ಭಾರೀ ಡೀಲ್ ಪ್ರಕರಣವೊಂದರಲ್ಲಿ ಸಿಲುಕಿಕೊಂಡಿರುವ ಜನಾರ್ದನ ರೆಡ್ಡಿಯಿಂದ ರಾಜ್ಯ ಬಿಜೆಪಿ ಇದೀಗ ಅಂತರ ಕಾಯ್ದುಕೊಳ್ಳುತ್ತಿದೆ.
ಬೆಂಗಳೂರು : ಆ್ಯಂಬಿಡೆಂಟ್ ಕಂಪನಿಯ ಡೀಲ್ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರೊಂದಿಗೆ ಅಂತರ ಕಾಪಾಡಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ‘ಜನಾರ್ದನ ರೆಡ್ಡಿ ಪ್ರಕರಣಕ್ಕೂ, ನಮಗೂ ಯಾವುದೇ ಸಂಬಂಧವಿಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸ್ಪಷ್ಟವಾಗಿ ಹೇಳಿದ್ದಾರೆ.
ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ವೇಳೆ ರೆಡ್ಡಿ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುತ್ರನ ಸಾವಿನ ಕುರಿತು ನೀಡಿದ್ದ ಹೇಳಿಕೆಗೂ ಬಿಜೆಪಿ ನಾಯಕರು ಆಗಲೇ ವಿರೋಧ ವ್ಯಕ್ತಪಡಿಸಿದ್ದರು. ಇಂಥ ಹೇಳಿಕೆಗಳು ಸರಿಯಲ್ಲ. ರೆಡ್ಡಿ ಅವರು ಸಿದ್ದರಾಮಯ್ಯ ಅವರ ಕ್ಷಮೆಯಾಚಿಸಬೇಕು ಎಂದೂ ಆ ವೇಳೆ ಯಡಿಯೂರಪ್ಪ ಸೂಚನೆ ನೀಡಿದ್ದರು. ಆದರೂ ರೆಡ್ಡಿ ಮಾತ್ರ ಕ್ಷಮೆಯಾಚಿಸದೆ ವಿಷಾದ ವ್ಯಕ್ತಪಡಿಸಿ ತೆರೆ ಎಳೆದಿದ್ದರು.
ಇದೀಗ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರೆಡ್ಡಿ ವಿರುದ್ಧ ಆ್ಯಂಬಿಡೆಂಟ್ ಕಂಪನಿಯ ಇ.ಡಿ. ಡೀಲ್ ಪ್ರಕರಣ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಬಿಜೆಪಿ ನಾಯಕರು ಮತ್ತಷ್ಟು ಬೇಸರಗೊಂಡಿದ್ದಾರೆ. ರೆಡ್ಡಿಯಿಂದಾಗಿ ಪಕ್ಷದ ವರ್ಚಸ್ಸಿಗೂ ಧಕ್ಕೆ ಉಂಟಾಗುತ್ತಿದೆ ಎಂಬ ಮಾತು ಬಿಜೆಪಿ ಪಾಳೆಯದಲ್ಲಿ ಬಲವಾಗಿ ಕೇಳಿಬರುತ್ತಿದೆ.
ಈ ಹಿಂದೆ ಸಾರ್ವತ್ರಿಕ ವಿಧಾನಸಭಾ ಚುನಾವಣೆ ವೇಳೆ ಸ್ವತಃ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಜನಾರ್ದನ ರೆಡ್ಡಿ ಬಿಜೆಪಿಯಲ್ಲಿ ಇಲ್ಲ ಎಂಬ ಮಾತನ್ನು ಹೇಳಿದ್ದರು. ಆ ಸಂದರ್ಭ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತಿತರ ಕೆಲವು ಮುಖಂಡರು ರೆಡ್ಡಿ ಅವರ ಬಗ್ಗೆ ಸಹಾನುಭೂತಿ ಹೊಂದಿದ್ದರು. ಆದರೆ, ಈ ಉಪಚುನಾವಣೆಯಲ್ಲಿ ರೆಡ್ಡಿ ಆಡಿದ ಮಾತಿನಿಂದ ಉಂಟಾದ ನಷ್ಟ ಮತ್ತು ಈ ಡೀಲ್ ಪ್ರಕರಣದಿಂದಾಗಿ ಅವರಿಂದ ದೂರ ಇರುವುದೇ ಲೇಸು ಎಂಬ ನಿಲವಿಗೆ ಬಂದಿದ್ದಾರೆ ಎನ್ನಲಾಗುತ್ತಿದೆ.
