ಬಿಜೆಪಿ ಪಾಲು?| ಶಿರಾ, ರಾರಾ ಬಿಜೆಪಿ ಗೆಲುವು| ಟಿವಿ9, ಸಿ-ವೋಟರ್‌ ಸಮೀಕ್ಷೆ

ಬೆಂಗಳೂರು(ನ.08): ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳ ಪ್ರತಿಷ್ಠಿತ ಕಣವಾಗಿರುವ ಶಿರಾ ಮತ್ತು ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಉಪಚುನಾವಣೆ ಫಲಿತಾಂಶ ಇದೇ ಮಂಗಳವಾರ ಪ್ರಕಟವಾಗಲಿದ್ದು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬುದಾಗಿ ‘ಸಿ-ವೋಟರ್‌’ ಮತ್ತು ‘ಟೀವಿ9’ ಸುದ್ದಿವಾಹಿನಿ ನಡೆಸಿರುವ ಜಂಟಿ ಚುನಾವಣೋತ್ತರ ಸಮೀಕ್ಷೆ ತಿಳಿಸಿದೆ.

ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಕಳೆದ ಎರಡು ಅವಧಿಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಮುನಿರತ್ನ ಗೆಲುವು ಸಾಧಿಸಲಿದ್ದಾರೆ. ಆದರೆ, ಜೆಡಿಎಸ್‌ ವಶದಲ್ಲಿದ್ದ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಹಿನ್ನಡೆಯಾಗಲಿದ್ದು, ಅಚ್ಚರಿ ಎಂಬಂತೆ ಬಿಜೆಪಿ ಪಕ್ಷ ಗೆಲುವು ಸಾಧಿಸಲಿದೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.

ನವೆಂಬರ್‌ 10ರಂದು ಉಭಯ ಕ್ಷೇತ್ರಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಅಂದು ಸಮೀಕ್ಷೆ ನಿಜವಾಗಬಹುದೇ ಎಂದು ತಿಳಿಯಲಿದೆ.

ಶಿರಾದಲ್ಲಿ ಮೊದಲ ಬಾರಿ ಬಿಜೆಪಿ!:

ಜೆಡಿಎಸ್‌ ವಶದಲ್ಲಿದ್ದ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್‌ಗೌಡ ಶೇ.36.6 ಮತ ಪಡೆದು ಮೊದಲ ಸ್ಥಾನದಲ್ಲಿ ಇರಲಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಟಿ.ಬಿ.ಜಯಚಂದ್ರ ಶೇ.32.5 ಹಾಗೂ ಜೆಡಿಎಸ್‌ನ ಅಮ್ಮಾಜಮ್ಮ ಶೇ. 17.4 ಮತ ಪಡೆಯುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ.

3ನೇ ಅವಧಿಗೆ ಮುನಿರತ್ನ:

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ಮುನಿರತ್ನ ರಾಜರಾಜೇಶ್ವರಿ ನಗರದಲ್ಲಿ ಶೇ.37.8 ಮತ ಪಡೆಯಲಿದ್ದಾರೆ. ಆ ಮೂಲಕ ಸತತ ಮೂರನೇ ಬಾರಿ ಗೆಲುವು ಸಾಧಿಸುವ ಸಾಧ್ಯತೆಯಿದೆ. ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಅವರಿಗೆ ಶೇ.31.1 ಮತಗಳು ಲಭ್ಯವಾಗಲಿದ್ದು, 2ನೇ ಸ್ಥಾನ ಪಡೆದುಕೊಳ್ಳಲಿದ್ದಾರೆ. ಜೆಡಿಎಸ್‌ ಅಭ್ಯರ್ಥಿ ಕೃಷ್ಣಮೂರ್ತಿ ಶೇ.14 ಮತಗಳನ್ನು ಪಡೆದುಕೊಳ್ಳಲಿದ್ದಾರೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ.

ಶಿರಾ

ಅಭ್ಯರ್ಥಿ ಪಕ್ಷ ಮತ

ರಾಜೇಶ್‌ಗೌಡ ಬಿಜೆಪಿ ಶೇ.36.6

ಟಿ.ಬಿ. ಜಯಚಂದ್ರ ಕಾಂಗ್ರೆಸ್‌ ಶೇ.32.5

ಅಮ್ಮಾಜಮ್ಮ ಜೆಡಿಎಸ್‌ ಶೇ.17.4

ರಾಜರಾಜೇಶ್ವರಿ ನಗರ

ಮುನಿರತ್ನ ಬಿಜೆಪಿ ಶೇ.37.8

ಕುಸುಮಾ ಕಾಂಗ್ರೆಸ್‌ ಶೇ.31.1

ಕೃಷ್ಣಮೂರ್ತಿ ಜೆಡಿಎಸ್‌ ಶೇ.14