Asianet Suvarna News Asianet Suvarna News

ಏಕಕಾಲಕ್ಕೆ ಅಭಿವೃದ್ಧಿ, ಸುರಕ್ಷೆ, ಭವಿಷ್ಯ ರೂಪಿಸಿದ ನಾಯಕ

  • ನರೇಂದ್ರ ಮೋದಿ ಅವರು ಜೀವಿಸುತ್ತಿರುವ ಈ ಯುಗದಲ್ಲಿಯೇ,  ಅವರು ಪ್ರಧಾನಿಯಾಗಿದ್ದಾಗ ಅದೇ ಸಂಸತ್ತಿನಲ್ಲಿ ಸದಸ್ಯನಾಗಿರುವುದು ನನ್ನ ಭಾಗ್ಯ
  • ನಾನು ಇದಕ್ಕಿಂತ ದೊಡ್ಡ ವರವನ್ನು ಪಡೆಯಲು ಸಾಧ್ಯವಿಲ್ಲ ಎಂದ ನಳಿನ್ ಕುಮಾರ್ ಕಟೀಲ್
BJP leader nalin kumar Kateel wishes PM Narendra Modi on his birthday snr
Author
Bengaluru, First Published Sep 17, 2021, 2:18 PM IST
  • Facebook
  • Twitter
  • Whatsapp

ನಳಿನ್‌ ಕುಮಾರ್‌ ಕಟೀಲ್‌, ಸಂಸದ-ಬಿಜೆಪಿ ರಾಜ್ಯಾಧ್ಯಕ್ಷ

ಹಡಗು ದಡದಲ್ಲಿದ್ದರೆ ಸುರಕ್ಷಿತ. ಹಾಗಂತ ಹಡಗನ್ನು ಕಟ್ಟುವುದು ದಡದಲ್ಲಿ ನಿಲ್ಲಿಸಲು ಅಲ್ಲ. ಭಾರವನ್ನು ಹೊತ್ತು ಸಾಗರದಲ್ಲಿ ಚಲಿಸಿ ಅದು ತನ್ನ ಗುರಿಯನ್ನು ತಲುಪಬೇಕು. ಆಗ ಎದುರಾಗುವ ಸವಾಲುಗಳನ್ನು ಧೈರ್ಯದಿಂದ ಎದುರಿಸಬೇಕು. ಸುನಾಮಿ ಬಂದರೂ ಮುಳುಗದೆ ಚಲಿಸಬೇಕು. ಕಷ್ಟಗಳ ಸರಮಾಲೆಯನ್ನು ವಿಜಯದ ಹೂಮಾಲೆಯಾಗಿ ಪರಿವರ್ತಿಸಬೇಕು. ಅದೇ ಹಡಗಿನ ಸಾರ್ಥಕತೆ. ಹಾಗೆ ಮನುಷ್ಯನ ಜೀವನ ಕೂಡ. ತಾನಾಯಿತು, ತನ್ನ ಮನೆ, ಕುಟುಂಬ ಆಯಿತು ಎಂದು ಅಂದುಕೊಂಡರೆ ವಿಶೇಷವೇನಿಲ್ಲ. ಆದರೆ ಹುಟ್ಟಿದ್ದೇ ಈ ಮಣ್ಣಿಗಾಗಿ. ಜೀವನವೇ ಈ ದೇಶಕ್ಕಾಗಿ. ಬದುಕಿರುವುದೇ ತಾಯಿ ಭಾರತಾಂಬೆಗಾಗಿ ಎಂದು ನಿಶ್ಚಯಿಸಿ ಹೊರಡುತ್ತಾರಲ್ಲ, ಅವರದ್ದು ಜೀವನವೇ ರೋಚಕ.

