿಯ ಯಾವುದೇ ಪ್ರಸ್ತಾಪ ಇಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಸರ್ಕಾರಕ್ಕೂ ಕತ್ತಿ ಹೇಳಿಕೆಗೂ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಮತ್ತೆ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಕೂಗೆಬ್ಬಿಸಿದ ಸಚಿವ ಕತ್ತಿ..!
ಇನ್ನು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಅವರಂತೂ ಕತ್ತಿ ಹೇಳಿಕೆಗೆ ನೇರ ಅಸಮಾಧಾನ ಹೊರಹಾಕಿದ್ದು, ಜವಾಬ್ದಾರಿ ಸ್ಥಾನದಲ್ಲಿರುವವರು ಈ ರೀತಿ ಹಗುರವಾದ ಹೇಳಿಕೆ ನೀಡಬಾರದು ಎಂದು ಮನವಿ ಮಾಡಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಇಂಥ ಚಿಂತನೆ ಇರಲ್ಲ, ಈ ವಿಚಾರದಲ್ಲಿ ಪ್ರಧಾನಿ ಅವರ ಹೆಸರು ಎಳೆದು ತರುವ ಕೆಲಸ ಮಾಡಬೇಡಿ. ಆರುಕೋಟಿ ಕನ್ನಡಿಗರ ಪರವಾಗಿ ನಾನು ಪ್ರತ್ಯೇಕ ರಾಜ್ಯದ ಕುರಿತ ಹೇಳಿಕೆಯನ್ನು ಖಂಡಿಸುತ್ತೇನೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಈ ಮಧ್ಯೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕ ಶ್ರೀಮಂತ ಪಾಟೀಲ ಕೂಡ ಪ್ರತ್ಯೇಕ ರಾಜ್ಯದ ಹೇಳಿಕೆಯನ್ನು ಪರೋಕ್ಷವಾಗಿ ವಿರೋಧಿಸಿದ್ದು, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂಬುದು ಕತ್ತಿ ಅವರ ವೈಯಕ್ತಿಕ ಅಭಿಪ್ರಾಯ. ಕರ್ನಾಟಕ ಅಖಂಡವಾಗಿಯೇ ಉಳಿಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಪ್ರಸ್ತಾಪ ಇಲ್ಲ: ಸಿಎಂ
ಉಮೇಶ್ ಕತ್ತಿ ಹಲವು ಬಾರಿ ಈ ರೀತಿ ಹೇಳಿಕೆ ನೀಡಿದ್ದಾರೆ. ಸರ್ಕಾರದ ಮುಂದೆಯಂತೂ ಆ ರೀತಿಯ ಯಾವುದೇ ಪ್ರಸ್ತಾಪ ಇಲ್ಲ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.