ಮುಡಾ ಹಗರಣ: ಸಂಧಿ ಬಗ್ಗೆ ಪಾಠ ಮಾಡುವ ಸಿದ್ದರಾಮಯ್ಯಗೆ ನೈತಿಕತೆ ಎಲ್ಲಿ ಹೋಗಿತ್ತು?, ಶ್ರೀವತ್ಸ
ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ರಾಜ್ಯಪಾಲರು ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದೇನೆ. ಈ ಹೋರಾಟದಿಂದ ಬಿಜೆಪಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ
ಮೈಸೂರು(ಜು.13): ಸಂಧಿ ಬಗ್ಗೆ, ಕನ್ನಡದ ಬಗ್ಗೆ ಪಾಠ ಮಾಡುವ ಸಿದ್ದರಾಮಯ್ಯಗೆ ನೈತಿಕತೆ ಎಲ್ಲಿ ಹೋಗಿತ್ತು? ಎಂದು ಬಿಜೆಪಿ ಶಾಸಕ ಟಿ.ಎಸ್. ಶ್ರೀವತ್ಸ ಖಾರವಾಗಿ ಪ್ರಶ್ನಿಸಿದರು.
ಮೈಸೂರಿನಲ್ಲಿ ಮುಡಾ ಹಗರಣವನ್ನು ಸಿಬಿಐ ತನಿಖೆಗೆ ಆಗ್ರಹಿಸಿ ಬಿಜೆಪಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮುಡಾ ಹಗರಣ ವಿರುದ್ಧ ಬಿಜೆಪಿಯ ಬೃಹತ್ ಪ್ರತಿಭಟನೆಗೆ ಮುಂದಾಗಿದೆ. ನಮ್ಮ ನಾಯಕರನ್ನು ಬಂಧಿಸಿದ ಮಾತ್ರಕ್ಕೆ ಬಿಜೆಪಿ ಪ್ರತಿಭಟನೆ ನಿಲ್ಲುವುದಿಲ್ಲ. ಮುಡಾ ಭ್ರಷ್ಟಾಚಾರದ ಬಗ್ಗೆ ಗಮನ ಸೆಳೆಯಲು ನಾವು ಪ್ರತಿಭಟನೆ ಮಾಡುತ್ತಿದ್ದೇವೆ. ಆದರೆ, ರಾಜ್ಯ ಸರ್ಕಾರ ಅದನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದಕ್ಕೆಲ್ಲ ಬಿಜೆಪಿ ಜಗ್ಗುವುದಿಲ್ಲ ಎಂದು ಹೇಳಿದರು.
ಬೆನ್ನು ಬೆನ್ನಿಗೆ ಎರಡು ಕಂಟಕ.. ! ಅವಳಿ ಕಂಟಕದ ಸುಳಿಯಲ್ಲಿ ಸಿಲುಕಿದರಾ ಸಿಎಂ ಸಿದ್ದರಾಮಯ್ಯ?
ವಿಧಾನಸಭೆ ಅಧಿವೇಶನದಲ್ಲೂ ನಮ್ಮ ಹೋರಾಟ ಮುಂದುವರೆಸುತ್ತೇವೆ. ಸಿದ್ದರಾಮಯ್ಯ ಈಗಲೂ 62 ಕೋಟಿ ಪರಿಹಾರ ಕೇಳಿದ್ದಾರೆ. ಎಲ್ಲಿದೆ ಸ್ವಾಮಿ ನ್ಯಾಯ? ನೀವು ಕಾನೂನಿನ ಪ್ರಕಾರ ಅದೇ ಬಡವಾಣೆಯಲ್ಲಿ ಲಾಟರಿ ಮೂಲಕ ನಿವೇಶನ ಪಡೆಯಬೇಕಿತ್ತು. ನಿಮ್ಮ ಪ್ರಕಾರ ಬಿಜೆಪಿಯೇ ತಪ್ಪು ಮಾಡಿದೆ, ಮುಡಾ ತಪ್ಪು ಮಾಡಿದೆ. ಹಾಗಿದ್ದರೆ ನಿಮ್ಮ ನೈತಿಕತೆ ಎಲ್ಲಿ ಹೋಗಿತ್ತು? ವಿರೋಧ ಪಕ್ಷದ ನಾಯಕರಾಗಿದ್ದ ನೀವು ಬೇಡ ಎಂದು ಹೇಳಬೇಕಿತ್ತು. ಮಾತೆತ್ತಿದರೆ ಸಂಧಿ ಬಗ್ಗೆ ಪಾಠ ಮಾಡುತ್ತೀರಿ. ಕನ್ನಡದ ಬಗ್ಗೆ ಪಾಠ ಮಾಡುವ ನೀವು ಏನು ಮಾಡುತ್ತಿದ್ರೀ? ವಿಜಯನಗರದಲ್ಲಿ ಬೇಡ, ಅದೇ ಬಡಾವಣೆಯಲ್ಲಿ ಕೊಡಿ ಎಂದು ಕೇಳಬೇಕಿತ್ತು ಎಂದು ಅವರು ಪ್ರಶ್ನಿಸಿದರು.
ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ರಾಜ್ಯಪಾಲರು ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದೇನೆ. ಈ ಹೋರಾಟದಿಂದ ಬಿಜೆಪಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಅವರು ತಿಳಿಸಿದರು.