ನರೇಂದ್ರ ದಾಮೋದರದಾಸ ಮೋದಿ ಅವರು ಜೀವಿಸುತ್ತಿರುವ ಈ ಯುಗದಲ್ಲಿಯೇ, ಅವರು ಮೆಟ್ಟಿದ ಮಣ್ಣಿನಲ್ಲಿಯೇ ಮತ್ತು ಅವರು ಪ್ರಧಾನಿಯಾಗಿದ್ದಾಗ ಅದೇ ಸಂಸತ್ತಿನಲ್ಲಿ ಸದಸ್ಯನಾಗಿರುವುದು ನನ್ನ ಭಾಗ್ಯ ಎಂದೇ ಭಾವಿಸುತ್ತೇನೆ. ನಾನು ಇದಕ್ಕಿಂತ ದೊಡ್ಡ ವರವನ್ನು ಪಡೆಯಲು ಸಾಧ್ಯವಿಲ್ಲ ಎಂದು ಅನುದಿನವೂ ಅಂದುಕೊಳ್ಳುತ್ತೇನೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನ ಆರ್ಶೀವಾದ, ನನ್ನ ತಂದೆ, ತಾಯಿ, ಪಕ್ಷದ ಹಿರಿಯರ ಹಾಗೂ ದೇವದುರ್ಲಭ ಕಾರ್ಯಕರ್ತರ ಪ್ರೀತಿ, ವಿಶ್ವಾಸ ಮತ್ತು ಪ್ರೇರಣೆಯಿಂದ ರಾಷ್ಟ್ರೀಯ ಪಕ್ಷವೊಂದರ ರಾಜ್ಯಾಧ್ಯಕ್ಷನಾಗುವ ಸುಯೋಗ ಒದಗಿಬಂದಿತು. ನರೇಂದ್ರ ಮೋದಿಯವರ ಬಗ್ಗೆ, ಅವರ ಸಾಧನೆಯ ಬಗ್ಗೆ ಮತ್ತು ಅವರ ಜೀವನವನ್ನು ಒಂದು ಅಂಕಣದಲ್ಲಿ ಕೂಡಿಡುವುದು ಎಂದರೆ ಸಾಗರದ ನೀರನ್ನು ಒಂದು ತಂಬಿಗೆಯಲ್ಲಿ ಸಂಗ್ರಹಿಸಿ ಕೊಡಿ ಎಂದ ಹಾಗೆ. ಒಂದು ಗ್ರಂಥಕ್ಕೂ ಮೀರಿದ, ಅಧ್ಯಯನಯೋಗ್ಯ ಸಂಸ್ಕಾರ ಪಡೆದ, ಸಂತನ ಬದುಕು ಜೀವಿಸುತ್ತಿರುವ ಈ ಕುಲಕೋಟಿಯ ಹೆಮ್ಮೆಯ ವ್ಯಕ್ತಿತ್ವದ ಕೆಲವು ಅಂಶಗಳನ್ನು ಮಾತ್ರ ಇದರಲ್ಲಿ ಬರೆಯಲು ಸಾಧ್ಯವಾದೀತು ಎಂದೇ ನನ್ನ ಭಾವನೆ.

ಪ್ರಧಾನಿ ಮೋದಿ ಜನ್ಮ ದಿನ : ಬಿಜೆಪಿಯಿಂದ 20 ದಿನ ಉತ್ಸವ!

