ವಿಧಾನ ಪರಿಷತ್‌ (ಮಾ.11): ವಿಧಾನ ಸೌಧ ಎಂಬ ಸುರ ಸುಂದರಿಗೆ ಮಾರು ಹೋಗದವರು ಯಾರೂ ಇಲ್ಲ. ವಿಧಾನಸೌಧದ ಮೂರನೇ ಮಹಡಿ ಏರಲು ಮನೆ ಮಠ ಕಳೆದುಕೊಂಡವರು ಪ್ರೇತಾತ್ಮರಾಗಿ ಇಲ್ಲಿಯೇ ಸುತ್ತಾಡುತ್ತಿದ್ದಾರೆ..

ವಿಧಾನಸೌಧಕ್ಕೆ ಬರಲು ಹಂಬಲಿಸಿ (ಶಾಸಕ, ಸಚಿವರಾಗಲು ಬಯಸಿ) ಜಮೀನು, ಮನೆ, ಮಠ ಕಳೆದುಕೊಂಡವರನ್ನು ಬಿಜೆಪಿ ಸದಸ್ಯ ಎಚ್‌. ವಿಶ್ವನಾಥ್‌ ಬಣ್ಣಿಸಿದ್ದು ಹೀಗೆ.

2021-22 ಸಾಲಿನ ಆಯವ್ಯಯ ಕುರಿತ ಚರ್ಚೆ ವೇಳೆ ವ್ಯಂಗ್ಯ, ಹಾಸ್ಯ ಮಿಶ್ರಿತ ಶೈಲಿಯಲ್ಲಿ ಮಾತನಾಡಿದ ಅವರು, ‘ಉತ್ತರ ಕರ್ನಾಟಕದ ಜನರು ವಿಧಾನಸೌಧಕ್ಕೆ ಮನಸೋತು ಮನೆ, ಮಠ ಕಳೆದುಕೊಳ್ಳುತ್ತಾರೆ. ಇಂತಹವರ ಸಂಖ್ಯೆ ಹೆಚ್ಚಾಗಿದೆ. ನಮ್ಮ ಕಡೆಯಿಂದ ಬರುವವರು ಕಡಿಮೆ. ಆದರೆ ಉತ್ತರ ಕರ್ನಾಟಕದಿಂದ ಬಂದವರನ್ನು ಮಂತ್ರಿ ಮಾಡುತ್ತೇನೆಂದು ಟೋಪಿ ಹಾಕುತ್ತಾರೆ. ಕೊನೆಗೂ ಶಾಸಕನೂ ಆಗದೇ, ಮಂತ್ರಿಯೂ ಆಗದೇ ಇಲ್ಲಿಯೇ ಪಿಶಾಚಿ ತರ ವಿಧಾನಸೌಧ ಸುತ್ತಾಡುತ್ತಿದ್ದಾರೆ’ ಎಂದರು.

ಬಿಜೆಪಿ ಮುಖಂಡ ವಿಶ್ವನಾಥ್‌ಗೆ ಭಾರಿ ನಿರಾಸೆ .

‘ಇಂತಹ ಸುಂದರವಾದ ವಿಧಾನಸೌಧವನ್ನು ಕೆಂಗಲ್‌ ಹನುಮಂತಯ್ಯ ಕಟ್ಟಿದರು’ ಎಂದು ಹೇಳುತ್ತಿದ್ದಂತೆ ಬಿಜೆಪಿಯ ಭಾರತಿ ಶೆಟ್ಟಿಅವರು, ‘ಸುಂದರನೋ, ಸುಂದರಿಯೋ’ ಎಂದು ಕೆಣಕಿದಾಗ, ‘ನಿಮಗಿಂತ ಸುಂದರಿ ಯಾರಿದ್ದಾರೆ?’ ಎನ್ನುವ ಮೂಲಕ ವಿಶ್ವನಾಥ್‌ ಸದನವನ್ನು ನಗೆಗಡಲಿಗೆ ದೂಕಿದರು. ವಿಧಾನಸೌಧಕ್ಕೆ ಎಂತೆಂತಹ ಜನ ಬರುತ್ತಾರೆ ಎಂಬುದನ್ನು ಬಣ್ಣಿಸಿದ ಅವರು, ‘ಒಂದು ಬಾರಿ ಒಬ್ಬ ನಮ್ಮ ಬಳಿ ಬಂದು, ‘ನಿಮಗೆ ಗಜಯೋಗ ಇದೆ, ಒಂದಲ್ಲಾ ಒಂದು ದಿನ ವಿಧಾನಸೌಧ ಮೂರನೇ ಮಹಡಿಗೆ ಬಂದೇ ಬರುತ್ತೀರಾ’ ಎಂದ. ಅನಂತರ ಈಗ 500 ರು. ಕೊಡಿ ಎಂದು ಕೇಳಿದ’ ಎಂದರು.

