ಮತಾಂತರ ನಿಷೇಧ ಕಾಯ್ದೆ ವಾಪಾಸ್‌ ಪಡೆದುಕೊಂಡಿರುವ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ. ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ನಾಯಕ ಆರ್‌. ಅಶೋಕ್‌, ಮತಾಂತರಕ್ಕೆ ಕಾಂಗ್ರೆಸ್ ಪಕ್ಷವೇ ರಾಯಭಾರಿಯಾಗಿರುವಂತೆ ಕಾಣ್ತಿದೆ ಎಂದು ಹೇಳಿದ್ದಾರೆ. 

ಬೆಂಗಳೂರು (ಜೂ. 16): ಮತಾಂತರ ನಿಷೇಧ ಕಾಯ್ದೆಯನ್ನು ವಾಪಾಸ್‌ ತೆಗೆದುಕೊಂಡಿರುವ ಕಾಂಗ್ರೆಸ್‌ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ಕಿಡಿಕಿಡಿಯಾಗಿದ್ದು, ಮತಾಂತರಕ್ಕೆ ಕಾಂಗ್ರೆಸ್‌ ಪಕ್ಷವೇ ರಾಯಭಾರಿಯಾಗಿರುವಂತೆ ಕಾಣ್ತಿದೆ ಎಂದು ಟೀಕೆ ಮಾಡಿದೆ. ಕಾಂಗ್ರೆಸ್ ಸರ್ಕಾರ ಬಂದ ನಂತರ ಮತ್ತೆ ಟಿಪ್ಪು ಯುಗಕ್ಕಾಗಿ ಶಂಕುಸ್ಥಾಪನೆ ಮಾಡಲು ಮುಂದಾಗಿದೆ. ಇಡೀ ಮತಾಂತರ ಪ್ರಕ್ರಿಯೆಗೆ ಕಾಂಗ್ರೆಸ್‌ ಪಕ್ಷವೇ ರಾಯಭಾರಿಯಾಗಿರುವಂತೆ ಕಂಡಿದೆ. ಕಾಂಗ್ರೆಸ್‌ ಮತಾಂತರದ ಬ್ರ್ಯಾಂಡ್‌ ಅಂಬಾಸಿಡರ್‌. ದುಡ್ಡಿನ ಆಸೆಗೆ, ಮತ್ಯಾವುದೋ ಆಸೆಗೆ ಮತಾಂತರ ಆಗುತ್ತಿದ್ದವವರು ಇದ್ದರು. ಯಾರಿಗೋಸ್ಕರವಾಗಿ ಈ ಮಸೂದೆಯನ್ನು ನಿಷೇಧ ಮಾಡಿದ್ದೀರಿ. ನಾವು ಈ ಮತಾಂತರ ನಿಷೇಧ ಕಾಯ್ದೆ ತಂದಾಗ ಒತ್ತಾಯದ ಮತಾಂತರ ಮಾಡಬಾರದು ಅಂತ ಮಾಡಿದ್ದೆವು. ಇದರಲ್ಲಿ ತಪ್ಪೇನಿದೆ ಎಂದು ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆರ್‌.ಅಶೋಕ್‌, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವನ್ನು ಪ್ರರ್ಶನೆ ಮಾಡಿದ್ದಾರೆ.

ಮತಾಂತರ ಆಗುವ ವ್ಯಕ್ತಿ ಅರ್ಜಿ ಹಾಕಬೇಕು. ಕಾನೂನು ಪ್ರಕಾರ ಮತಾಂತರ ಆಗಬೇಕು ಅಂತಾ ಮಸೂದೆಯಲ್ಲಿ ತಿಳಿಸಿದ್ದೆವು. ಟಿಪ್ಪು, ಕೊಡಗಿನಲ್ಲಿ 50 ಸಾವಿರಕ್ಕೂ ಹೆಚ್ಚು ಕೊಡಗು ಜನರನ್ನು ಮತಾಂತರ ಮಾಡಿದ್ದ ಆತನನ್ನು ವೈಭವೀಕರಿಸಿ, ಆತನ ಸಿದ್ಧಾಂತಗಳನ್ನು ಒಪ್ಪಿಕೊಳ್ಳುವ ರೀತಿ ಕಾಂಗ್ರೆಸ್ ವರ್ತಿಸುತ್ತಿದೆ. ಈಗ ಮತಾಂತರ ಕಾಯ್ದೆಯನ್ನು ಜಾರಿ ಮಾಡುವ ನಿರ್ಧಾರವೇಕೆ? ಓಟಿಗಾಗಿ, ಓಲೈಕೆಗಾಗಿ ಕಾಂಗ್ರೆಸ್ ಈ ರೀತಿ ವರ್ತನೆ ಮಾಡುತ್ತಿದೆ ಎಂದು ಅಶೋಕ್‌ ಟೀಕೆ ಮಾಡಿದ್ದಾರೆ.