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನಾಗಿ, ಪ್ರಚಾರಕನಾಗಿ, ಸಂಘ ಕೊಟ್ಟಜವಾಬ್ದಾರಿಯನ್ನು ನಿರ್ವಹಿಸುತ್ತಾ, ಅಧಿಕಾರಕ್ಕಿಂತ ಪಕ್ಷ, ಸಂಘಟನೆ ಕಟ್ಟುವುದು ಮುಖ್ಯ ಎಂದು ಜೀವನ ಸವೆಸುತ್ತಾ, ಯಾವುದೋ ಸಂದರ್ಭದಲ್ಲಿ ಪಕ್ಷದ ಹಿರಿಯರು ಸೂಚನೆ ನೀಡಿ ಜವಾಬ್ದಾರಿ ಹೊರು ಎಂದಾಗ ಅದನ್ನು ಕೂಡ ಸೇವೆ ಎಂದು ಸ್ವೀಕರಿಸಿ, ಭಾರತಾಂಬೆಯ ಕಿರೀಟ ದಶದಿಕ್ಕುಗಳಿಗೂ ಕಾಣಿಸುವಂತೆ ವಿಶ್ವಗುರುವಿನ ರಾಜಮಾರ್ಗದಲ್ಲಿ ನಡೆಯುವುದಕ್ಕೆ ಯೋಗ ಮತ್ತು ಯೋಗ್ಯತೆ ಸಮ್ಮಿಳಿತವಾಗಬೇಕು. ಹಾಗೆ ಬಾಲ್ಯದಲ್ಲಿಯೇ ಸಂಘದ ಕಾರ್ಯಕರ್ತರಾಗಿ, ಮೈಯಲ್ಲಿ ಬಿಸಿರಕ್ತ ಪ್ರವಹಿಸುವಾಗ ಪ್ರಚಾರಕರಾಗಿ, ದೇಹದಲ್ಲಿ ಸೇವೆ ಎಂಬ ಯಜ್ಞದ ಕಿಡಿ ಚಿಮ್ಮುವಾಗ ಪಕ್ಷದ ಜವಾಬ್ದಾರಿ ಸ್ವೀಕರಿಸಿದ ಮುಖಂಡರಾಗಿ, ಸವಾಲುಗಳೇ ಬೆಟ್ಟವಾಗಿ ನಿಂತಿದ್ದ ಸಂದರ್ಭದಲ್ಲಿ ಗುಜರಾತಿನ ಮುಖ್ಯಮಂತ್ರಿ ಸ್ಥಾನದ ಹೊಣೆ ಹೊತ್ತುಕೋ ಎಂದು ಹಿರಿಯರು ಸೂಚಿಸಿದಾಗ ಅದನ್ನು ವಿಧೇಯದಿಂದ ಸ್ವೀಕರಿಸಿ, ಭಾರತಾಂಬೆ ಕೈಬೀಸಿ ಕರೆದಾಗ ಈ ದೇಶದ ಗದ್ದುಗೆಯ ಜವಾಬ್ದಾರಿಯನ್ನು ಸ್ವೀಕರಿಸಿದ ಸೇವಕ ನಾನು ಎಂದು ವಿನಯದಿಂದ ಹೇಳಿದ ಭರತಖಂಡದ ವಜ್ರ ನರೇಂದ್ರ ಮೋದಿ ಅವರ ಜನ್ಮದಿನದಂದು ಅವರಿಗೆ ಹೃದಯಾಂತರಾಳದ ನಮನಗಳು.

ಮೋದಿ ಅವರು ರಾಜಕೀಯರಹಿತವಾಗಿ ದೇಶದ ಬಡಜನರ ಬಗ್ಗೆ ಯೋಚಿಸುತ್ತಾರೆ ಎನ್ನುವುದಕ್ಕೆ ಅವರು ಮೇಲ್ವರ್ಗದಲ್ಲಿ ಹುಟ್ಟಿದ ಬಡವರಿಗಾಗಿ ಶಿಕ್ಷಣ ಹಾಗೂ ಉದ್ಯೋಗಾವಕಾಶದಲ್ಲಿ ಮೀಸಲಾತಿಯನ್ನು ಕೊಟ್ಟಿರುವುದೇ ಸಾಕ್ಷಿ. ಹಿಂದೆ ಜಾತಿಗಳಿಗೆ ಮಾತ್ರ ಮೀಸಲಾತಿ ಇತ್ತು. ಒಬ್ಬ ಬಡವ ಮೇಲ್ವರ್ಗದಲ್ಲಿ ಹುಟ್ಟಿದ ಒಂದೇ ಕಾರಣಕ್ಕೆ ಸರಕಾರದ ಎಲ್ಲಾ ಸೌಲಭ್ಯಗಳಿಂದ ವಂಚಿತನಾಗುವ ಸಾಧ್ಯತೆ ಇತ್ತು. ಮೋದಿ ಅದನ್ನು ಪರಿಗಣಿಸಿ ಮಾಡಿದ ಐತಿಹಾಸಿಕ ನಿರ್ಧಾರ ಇವತ್ತು ಅಸಂಖ್ಯಾತ ಬಡವರ ಮೊಗದಲ್ಲಿ ಹರುಷವನ್ನು ತಂದಿದೆ.

