ಬೆಂಗಳೂರು[ಫೆ.10]: ಡಾ.ಜಿ.ಪರಮೇಶ್ವರ್‌ ಅವರು ಈಗ ಉಪಮುಖ್ಯಮಂತ್ರಿ ಆಗಿದ್ದಾರೆ. ಉಳಿದಿದ್ದು ಮುಖ್ಯಮಂತ್ರಿ ಹುದ್ದೆ ಅಷ್ಟೆ. ಇವತ್ತಲ್ಲ ನಾಳೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಬಿಜೆಪಿ ಶಾಸಕ ವಿ.ಸೋಮಣ್ಣ ಹೇಳಿದ್ದಾರೆ.

ಶನಿವಾರ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುವ ಸಮಾರಂಭದಲ್ಲಿ ಮಾತನಾಡಿದ ಅವರು, ಡಾ.ಜಿ.ಪರಮೇಶ್ವರ್‌ ಮತ್ತು ನಾನು ಕಳೆದ ನಲವತ್ತು ವರ್ಷದ ಸ್ನೇಹಿತರು. ನಾನು ನಗರಸಭಾ ಸದಸ್ಯಆಗುವುದಕ್ಕೂ ಮುನ್ನವೇ ಅವರೊಂದಿಗೆ ಒಡನಾಟ ಹೊಂದಿದ್ದೆ. ಎರಡು ಬಾರಿ ಶಾಸಕರಾಗಿ ಸದನದಲ್ಲಿ ಅಕ್ಕಪಕ್ಕದ ಆಸನಗಳಲ್ಲಿ ಕುಳಿತುಕೊಳ್ಳುತ್ತಿದ್ದೆವು. ಪರಮೇಶ್ವರ್‌ ಅವರ ದೊಡ್ಡತನ, ದೂರದೃಷ್ಟಿಯನ್ನು ತುಂಬಾ ಹತ್ತಿರದಿಂದ ಗಮನಿಸಿ ಅವರು ಮುಖ್ಯಮಂತ್ರಿ ಆಗಲಿ ಎಂದು ಹೇಳಿದ್ದೇನೆ. ಅದರಲ್ಲಿ ತಪ್ಪೇನಿದೆ ಎಂದರು.

ಅದೃಷ್ಟಇದರೆ ಯಾರು ಬೇಕಾದರೂ ಮುಖ್ಯಮಂತ್ರಿ ಆಗಬಹುದು. 37 ಸೀಟ್‌ ಗೆದ್ದು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿಲ್ಲವೇ? ಅವಕಾಶ ಇದ್ದರೆ ಯಡಿಯೂರಪ್ಪ ಅವರೂ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ. ಯಾರೂ ಇಲ್ಲವೆಂದರೆ ನಾನೂ ಮುಖ್ಯಮಂತ್ರಿ ಆಗಬಹುದು ಎಂದು ಹೇಳಿದರು.

ಬಿಎಸ್‌ವೈ ಜೊತೆ ಜಗಳ ತರಬೇಡಿ:

ಈ ಹಿಂದೆ ಶ್ರೀರಾಮುಲು ಮುಖ್ಯಮಂತ್ರಿಯಾಗಬೇಕು ಎಂದು ಹೇಳಿದ್ದನ್ನು ದೊಡ್ಡ ಸುದ್ದಿ ಮಾಡಿದ ಮಾಧ್ಯಮದವರು, ಈಗ ಪರಮೇಶ್ವರ್‌ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದ್ದನ್ನು ದೊಡ್ಡದು ಮಾಡಿ ನನ್ನ ಮತ್ತು ಯಡಿಯೂರಪ್ಪ ಮಧ್ಯೆ ಜಗಳ ತಂದಿಡಬೇಡಿ ಎಂದೂ ಸೋಮಣ್ಣ ಹೇಳಿದರು.

ರಾತ್ರೋರಾತ್ರಿ ಪಕ್ಷ ಬಿಟ್ಟರು:

ಬಳಿಕ ಮಾತನಾಡಿದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌, ಸೋಮಣ್ಣ ಬಹಳ ಕ್ರಿಯಾಶೀಲ ವ್ಯಕ್ತಿ. ಅವರು ನಮ್ಮ ಪಕ್ಷದಲ್ಲೇ ಇದ್ದರು. ಆದರೆ, ರಾತ್ರೋರಾತ್ರಿ ಪಕ್ಷ ಬಿಟ್ಟು ಹೋದರು. ಯಾಕೆ ಹೋದೆ ಅಂತ ಅವರೀಗ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದರು.