ರೆಡ್ಡಿಗೂ ನಮಗೂ ಏನ್ರೀ ಸಂಬಂಧ?: ಈಶ್ವರಪ್ಪ ಗರಂ!
ಕಳಸಕೊಪ್ಪದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಗರಂ! ರೆಡ್ಡಿ ಕುರಿತು ಕೇಳಿದ ಪ್ರಶ್ನೆಗೆ ಸಿಟ್ಟಾದ ಈಶ್ವರಪ್ಪ! ಬೇರೆ ಪ್ರಶ್ನೆ ಕೇಳಿ ಎಂದು ಮಾಧ್ಯಮದವರಿಗೆ ಸಿಡುಕಿದ ಈಶ್ವರಪ್ಪ! ಟಿಪ್ಪು ಜಯಂತಿ ಆಚರಣೆ ಹಿಂದೆ ಕೋಮುವಾದಿ ಅಜೆಂಡಾ! ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಬಿಎಜಪಿ ಹೋರಾಟ
ಮಲ್ಲಿಕಾರ್ಜುನ ಹೊಸಮನಿ
ಬಾಗಲಕೋಟೆ(ನ.9): ಸಿಸಿಬಿ ಪೊಲೀಸರು ಜನಾರ್ದನ ರೆಡ್ಡಿ ಹುಡುಕಾಟದಲ್ಲಿರುವ ಕುರಿತು ಕೇಳಿದ ಪ್ರಶ್ನೆಗೆ ಬಿಜೆಪಿ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಗರಂ ಆದ ಘಟನೆ ಬಾಗಲಕೋಟೆ ಜಿಲ್ಲೆಯ ಕಳಸಕೊಪ್ಪದಲ್ಲಿ ನಡೆದಿದೆ.
ಜನಾರ್ದನ ರೆಡ್ಡಿ ವಂಚನೆ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಸಿಟ್ಟಾದ ಈಶ್ವರಪ್ಪ, ಬಿಜೆಪಿಗೂ ರೆಡ್ಡಿಗೂ ಸಂಬಂಧವಿಲ್ಲ ಎಂದು ಹರಿಹಾಯ್ದರು. ಅಲ್ಲದೇ ರೆಡ್ಡಿ ಹೊರತುಪಡಿಸಿ ಬೇರೆ ಪ್ರಶ್ನೆ ಕೆಳುವಂತೆ ಮಾಧ್ಯಮದವರ ಮೇಲೆ ಈಶ್ವರಪ್ಪ ರೇಗಿದರು.
"
ಇನ್ನು ಟಿಪ್ಪು ಜಯಂತಿ ಕುರಿತು ಕೇಳಲಾದ ಪ್ರಶ್ನೆಗೆ ಸಿಡುಕಿನಿಂದಲೇ ಉತ್ತರಿಸಿದ ಈಶ್ವರಪ್ಪ, ರಾಜ್ಯದ ಜನರಲ್ಲಿ ಟಿಪ್ಪು ರಕ್ತ ಹರಿಯುತ್ತಿಲ್ಲ ಎಂದು ಹೇಳಿದರು. ರಾಜ್ಯದ ಜನತೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಭಾರತಾಂಬೆಯ ರಕ್ತ ಹರಿಯುತ್ತಿದ್ದು, ಮತಾಂಧ ರಾಜನೋರ್ವನ ರಕ್ತ ಹರಿಯುತ್ತಿಲ್ಲ ಎಂದು ಗುಡುಗಿದರು.
ಹಿಂದಿನ ಕಾಂಗ್ರೆಸ್ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಮುಂದಾಗಿದ್ದೇ ರಾಜ್ಯದಲ್ಲಿ ಹಿಂದೂ-ಮುಸ್ಲಿಮರ ನಡುವೆ ವೈಮನಸ್ಸು ಹೆಚ್ಚಾಗಲು ಕಾರಣವಾಗಿತ್ತು. ಪ್ರಸಕ್ತ ಸರ್ಕಾರವೂ ಕೂಡ ಇದೇ ಕೋಮುವಾದಿ ಅಜೆಂಡಾ ಹೊಂದಿರುವುದು ಸ್ಪಷ್ಟವಾಗಿದೆ ಎಂದು ಈಶ್ವರಪ್ಪ ಆರೋಪಿಸಿದರು.
"
ಇದೇ ನವೆಂಬರ್ 15 ರಂದು ಪಕ್ಷದ ಕೋರ್ ಕಮಿಟಿ ಸಭೆ ಕರೆಯಲಾಗಿದ್ದು, ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಮುಂದಿನ ಹಂತದ ಹೋರಾಟದ ರೂಪುರೇಷೆ ಕುರಿತು ನಿರ್ಧರಿಸಲಾಗುವುದು ಎಂದು ಈಶ್ವರಪ್ಪ ಈ ವೇಳೆ ಮಾಹಿತಿ ನೀಡಿದರು.