ಭದ್ರ ಭಾರತಕ್ಕೆ ಬುನಾದಿ ಹಾಕಿದ ‘ಮೋದಿ ಸಿದ್ಧಾಂತ’

ಇನ್ನು ನೇರವಾಗಿ ಬ್ಯಾಂಕ್‌ ಖಾತೆಗೆ ಸಬ್ಸಿಡಿ ವಿತರಣೆಯ ಮೂಲಕ ಮಧ್ಯವರ್ತಿಗಳಿಗೆ ಸೋರಿಕೆಯಾಗುತ್ತಿದ್ದ ಹಣವನ್ನು ಮೋದಿ ಉಳಿಸಿದ್ದಾರೆ. ಇಲ್ಲಿಯವರೆಗೆ 6.32 ಲಕ್ಷ ಕೋಟಿ ರು. ವಿವಿಧ ಯೋಜನೆಗಳ ಸಬ್ಸಿಡಿ ಹಣ ಫಲಾನುಭವಿಗಳಿಗೆ ವರ್ಗಾವಣೆಯಾಗಿದೆ. ಇದರಲ್ಲಿ ಶೇ.10ರಷ್ಟುಮೊತ್ತ ಮಧ್ಯವರ್ತಿಗಳಿಗೆ ಸೋರಿಕೆಯಾಗಿದ್ದರೂ ಆ ಮೊತ್ತ 63,200 ಕೋಟಿ ರು. ಆಗುತ್ತಿತ್ತು. ಅಷ್ಟೇ ಅಲ್ಲ, ಇಲ್ಲಿಯ ತನಕ ಫಲಾನುಭವಿಗಳ ಹೆಸರಿನಲ್ಲಿ ಯಾರೋ ಹಣವನ್ನು ಪಡೆದುಕೊಳ್ಳುತ್ತಿದ್ದರು. ಈಗ ನೇರ ಬ್ಯಾಂಕಿಗೆ ವರ್ಗಾವಣೆಯಾಗುತ್ತಿರುವುದರಿಂದ ಮತ್ತು ಆ ಖಾತೆಗೆ ಆಧಾರ್‌ ಲಿಂಕ್‌ ಎಲ್ಲ ಇರುವುದರಿಂದ ಎಂಟು ಕೋಟಿ ನಕಲಿ ಫಲಾನುಭವಿಗಳಿಗೆ ಹೋಗುತ್ತಿದ್ದ 1.10 ಲಕ್ಷ ಕೋಟಿ ರು. ಹಣ ಉಳಿತಾಯವಾಗಿದೆ.

ಹಿಂದೆ ಸುಳ್ಳು ದಾಖಲೆ ಪತ್ರದ ಮೂಲಕ ಜನರ ತೆರಿಗೆಯ ಹಣ ಹೊಡೆಯುತ್ತಿದ್ದವರಿಗೆ ಈಗ ಮೋದಿಯ ಮೇಲೆ ಸಿಟ್ಟಿರಬಹುದು. ಆದರೆ ಬಡಜನರಿಗೆ ಮೋದಿ ಬಗ್ಗೆ ವಿಶ್ವಾಸ ವೃದ್ಧಿಸಿದೆ. ಹಿಂದೆ ಕೇಂದ್ರ ಸರಕಾರ ನೀಡುವ ಪದ್ಮ ಪ್ರಶಸ್ತಿಗಳು ದೆಹಲಿಯಲ್ಲಿ ಪ್ರಭಾವಿಗಳಾಗಿರುವವರ ಪಾಲಾಗುತ್ತಿದ್ದವು. ಮೋದಿ ಪ್ರಧಾನಿಯಾದ ನಂತರ ಅರ್ಹರನ್ನು ಗುರುತಿಸಿ ಈ ಪ್ರಶಸ್ತಿ ನೀಡುತ್ತಿದ್ದಾರೆ. ಅದಕ್ಕೆ ಮಂಗಳೂರಿನ ಹರೇಕಳ ಹಾಜಬ್ಬನಂತವರೇ ಸಾಕ್ಷಿ. ಬಸ್‌ ನಿಲ್ದಾಣದಲ್ಲಿ ಕಿತ್ತಳೆ, ಮೂಸಂಬಿ ಮಾರಿದ ಹಣದಲ್ಲಿ ಶಾಲೆ ಕಟ್ಟಿದ ಅಕ್ಷರ ಸಂತ ಹರೇಕಳ ಹಾಜಬ್ಬನವರಿಗೆ ಪದ್ಮಶ್ರೀ ಬರಬೇಕಾದರೆ ಮೋದಿಯೇ ಬರಬೇಕಾಯಿತು ಎನ್ನುವುದು ನಗ್ನಸತ್ಯ.