‘ಮತ್ತೊಂದು ಬಾರಿ ಯಾವುದೋ ಕಾರ್ಯಕ್ರಮ ಮುಗಿಸಿಕೊಂಡು ಮುಖ್ಯಮಂತ್ರಿಯಾಗಿದ್ದ ಎಸ್‌.ಎಂ. ಕೃಷ್ಣ ಅವರ ಜೊತೆ ಕಾರಿನತ್ತ ಹೋಗುತ್ತಿದ್ದಾಗ, ಒಬ್ಬ ಬಂದು ‘ಏನಯ್ಯ ವಿಶ್ವನಾಥ್‌, ಇವರ ಜೊತೆ ಹೋಗ್ತಾ ಇದ್ದೀರಿ, ಹೀಗೆ ಹೋಗ್ತಾ ಇದ್ದರೆ ವಿಧಾನಸೌಧ ಮಾರಿ ಬಿಡ್ತೀರಿ’ ಎಂದ. ನಂತರ ಕಾರಿನಲ್ಲಿ ಹೋಗುವಾಗ ಎಸ್‌.ಎಂ. ಕೃಷ್ಣ, ‘ಯಾರು ಆ ವ್ಯಕ್ತಿ, ಯಾಕೆ ಹೀಗೆ ಹೇಳಿದ?’ ಎಂದರು. ಅದಕ್ಕೆ ನಾನು ‘ಆತ ಹರಿಶ್ಚಂದ್ರ ಅಂತ ತೀರ್ಥಹಳ್ಳಿ ಕಡೆಯವನು. ಆಗಾಗ ಸತ್ಯ ಹೇಳ್ತಾ ಇರ್ತಾನೆ ಎಂದು ಹೇಳಿದೆ’ ಎಂದು ಮತ್ತೆ ನಗೆ ಬುಗ್ಗೆ ಹುಟ್ಟಿಹಾಕಿದರು.

‘ಇವತ್ತು ವಿಧಾನಸೌಧ ಮಾಲ್‌ ರೀತಿ ಆಗಿದೆ. ಎಲ್ಲ ರೀತಿಯ ಕ್ರಯ-ವಿಕ್ರಯ ನಡೆಯುತ್ತಿದೆ. ಕನ್ನಡ ಸಹ ಮಾರಬಹುದಾಗಿದೆ. ಅಂತಹ ಸ್ಥಿತಿಗೆ ನಾವು ವಿಧಾನಸೌಧವನ್ನು ತಂದಿಟ್ಟಿದ್ದೇವೆ. ದಲ್ಲಾಳಿಗಳು, ಗುತ್ತಿಗೆದಾರರು, ವರ್ಗಾವಣೆ ದಂಧೆ ಮಾಡುವವರು ವಿಧಾನಸೌಧಕ್ಕೆ ಬರುತ್ತಿದ್ದಾರೆ. ಒಬ್ಬರೂ ಕೂಡಾ ನಮ್ಮ ಊರಿಗೆ ಕೊಳವೆ ಬಾವಿ, ರಸ್ತೆ ಬೇಕು ಎಂದು ಕೇಳಲು ಬರುವುದಿಲ್ಲ’ ಎಂದು ಹೇಳಿದರು.