ಎಪಿಎಂಸಿ ಕಾಯ್ದೆ ಕೂಡಾ ವಾಪಸ್ ಪಡೆಯಲು ಹೊರಟಿದ್ದಾರೆ. ಈಗಿನ ಕಾಯ್ದೆ ಪ್ರಕಾರ ರೈತರು ತಮ್ಮ ಉತ್ಪನ್ನ ಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು. ಆದರೆ, ಕಾಂಗ್ರೆಸ್ ದಲ್ಲಾಳಿಗಳಿಗೆ ಉಪಯೋಗ ಆಗುವ ರೀತಿಯಲ್ಲಿ ಕಾಯ್ದೆ ತರಲು ಹೊರಟಿದೆ. ಪುಸ್ತಕ ವಿಷಯಗಳ ಬದಲಾವಣೆ ಕೂಡಾ ತರಾತುರಿಯಲ್ಲಿ ಮಾಡಲಾಗುತ್ತಿದೆ. ಜನಾಭಿಪ್ರಾಯ ಕೇಳಿ ನಿಧಾನವಾಗಿ ಮಾಡಬಹುದಿತ್ತು ಸಮರೋಪಾದಿಯಲ್ಲಿ ಇದನ್ನು ಬದಲಾವಣೆ ಮಾಡುವ ಅವಶ್ಯಕತೆ ಏನಿದೆ? ಮಕ್ಕಳಿಗೆ ತೊಂದರೆ ಕೊಡುವ ರೀತಿಯಲ್ಲಿ ಸಡನ್ನಾಗಿ ಬದಲಾವಣೆ ಮಾಡಲು ಸರ್ಕಾರ ಹೊರಟಿದೆ.

ಅಕ್ಕಿ ವಿಚಾರದಲ್ಲಿ ಕೂಡಾ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಕೇಂದ್ರದ ಕಡೆ ಬೊಟ್ಟು ಮಾಡಿ ತೋರಿಸುತ್ತಿದೆ. ಕೇಂದ್ರ ಕೊಡುವ ಅಕ್ಕಿಯನ್ನು ನಾನೇ ಕೊಟ್ಟಿದ್ದು ಎಂದು ಹೇಳ್ತೀರಾ. ಇವತ್ತೇ ಬರೆದು ಇಟ್ಟುಕೊಳ್ಳಿ ಇನ್ನೊಂದು ವರ್ಷದಲ್ಲಿ ಈ ಸರ್ಕಾರ ದಿವಾಳಿ ಎದ್ದು ಹೋಗುತ್ತೆ. ಈಗಲೇ ಜನ ಸಾಲವಸೂಲಾತಿಗೆ ಹೋದವರಿಗೆ ಹೊಡೆದು ಕಳಿಸ್ತಿದಾರೆ. ಸ್ತ್ರೀ ಶಕ್ತಿ ಸಂಘಗಳು ಸಾಲ ಕಟ್ಟಲ್ಲ ಅಂತ ವಸೂಲಾತಿಗೆ ಹೋದವನಿಗೆ ಹೊಡೆದು ಕಳಿಸುತ್ತಿದ್ದಾರೆ ಎಂದು ಅಶೋಕ್‌ ಕಿಡಿಕಾರಿದ್ದಾರೆ.