ಇನ್ನು ನಿಮಗೆ ಸರ್ಕಾರಿ ವ್ಯವಸ್ಥೆಯಲ್ಲಿ ಏನಾದರೂ ಸಮಸ್ಯೆಗಳಾದಲ್ಲಿ ಆನ್‌ಲೈನ್‌ನಲ್ಲಿ ದೂರು ನೀಡಲು ಮಾಡಿರುವ ಪೋರ್ಟಲ… ಕೂಡ ಆಡಳಿತ ಸುಧಾರಣೆಗೆ ಮಾಡಿರುವ ಉತ್ತಮ ಕ್ರಮ. ಇನ್ನು ಅನೇಕರಿಗೆ ಗೊತ್ತಿಲ್ಲದ ವಿಷಯ ಏನೆಂದರೆ ಮೋದಿ ಎಷ್ಟೇ ಬ್ಯುಸಿ ಇದ್ದರೂ ತಿಂಗಳಲ್ಲಿ ಒಂದು ಸಲ ವಿವಿಧ ರಾಜ್ಯಗಳ ಅಧಿಕಾರಿಗಳೊಂದಿಗೆ ಹಾಗೂ ಆ ರಾಜ್ಯದ ಮುಖ್ಯ ಕಾರ್ಯದರ್ಶಿಯೊಂದಿಗೆ ಆಯಾ ರಾಜ್ಯದ ಅಭಿವೃದ್ಧಿ ಯೋಜನೆಗಳ ಬಗ್ಗೆ ವಿಡಿಯೋ ಕಾನ್ಫರೆಸ್ಸ್‌ ಮೂಲಕ ಸಭೆ ನಡೆಸುತ್ತಾರೆ. ಯಾವುದಾದರೂ ಅಭಿವೃದ್ಧಿ ಯೋಜನೆಗಳು ಪ್ರಗತಿ ಕಾಣದಿದ್ದರೆ ಅದಕ್ಕೆ ಸಂಬಂಧಪಟ್ಟಅಧಿಕಾರಿಗಳಿಂದ ಉತ್ತರ ಪಡೆಯುತ್ತಾರೆ.

ಒಮ್ಮೆ ಏನಾಯಿತು ಎಂದರೆ ದೆಹಲಿಯಲ್ಲಿ ಒಂದು ಬೃಹತ್‌ ಸಂಪರ್ಕ ಮಾರ್ಗಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ ಮಾಡಿದ್ದರು. ಶಿಲಾನ್ಯಾಸ ಮಾಡಿ ಒಂದು ವರ್ಷವಾದರೂ ಕಾಮಗಾರಿಯಲ್ಲಿ ಏನೂ ಪ್ರಗತಿ ಕಾಣಲಿಲ್ಲ. ಇಂತಹ ವಿಳಂಬಿತ ಕಾಮಗಾರಿಯ ಪ್ರಗತಿ ಪರಿಶೀಲನೆಗೆ ಇರುವ ಪ್ರಗತಿ ಪೋರ್ಟಲ… ಸಭೆಯಲ್ಲಿ ಮೋದಿ ಈ ಕುರಿತು ಅಧಿಕಾರಿಗಳಿಗೆ ಪ್ರಶ್ನಿಸಿದಾಗ ವಿವಿಧ ಇಲಾಖೆಗಳಿಂದ ಅನುಮತಿ ಪತ್ರ ದೊರೆಯದೇ ಇದ್ದ ಕಾರಣ ಕಾಮಗಾರಿ ಮುಂದುವರೆದಿಲ್ಲ ಎನ್ನುವ ಮಾತನ್ನು ಅಧಿಕಾರಿಗಳು ಹೇಳಿದರು. ಸಭೆಯಲ್ಲಿಯೇ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಮೋದೀಜಿ, ಇನ್ನು ಮುಂದೆ ಎಲ್ಲ ಇಲಾಖೆಗಳಿಂದ ಅನುಮತಿ ಸಿಗದ ಹೊರತು ತಾವು ಯಾವುದೇ ಶಿಲಾನ್ಯಾಸ ಮಾಡುವುದಿಲ್ಲ ಎಂದು ಖಡಕ್ಕಾಗಿ ಹೇಳಿದರು. ಆ ಬಳಿಕ ಆ ಸಂಬಂಧಿತ ಕಾಮಗಾರಿ ಯಾವ ವೇಗವನ್ನು ಪಡೆಯಿತೆಂದರೆ ಆಶ್ಚರ್ಯಕರ ರೀತಿಯಲ್ಲಿ ಒಂದೂವರೆ ವರ್ಷದಲ್ಲಿ ಪೂರ್ಣವಾಯಿತು. ಮೋದಿಯವರು ಕಳೆದ 20-30 ವರ್ಷಗಳಲ್ಲಿ ಏನೂ ಪ್ರಗತಿ ಕಾಣದೇ ಮೂಲೆಗುಂಪಾಗಿದ್ದ ಸುಮಾರು 250 ಬೃಹತ್‌ ಪ್ರಾಜೆಕ್ಟ್ಗಳ ಬಗ್ಗೆ ಕೂಲಂಕಷ ವರದಿ ತರಿಸಿ ಅಂದಾಜು 12 ಲಕ್ಷ ಕೋಟಿ ರು.ಗಳ ಯೋಜನೆಯನ್ನು ದಡ ಮುಟ್ಟಿಸಿದ್ದಾರೆ.

