,ಮೈಸೂರು, (ಸೆ.29): ಬಿಜೆಪಿ ನಾಯಕ ಮುನಿರತ್ನ ಅವರಿಗೆ ಇಂದು (ಮಂಗಳವಾರ) ಡಬಲ್ ಧಮಾಕ. ಒಂದು ಕೊರೋನಾದಿಂದ ಗುಣಮುಖರಾಗಿದ್ದು, ಮತ್ತೊಂದು ಆರ್‌.ಆರ್‌.ನಗರಕ್ಕೆ ಉಪಚುನಾವಣೆ ಘೋಷಣೆಯಾಗಿದೆ.

ಕಾಗೆ ಕೂಡುವುದಕ್ಕೂ ಟೊಂಗೆ ಮುರಿಯುವುದಕ್ಕೂ ಸರಿಯಾಯ್ತು ಎನ್ನುವಂತೆ ಕೊರೋನಾದಿಂದ ಗುಣಮುಖರಾಗುವುದಕ್ಕೂ ಬೈ ಎಲೆಕ್ಷನ್‌ ಘೋಷಣೆಯಾಗಿದೆ. ಇದೇ ಖುಷಿಯಲ್ಲಿ ಮುನಿರತ್ನ ಅವರು ಇಂದು (ಮಂಗಳವಾರ) ಮೈಸೂರಿಗೆ ತೆರಳಿ ಚಾಮುಂಡೇಶ್ವರಿ ದರ್ಶನ ಪಡೆದುಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಕೊರೋನಾ ಪಾಸಿಟಿವ್ ಇತ್ತು, ನಿನ್ನೆ ನೆಗೆಟಿವ್ ಬಂದಿದೆ. ಹಾಗಾಗಿ ದೇವರ ದರ್ಶನಕ್ಕೆ ಬಂದಿದ್ದೇನೆ ಎಂದರು.

ಗರಿಗೆದರಿದ ರಾಜಕೀಯ ಚಟುವಟಿಕೆ: RR ನಗರ ಅಭ್ಯರ್ಥಿ ಆಯ್ಕೆ ಕುತೂಹಲ

 ರಾಜರಾಜೇಶ್ವರಿ ಕ್ಷೇತ್ರ ಅಭಿವೃದ್ಧಿಯಾಗುತ್ತಿರುವ ಕ್ಷೇತ್ರ. ಅಲ್ಲಿ ನಮ್ಮ ಸರ್ಕಾರ ಇದೆ, ನಮ್ಮ ನಾಯಕರಿದ್ದಾರೆ, ನಮ್ಮ ಮುಖ್ಯಮಂತ್ರಿ ಇದ್ದಾರೆ. ಆಡಳಿತ ಪಕ್ಷದಲ್ಲಿರುವುದರಿಂದ ಅಭಿವೃದ್ಧಿ ಸಾಧ್ಯ. ಈ ಅವಕಾಶ ಉಪಯೋಗಿಸಿಕೊಂಡು ಅಭಿವೃದ್ಧಿ ಮಾಡುತ್ತೇವೆ. ನಾವು ಗೆದ್ದೇ ಗೆಲ್ಲುತ್ತೇವೆ. ಸದ್ಯ ಎಲ್ಲರ ಆಶೀರ್ವಾದ ಇದೆ. ಕ್ಷೇತ್ರಕ್ಕೆ ಆಡಳಿತ ಪಕ್ಷದ ಶಾಸಕನ ಅವಶ್ಯಕತೆ ಇದೆ. ಯಾವ ಗೊಂದಲ ಇದ್ದರೂ ವರಿಷ್ಠರು ಬಗೆಹರಿಸುತ್ತಾರೆ. ಟಿಕೆಟ್ ಕೊಡುವುದನ್ನು ವರಿಷ್ಠರು ತೀರ್ಮಾನ ಮಾಡುತ್ತಾರೆ. ಕ್ಷೇತ್ರವನ್ನು ಬಿಜೆಪಿ ವಶಪಡಿಸಿಕೊಳ್ಳುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಪಚುನಾವಣೆ ಫೆಬ್ರವರಿಯಲ್ಲೇ ನಡೆಯುತ್ತೆ ಎನ್ನುವ ನಿರೀಕ್ಷೆ ಇತ್ತು. ಆದ್ರೆ, ಕಾನೂನು ತೊಡಕಿನಿಂದ ಅದು ಆಗಲಿಲ್ಲ. ನಾವು 17 ಮಂದಿ ಯಾವಾಗ ರಾಜೀನಾಮೆ ಕೊಟ್ಟೆವೋ ಅಂದಿನಿಂದಲೇ ನಾವು ಬಿಜೆಪಿಗೆ ಸೇರಿದಂತೆ ಅರ್ಥ. ನೂರಕ್ಕೆ ನೂರು ನನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ. ಸಿಎಂ ಯಡಿಯೂರಪ್ಪನವರು ಕೊಟ್ಟ ಮಾತನ್ನ ಉಳಿಸಿಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.