ಬೆಂಗಳೂರು[ಫೆ.05]: ‘ಯಡಿಯೂರಪ್ಪ ಅವರು ಕೆಡವಬೇಕು ಎಂದು ಹೊರಟರೆ ನನ್ನ ಉಳಿಸಬೇಕು ಎಂದು ಮುಂದೆ ಬರುವವರು ಬಿಜೆಪಿಯಲ್ಲಿ ಅನೇಕರಿದ್ದಾರೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ.

‘ನಮ್ಮ ಸರ್ಕಾರಕ್ಕೆ ಗಡುವು ನೀಡುವವರ ಫ್ಯೂಸ್ ಹೇಗೆ ತೆಗೆಯಬೇಕು ಎಂಬುದೂ ನನಗೆ ಗೊತ್ತಿದೆ. ಫ್ಯೂಸ್ ತೆಗೆಯುತ್ತಿದ್ದೇನೆ. ಅದನ್ನು ಬಹಿರಂಗವಾಗಿ ಹೇಳುವುದಿಲ್ಲ ಅಷ್ಟೆ’ ಎಂದೂ ಅವರು ತೀಕ್ಷ$್ಣವಾಗಿ ತಿಳಿಸಿದ್ದಾರೆ.

ಸೋಮವಾರ ಮಾಧ್ಯಮ ಪ್ರಮುಖರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಆರಾಮವಾಗಿದ್ದೇನೆ. ಸರ್ಕಾರ ಅಸ್ಥಿರಗೊಳಿಸುವ ಕುರಿತ ವದಂತಿಗಳ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ನಾನು ಫೆ.8ರಂದು ಬಜೆಟ್‌ ಮಂಡಿಸುತ್ತೇನೆ. ಅದರಲ್ಲಿ ಉತ್ತೀರ್ಣನೂ ಆಗುತ್ತೇನೆ ಎಂದು ಹೇಳಿದರು.

ಪ್ರತಿಪಕ್ಷ ಬಿಜೆಪಿಯ ಮುಖಂಡರು ಈಗ ಪ್ರತಿನಿತ್ಯ ನಮ್ಮ ಸರ್ಕಾರಕ್ಕೆ ಗಡುವು ವಿಧಿಸುತ್ತಿರುವುದನ್ನು ನೋಡುತ್ತಿದ್ದೇವೆ. ಹೀಗಾದರೆ ನಮ್ಮ ಅಧಿಕಾರಿಗಳಿಂದ ಎಷ್ಟರಮಟ್ಟಿಗೆ ಕೆಲಸ ಮಾಡಿಸಬೇಕು ಹೇಳಿ? ಇದು ಅಧಿಕಾರಿಗಳ ಮೇಲೆ ಸಹಜವಾಗಿ ಪರಿಣಾಮ ಬೀರಲಿದೆ. ಏನೇ ಉತ್ತಮ ಕೆಲಸಗಳನ್ನು ಮಾಡಿದರೂ ಸರ್ಕಾರ ಇರಲ್ಲ ಎಂಬ ಸುದ್ದಿಗಳೇ ಹೈಲೈಟ್‌ ಆಗುತ್ತಿವೆ. ನಿಜದ ತಲೆ ಮೇಲೆ ಹೊಡೆದಂತೆ ಸುದ್ದಿಗಳನ್ನು ಕೆಲವರು ಹಬ್ಬಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಬಿಜೆಪಿಯ ಸ್ನೇಹಿತರು ಈಗ ಅವಕಾಶ ತಪ್ಪಿದರೆ ಮುಂದೆ ನಿಮಗೆ ಅವಕಾಶ ಸಿಗುವುದಿಲ್ಲ ಎಂಬುದಾಗಿ ಆಡಳಿತಾರೂಢ ಅತೃಪ್ತ ಶಾಸಕರಿಗೆ ಹತ್ತು ಹಲವು ರೀತಿಯ ಆಮಿಷ ಒಡ್ಡುವುದು ನಿರಂತರವಾಗಿ ಮಾಡುತ್ತಿದ್ದಾರೆ. ಜೊತೆಗೆ ಬಜೆಟ್‌ ಮಂಡನೆಯಾಗುವುದೇ ಅನುಮಾನ ಎಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಯಾರು ಎಷ್ಟೇ ಗಡುವು ನೀಡಲಿ. ಏನೂ ಆಗುವುದಿಲ್ಲ. ನನ್ನ ಕೆಲಸ ನಾನು ಮಾಡಿಕೊಂಡು ಹೋಗುತ್ತಿದ್ದೇನೆ. ಐದು ವರ್ಷ ಆಡಳಿತ ನಡೆಸುವುದಕ್ಕೆ ಏನು ಪ್ಲ್ಯಾನ್‌ ಮಾಡಬೇಕೊ ಅದನ್ನು ಮಾಡುತ್ತೇನೆ. ಈ ಬಾರಿ ನನಗೆ ಪರಿಸ್ಥಿತಿ ಚೆನ್ನಾಗಿ ಗೊತ್ತಿದೆ. ಗಡುವು ನೀಡುವವರ ಫ್ಯೂಸ್ ಹೇಗೆ ತೆಗೆಯಬೇಕು ಎಂಬುದೂ ನನಗೆ ಗೊತ್ತಿದೆ. ಫ್ಯೂಸ್ ತೆಗೆಯುತ್ತಿದ್ದೇನೆ. ಅದನ್ನು ಬಹಿರಂಗವಾಗಿ ಹೇಳುವುದಿಲ್ಲ ಅಷ್ಟೆಎಂದು ಖಾರವಾಗಿ ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ನನಗೆ ಬಿಜೆಪಿಯಲ್ಲಿ ಬಹಳ ಜನ ಸ್ನೇಹಿತರಿದ್ದಾರೆ. ಸಮಯ ಬಂದಾಗ ನನ್ನ ಉಳಿಸುವವರೇ ಆ ಸ್ನೇಹಿತರು. ಯಡಿಯೂರಪ್ಪ ಅವರು ಕೆಡವಬೇಕು ಎಂದು ಹೊರಟರೆ ನನ್ನ ಉಳಿಸಬೇಕು ಎಂದು ಮುಂದೆ ಬರುವವರು ಬಿಜೆಪಿಯಲ್ಲಿ ಅನೇಕರಿದ್ದಾರೆ ಎಂದು ತಿಳಿಸಿದರು.

ನನಗೆ ಪಾಲಿಟಿಕಲ್‌ ಮ್ಯಾನೇಜ್‌ಮೆಂಟ್‌ ಅಗತ್ಯವೇ ಇಲ್ಲ. ನಾನು ಅದಕ್ಕೆ ಸಮಯವನ್ನೂ ವಿನಿಯೋಗಿಸುವುದಿಲ್ಲ. ನನ್ನ ಹಿತೈಷಿಗಳೇ ಪಾಲಿಟಿಕಲ್‌ ಮ್ಯಾನೇಜ್‌ಮೆಂಟ್‌ ಮಾಡುತ್ತಾರೆ. ಆಪರೇಷನ್‌ ಕಮಲ ಎಂಬುದನ್ನು ಕೇಳಿದಾಗ ನನಗೇನೂ ಗಾಬರಿಯಾಗುವುದಿಲ್ಲ. ‘ಎವರಿಡೇ ಈಸ್‌ ನಾಟ್‌ ಸಂಡೇ’ ಎಂಬುದನ್ನು ಬಿಜೆಪಿಯವರು ಅರಿತುಕೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಮಾತಿನಲ್ಲೇ ತಿವಿದರು.