ಮೋದಿಯವರು ಜನಸಾಮಾನ್ಯರ ಕೈಗೆಟಕುವ ಪ್ರಧಾನಿ ಎಂದು ಹಲವು ಬಾರಿ ಸಾಬೀತಾಗಿದೆ. ತಮ್ಮ ಟ್ವೀಟರ್‌ ಅಕೌಂಟ್‌ ಮೂಲಕ ಜನರ ಅಹವಾಲುಗಳನ್ನು ಸ್ವೀಕರಿಸುವ ಅವರು ಪ್ರತಿ ತಿಂಗಳು ರೇಡಿಯೋ ಕಾರ್ಯಕ್ರಮ ‘ಮನ್‌ ಕಿ ಬಾತ್‌’ ಮೂಲಕ ಸಮಾಜದಲ್ಲಿ ಆಗುತ್ತಿರುವ ಸಕಾರಾತ್ಮಕ ಬದಲಾವಣೆಗಳನ್ನು ಉದಾಹರಿಸಿ ಸಾಧನೆಯ ಹಾದಿಯಲ್ಲಿ ನಡೆಯುತ್ತಿರುವ ರಾಷ್ಟ್ರದ ಮೂಲೆ ಮೂಲೆಗಳ ಜನಸಾಮಾನ್ಯರನ್ನು ಉಲ್ಲೇಖಿಸಿ ಸ್ಫೂರ್ತಿಯ ಮಾತುಗಳನ್ನು ಆಡುತ್ತಾರೆ. ಸದಾ ಅಭಿವೃದ್ಧಿ ಕಾರ್ಯಗಳ ನಡುವೆ ವ್ಯಸ್ತರಾಗಿದ್ದರೂ ಆಗಾಗ ದೆಹಲಿಯ ಮೆಟ್ರೋ ರೈಲಿನಲ್ಲಿ ಮೋದಿ ಸಂಚರಿಸುತ್ತಾರೆ. ಅಲ್ಲಿ ಸಿಗುವ ಜನರೊಡನೆ ಸುಲಭವಾಗಿ ಸಂವಾದ ನಡೆಸುತ್ತಾರೆ. ನಾಗರಿಕರು ಫ್ರೀಯಾಗಿ ಅವರೊಂದಿಗೆ ಕುಳಿತು ಮಾತನಾಡುವ ಅವಕಾಶ ದೊರೆಯುತ್ತದೆ. ನಿಯಮಿತವಾಗಿ ಪುರಭವನದಲ್ಲಿ ವಿವಿಧ ಕ್ಷೇತ್ರಗಳ ಉದ್ಯೋಗಿಗಳೊಡನೆ ಸಂವಾದ ನಡೆಸುವ ಮೋದಿಯವರು ಐಟಿ ದಿಗ್ಗಜರು, ಎಂಜಿನಿಯರುಗಳು, ವಿದ್ಯಾರ್ಥಿಗಳೊಡನೆ ಕೂಡ ಅಭಿಪ್ರಾಯ ಸಂಗ್ರಹಿಸಿಕೊಳ್ಳುತ್ತಾರೆ. ಕಳೆದ ಬಾರಿ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ನಡೆಸಿ ವಿದ್ಯಾರ್ಥಿಗಳಲ್ಲಿ ಭರವಸೆಯನ್ನು ಮೋದಿ ತುಂಬಿದ್ದರು. ಕೊರೋನಾದಿಂದ ಕಲಿಕೆ ಅಸ್ತವ್ಯಸ್ತವಾಗಿದ್ದ ಹಂತದಲ್ಲಿ ಮೋದಿಯವರ ಸ್ಫೂರ್ತಿಯ ಮಾತುಗಳು ವಿದ್ಯಾರ್ಥಿಗಳಲ್ಲಿ ಭವಿಷ್ಯದ ಆಶಾಕಿರಣವನ್ನು ತುಂಬಿತ್ತು. ಮೋದಿಜಿಯವರೇ ಬರೆದ ಎಕ್ಸಾಂ ವಾರಿಯರ್ಸ್‌ ಪುಸ್ತಕ ಉತ್ತಮ ಜನಾಭಿಪ್ರಾಯವನ್ನು ಪಡೆದಿತ್ತು.