ಇನ್ನು ವಿದ್ಯುತ್‌ ಬಿಲ್‌ ವಿಚಾರದಲ್ಲಿ ಗೊಂದಲಗಳು ಅಗುತ್ತಿವೆ. ಜನ ಬಿಲ್ ಕಟ್ಟಲ್ಲ ಎಂದು ಗಲಾಟೆ ಮಾಡ್ತಿದ್ದಾರೆ. ಕೊಟ್ಟಂತೆ ಮಾಡಿ, ಇನ್ನೊಂದು ಕಡೆ ಕಿತ್ತುಕೊಳ್ತಾ ಇದಾರೆ. ಏ ಮಹಾದೇವಪ್ಪ, ನಿನಗೂ ಫ್ರೀ, ಕಾಕಾ ಪಾಟೀಲ್ ಗೂ ಫ್ರೀ ಅಂದಿದ್ದರು. ನಿಮ್ಮ ಗ್ಯಾರಂಟಿ ಕಾರ್ಡ್ ನಲ್ಲಿ ಕಂಡೀಷನ್ಸ್ ಅಪ್ಲೈ ಅಂತಾ ಹಾಕಬೇಕಿತ್ತು. ಈಗ ಹೊಸ ಮನೆಗೆ ಒಂದು ರೂಲ್ಸ್, ಬಾಡಿಗೆ ಮನೆಗೆ ಒಂದು ರೂಲ್ಸ್ ಅಂತಾ ಮಾಡುತ್ತಿದ್ದಾರೆ. ಠೇವಣಿ ಜಾಸ್ತಿ ಮಾಡುತ್ತಿದ್ದಾರೆ. ಎಪ್ಪತ್ತು ಪೈಸೆ ಯುನಿಟ್ ಗೆ ಜಾಸ್ತಿ ಮಾಡಿದ್ದಾರೆ ಎಂದು ಟೀಕಿಸಿದಿದ್ದಾರೆ.

ಬಿಜೆಪಿ ತಂದ ಮತಾಂತರ ಕಾಯ್ದೆಗೆ ಕೊಕ್, ಸಿದ್ದು ಸರ್ಕಾರದ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ!

ಜನರಿಗೆ ಸತ್ಯ ಗೊತ್ತಾಗಲಿ: ರಾಜ್ಯದ ಜನರಿಗೆ ಸತ್ಯ ಗೊತ್ತಾಗಬೇಕು. ವಿದ್ಯುತ್ ವಿಚಾರದಲ್ಲಿ ಜನರಿಗೆ ಮೋಸ ಮಾಡಿದ್ದು ಯಾರು? ಎಲ್ಲರೂ ನಿಮ್ಮ ವಿದ್ಯುತ್ ಬಿಲ್ ಗಳನ್ನು ಸೋಷಿಯಲ್ ಮೀಡಿಯಾ ದಲ್ಲಿ ಶೇರ್ ಮಾಡಿ. ಕಳೆದ ತಿಂಗಳ ಹಾಗೂ ಈ ತಿಂಗಳ ಬಿಲ್ ಅನ್ನು ಶೇರ್ ಮಾಡಿ. ಜನಕ್ಕೆ ಸತ್ಯ ಗೊತ್ತಾಗಲಿ. ಯಾವುದೇ ಘೋಷಣೆ ಮಾಡುವಾಗ ಏನು ತೊಂದರೆ ಆಗಬಹುದೆಂದು ಅರಿವು ಇರಬೇಕು ಕೇವಲ ಓಟಿಗಾಗಿ ಈ ತರಾ ಮಾಡೋದು ತಪ್ಪು ಎಂದು ಹೇಳಿದ್ದಾರೆ.

ಪಠ್ಯ ಪುಸ್ತಕ ಪರಿಷ್ಕರಣೆ, ವಿವಾದಿತ ಎಪಿಎಂಸಿ ಕಾಯ್ದೆ ರದ್ದುಪಡಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ!

ಕಾಂಗ್ರೆಸ್ ನ ತನ್ವೀರ್ ಶೇಠ್, ಶಾಮನೂರು ಶಿವಶಂಕರಪ್ಪ ಅವರೇ ಹೇಳುತ್ತಿದ್ದಾರೆ. ಕೊಟ್ಟಂತೆ ಮಾಡಿ ಹಂಗೇ ಕಿತ್ತುಕೊಳ್ತಾ ಇದೀರಾ ಅಂತ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ನ ನಾಯಕರೇ ಇದರ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. 19ಕ್ಕೆ ಸಭೆ ಮಾಡಿ ಪ್ರತಿಭಟನೆ ಬಗ್ಗೆ ತೀರ್ಮಾನ ಮಾಡ್ತೀವಿ. ರಾಜ್ಯಾದ್ಯಂತ ಕಾಂಗ್ರೆಸ್ ನಡೆ ವಿರೋಧಿಸಿ ಪ್ರತಿಭಟನೆ ಮಾಡ್ತೀವಿ ಎಂದು ತಿಳಿಸಿದ್ದಾರೆ.