ಬೆಂಗಳೂರು (ಫೆ.14): ಕೊರೋನಾ ಸೋಂಕುಪೀಡಿತರಾಗಿದ್ದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರು ಗುಣಮುಖರಾಗಲಿ ಎಂದು ಗವಿಪುರ ಗುಟ್ಟಹಳ್ಳಿಯ ಗವಿ ಗಂಗಾಧರೇಶ್ವರ ದೇವರಲ್ಲಿ ಬಸವನಗುಡಿ ಕ್ಷೇತ್ರದ ಶಾಸಕ ರವಿಸುಬ್ರಹ್ಮಣ್ಯ ಹಾಗೂ ಮುಖಂಡ ಚೌಟ್ರಿ ಬಾಬು ಹರಕೆ ಹೊತ್ತಿದ್ದರು. ಅಂತೆಯೇ ಕಾರ್ಯಕರ್ತರ ಅಭಿಲಾಷೆಯಂತೆ ದೇವಾಲಯಕ್ಕೆ ಶನಿವಾರ ಭೇಟಿ ನೀಡಿ ಹರಕೆ ತೀರಿಸಿದೆ ಎಂದು ವಿಜಯೇಂದ್ರ ಹೇಳಿದರು.

ರಾಜ್ಯ ಮಂತ್ರಿಮಂಡಲದಲ್ಲಿ ನಾನು ಮೂಗು ತೂರಿಸುತ್ತಿಲ್ಲ

ಮುಖ್ಯಮಂತ್ರಿ ಮಗ ಹಾಗೂ ಪಕ್ಷದ ಕಾರ್ಯಕರ್ತನಾಗಿ ನನ್ನ ಇತಿಮಿತಿ ಅರಿತು ಕೆಲಸ ಮಾಡುತ್ತಿದ್ದೇನೆಯೇ ಹೊರತು ರಾಜ್ಯ ಸರ್ಕಾರದ ಮಂತ್ರಿ ಮಂಡಲದಲ್ಲಿ ಮೂಗು ತೋರಿಸುವ ಕೆಲಸ ಮಾಡುತ್ತಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.

ಯತ್ನಾಳ್‌ ವಿರುದ್ಧ ಗುಡುಗಿದ ಸಿಎಂ ಪುತ್ರ ವಿಜಯೇಂದ್ರ ..

ನಗರದ ಗವಿಪುರ ಗುಟ್ಟಹಳ್ಳಿಯ ಗವಿ ಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ವಿಶೇಷ ಹರಕೆ ಸಮರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಅವರು, ನನ್ನ ವಿಚಾರವಾಗಿ ಹಲವು ಬಾರಿ ಮಾಧ್ಯಮಗಳಲ್ಲಿ ಅನೇಕ ಚರ್ಚೆ ನಡೆದಿದೆ. ಯಾರೋ ಕೆಲವರ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡಿಲ್ಲ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರ್ಯಕರ್ತರ ಪರಿಶ್ರಮವಿದೆ. ಬಿ.ಎಸ್‌. ಯಡಿಯೂರಪ್ಪನವರ ನೇತೃತ್ವದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದಾಗ ಪಕ್ಷದ ಉಪಾಧ್ಯಕ್ಷನಾಗಿ, ಒಬ್ಬ ಕಾರ್ಯಕರ್ತನಾಗಿ ನನ್ನ ಕರ್ತವ್ಯದ ಬಗ್ಗೆ ಅರಿವಿದೆ. ಮುಖ್ಯಮಂತ್ರಿ ಮಗ, ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ನನ್ನ ಇತಿಮಿತಿಗಳಲ್ಲಿ ಕೆಲಸ ಮಾಡುತ್ತಿದ್ದೇನೆಯೇ ಹೊರತು ಮಂತ್ರಿಮಂಡಲದಲ್ಲಿ ಮೂಗು ತೂರಿಸುವ ಕೆಲಸ ಮಾಡುತ್ತಿಲ್ಲ ಎಂದು ಅವರು ಪುನರುಚ್ಚರಿಸಿದರು.

ಅನಗತ್ಯವಾಗಿ ಅನೇಕ ಬಾರಿ ಕೆಲವರು ನನ್ನ ಹೆಸರು ಪ್ರಸ್ತಾಪ ಮಾಡಿದ್ದಾರೆ. ಅದರ ಬಗ್ಗೆ ಬಹಳ ತಲೆಕೆಡಿಸಿಕೊಳ್ಳುವ ಅವಕಾಶ ಇಲ್ಲ. ರಾಷ್ಟ್ರೀಯ ನಾಯಕರು ನಿನ್ನೆ ನೋಟಿಸ್‌ ಜಾರಿ ಮಾಡಿದ್ದಾರೆ. ಏನು ಉತ್ತರ ಕೊಡುತ್ತಾರೆ ನೋಡೋಣ. ಮುಂದೆ ಏನು ಆಗುತ್ತೆಂದು ಗೊತ್ತಾಗಲಿದೆ. ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಮಸ್ಕಿ ಕ್ಷೇತ್ರದ ಉಸ್ತುವಾರಿಯಾಗಿ ನೇಮಿಸಿದ್ದಾರೆ. ಪಕ್ಷ ಕೊಟ್ಟಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಮಸ್ಕಿಯಲ್ಲಿ ಕಾರ್ಯಕರ್ತನಾಗಿ ಯಶಸ್ವಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.