ಇನ್ನು ಮೋದಿ ಅವರು ಪ್ರಪಂಚದ ತಮ್ಮ ವಿರೋಧಿ ರಾಷ್ಟ್ರಗಳಿಗೂ ಇದು 2014ರ ಹಿಂದಿನ ಭಾರತ ಅಲ್ಲ ಎನ್ನುವುದನ್ನು ಸಾಧಿಸಿ ತೋರಿಸಿದರು. ಇದರ ಪರಿಣಾಮವೇ ಭಾರತ-ಚೀನಾ ಗಡಿಯಲ್ಲಿ ಭಾರತ ಉತ್ತಮ ದರ್ಜೆಯ ರಸ್ತೆಗಳನ್ನು ನಿರ್ಮಿಸಿರುವುದು. ಅಲ್ಲಿ ಹಿಂದೆ ಚೀನಾದ ಸರ್ವಾಧಿಕಾರವೇ ನಡೆಯುತ್ತಿತ್ತು. ಭಾರತ ಕೇವಲ ಮೂಕಪ್ರೇಕ್ಷಕನಾಗಿಯೇ ನೋಡಬೇಕಾಗುತ್ತಿತ್ತು. ಆದರೆ ನಾವು ನೋಡುವುದಕ್ಕೆ ಅಲ್ಲ, ಆಡುವುದಕ್ಕೆ ಬಂದಿದ್ದೇವೆ ಎಂದು ಮೋದಿ ಮಾಡಿ ತೋರಿಸಿದರು. ಚೀನಾದ ಗಡಿಯಲ್ಲಿ ಭಾರತದ ಯುದ್ಧ ವಿಮಾನಗಳು ಇಳಿಯಲು ಅನುಕೂಲವಾಗುವಂತೆ ಹೆದ್ದಾರಿಗಳ ನಿರ್ಮಾಣವೂ ಅಗಿದೆ. ಅಷ್ಟೇ ಅಲ್ಲದೆ ಜಾಗತಿಕವಾಗಿ ಯಾವುದೇ ಒಪ್ಪಂದ ಇರಲಿ ಅದು ಹವಾಮಾನ ಬದಲಾವಣೆಯ ಒಪ್ಪಂದ, ಮುಕ್ತ ಆಮದು-ರಫ್ತು ಒಪ್ಪಂದ, ಬೃಹತ್‌ ಕಂಪೆನಿಗಳ ಲಾಬಿ ಸಹಿತ ಪ್ರತಿಯೊಂದು ತಮಗೆ ಅನುಕೂಲವಾಗುವಂತೆ ಚೀನಾ ರೂಪಿಸುತ್ತಿದ್ದ ರಣತಂತ್ರಗಳನ್ನು ಒಪ್ಪಂದೆ ಅದು ಭಾರತದ ಪರವಾಗಿದ್ದರೆ ಮಾತ್ರ ಸಹಿ ಹಾಕುವಷ್ಟುನಮ್ಮ ರಾಷ್ಟ್ರವನ್ನು ಪ್ರಬಲವನ್ನಾಗಿ ಮಾಡಿರುವುದು ಮೋದಿಜಿ. ಅದು ಸುಲಭದ ಮಾರ್ಗವೂ ಆಗಿರಲಿಲ್ಲ. ಅದಕ್ಕಾಗಿ ಮೋದಿ ವಿಶ್ವದ ರಾಷ್ಟ್ರಗಳನ್ನು ಮೊದಲು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು. ಅದನ್ನು ಮೋದಿ ಕ್ರಾಂತಿಕಾರಿ ಹೆಜ್ಜೆಗಳ ಮೂಲಕ ಮಾಡಿ ತೋರಿಸಿದರು. ಚೀನಾ ದಂಗಾಗಿತ್ತು.

