ಬೆಂಗಳೂರು[ಡಿ.18]: ಆರೋಗ್ಯ ಸಚಿವ ಬಿ.ಶ್ರೀರಾಮುಲು ಮತ್ತು ಭಾಗ್ಯಲಕ್ಷ್ಮೇ ಅವರ ಪುತ್ರಿ ರಕ್ಷಿತಾ ಮತ್ತು ಹೈದರಾಬಾದ್‌ ಉದ್ಯಮಿ ರವಿಕುಮಾರ್‌ ಪುತ್ರ ಲಲಿತ್‌ ಕುಮಾರ್‌ ಅವರ ವಿವಾಹ ನಿಶ್ಚಿತಾರ್ಥ ಬುಧವಾರ ಬೆಂಗಳೂರಿನಲ್ಲಿ ನೆರವೇರಲಿದ್ದು, ಅದ್ಧೂರಿಯಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ನಗರದ ರೇಸ್‌ಕೋರ್ಸ್‌ ರಸ್ತೆಯಲ್ಲಿ ತಾಜ್‌ ವೆಸ್ಟೆಂಡ್‌ ಹೋಟೆಲ್‌ನಲ್ಲಿ ಬುಧವಾರ ಬೆಳಗ್ಗೆ 11.30ಕ್ಕೆ ನಿಶ್ಚಿತಾರ್ಥ ನಡೆಯಲಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಪಕ್ಷದ ರಾಷ್ಟ್ರೀಯ, ರಾಜ್ಯ ಮುಖಂಡರು ಮತ್ತು ಪ್ರತಿಪಕ್ಷದ ಹಲವು ಪ್ರಮುಖರು ಭಾಗವಹಿಸಿ ಶುಭ ಹಾರೈಸಲಿದ್ದಾರೆ. ಕಳೆದ ಒಂದು ವಾರದಿಂದ ಪುತ್ರಿಯ ನಿಶ್ಚಿತಾರ್ಥ ಸಮಾರಂಭದ ಸಿದ್ಧತೆಯಲ್ಲಿರುವ ಶ್ರೀರಾಮುಲು ಪಕ್ಷದ ಹಿರಿಯ ಮುಖಂಡರು ಸೇರಿದಂತೆ ಪ್ರತಿಪಕ್ಷದ ನಾಯಕರಿಗೆ ಆಹ್ವಾನ ನೀಡಿದ್ದಾರೆ.

ಮಗಳ ನಿಶ್ಚಿತಾರ್ಥ ಸಮಾರಂಭದಲ್ಲಿ ಎಲ್ಲಾ ನಾಯಕರನ್ನು ಒಗ್ಗೂಡಿಸುವ ಕೆಲಸ ಮಾಡಲಾಗುತ್ತಿದ್ದು, ಉಪಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವ ಶ್ರೀರಾಮುಲು ಅವರಿಗೆ ನಿಶ್ಚಿತಾರ್ಥದ ವೇದಿಕೆಯು ಪೂರಕವಾಗಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ರಕ್ಷಿತಾ ಮತ್ತು ಲಲಿತ್‌ ಕುಮಾರ್‌ ಲಂಡನ್‌ನಲ್ಲಿ ಎಂಬಿಎ ವಿದ್ಯಾಭ್ಯಾಸ ಮಾಡಿದ್ದು, ಈ ವೇಳೆ ಪರಿಚಯವಾಗಿದೆ. ಇಬ್ಬರು ಇಷ್ಟಪಟ್ಟಿರುವ ಹಿನ್ನೆಲೆಯಲ್ಲಿ ಎರಡು ಕುಟುಂಬದವರು ಸೇರಿ ರಕ್ಷಿತಾ ಮತ್ತು ಲಲಿತ್‌ ಕುಮಾರ್‌ ವಿವಾಹವನ್ನು ನಿಶ್ಚಯಿಸಿದ್ದಾರೆ.

ಶ್ರೀರಾಮುಲು ದಂಪತಿಗೆ ಮೂವರು ಪುತ್ರಿಯರು, ಒಬ್ಬ ಪುತ್ರನಿದ್ದಾನೆ. ರಕ್ಷಿತಾ, ದೀಕ್ಷಿತಾ, ಅಂಕಿತಾ ಮತ್ತು ಧನುಷ್‌ ಮಕ್ಕಳ ಹೆಸರಾಗಿದ್ದು, ದೀಕ್ಷಿತಾ ಎಂಬಿಎ ವಿದ್ಯಾಭ್ಯಾಸ ಮಾಡುತ್ತಿದ್ದು, ಅಂಕಿತಾ ದ್ವಿತೀಯ ಪಿಯುಸಿ ಮತ್ತು ಧನುಷ್‌ ಬಿಬಿಎಂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.