ಮೋದಿ ಪ್ರಧಾನಿಯಾದ ಬಳಿಕ ವಿಶ್ವ ಭೂಪಟದಲ್ಲಿ ಭಾರತದ ಬಗ್ಗೆ ಇರುವ ಗೌರವ ಹೆಚ್ಚುವಂತೆ ಮಾಡಿದರು. ಇದರಿಂದ ಪ್ರಪಂಚದ ಬಲಾಢ್ಯ ರಾಷ್ಟ್ರಗಳು ನಮ್ಮತ್ತ ನೋಡುವಂತೆ ಮಾಡಿದರು. ಅದಕ್ಕೆ ತಾಜಾ ಉದಾಹರಣೆ ಕೋವಿಡ್‌ ಲಸಿಕೆ. ಜಾಗತಿಕವಾಗಿ ಮುಂದುವರೆದ ರಾಷ್ಟ್ರಗಳು ಮಾತ್ರ ವರ್ಷಾಂತ್ಯದೊಳಗೆ ಲಸಿಕೆಯನ್ನು ಉತ್ಪಾದಿಸಬಹುದು ಎನ್ನುವ ನಿರೀಕ್ಷೆ ಮೀರಿಸಿ ನಾವು ಕೂಡ ಉತ್ಪಾದಿಸಬಲ್ಲೆವು. ಮಾತ್ರವಲ್ಲ, ಬೇರೆ ರಾಷ್ಟ್ರಗಳಿಗೆ ರಫ್ತು ಮಾಡಲು ಶಕ್ತವಾಗಿದ್ದೇವೆ ಎಂದು ತೋರಿಸಿಕೊಟ್ಟಿದ್ದೇ ಮೋದಿ. ಮುಂದುವರೆದ ರಾಷ್ಟ್ರಗಳು ದಿನಕ್ಕೆ ಕೆಲವು ಲಕ್ಷ ಲಸಿಕೆಯನ್ನು ವಿತರಿಸುವಲ್ಲಿ ತೊಡಗಿದ್ದರೆ ಭಾರತ ಒಂದೇ ದಿನದಲ್ಲಿ ಕೋಟಿ ಲಸಿಕೆಗಳನ್ನು ದೇಶದ ಮೂಲೆಮೂಲೆಗಳಲ್ಲಿಯೂ ನಾಗರಿಕರಿಗೆ ನೀಡಿ ಈ ಕೊರೊನಾ ಯುದ್ಧದಲ್ಲಿ ಅಕ್ಷರಶಃ ಜಯಿಸಿಬಿಟ್ಟಿತ್ತು. ಇದನ್ನು ಕಂಡ ಬೆರಗಾದ ವಿಶ್ವ ಆರೋಗ್ಯ ಸಂಸ್ಥೆ ಭಾರತದ ಸಾಧನೆಯನ್ನು ಮೆಚ್ಚಿದೆ. ಒಟ್ಟಿನಲ್ಲಿ ಈ ಕೊರೋನಾ ವಿರುದ್ಧದ ಮಹಾಯುದ್ಧದ ನಡುವೆಯೂ ಇಷ್ಟುದೊಡ್ಡ ದೇಶವೊಂದರ ಅಭಿವೃದ್ಧಿ, ಜನರ ಸುರಕ್ಷೆ ಮತ್ತು ದೇಶದ ಭವಿಷ್ಯದ ಕಾಳಜಿಯನ್ನು ಏಕಕಾಲದಲ್ಲಿ ನಿಭಾಯಿಸಬಲ್ಲ ಸಾಮರ್ಥ್ಯ ಒಬ್ಬ ಮನುಷ್ಯನಲ್ಲಿಯೇ ಇದೆ ಎನ್ನುವುದೇ ನಮಗೆಲ್ಲರಿಗೂ ಅವರನ್ನು ನೋಡುವಾಗ ಸ್ಫೂರ್ತಿಯಾಗಿದೆ.

Follow Us:
Download App:
  • android
  • ios