ಬಿಜೆಪಿ, ಜೆಡಿಎಸ್‌ ದೋಸ್ತಿ ಖಚಿತ: ಹೊರಟ್ಟಿ ಸಭಾಪತಿ!

ಬಿಜೆಪಿ, ಜೆಡಿಎಸ್‌ ದೋಸ್ತಿ ಖಚಿತ: ಹೊರಟ್ಟಿಸಭಾಪತಿ| ಪ್ರತಾಪ್‌ಚಂದ್ರ ರಾಜೀನಾಮೆ ಬಳಿಕ ಹೊರಟ್ಟಿ ಆಯ್ಕೆ?| ಉಪಸಭಾಪತಿ ಪಟ್ಟಕ್ಕೆ ಬಿಜೆಪಿಯ ಪ್ರಾಣೇಶ್‌ ಇಂದು ನಾಮಪತ್ರ

BJP JDS to join hands for Legislative Council Chairman and Dy Chairman post in Karnataka pod

 ಬೆಂಗಳೂರು(ಜ.28): ವಿಧಾನಪರಿಷತ್ತಿನ ಸಭಾಪತಿ ಮತ್ತು ಉಪಸಭಾಪತಿ ಆಯ್ಕೆಗೆ ಸಂಬಂಧಿಸಿದಂತೆ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಜೆಡಿಎಸ್‌ ನಡುವೆ ಮೈತ್ರಿ ಏರ್ಪಟ್ಟಿದ್ದು, ಆ ಪ್ರಕಾರ ಸಭಾಪತಿ ಸ್ಥಾನ ಜೆಡಿಎಸ್‌ ಮತ್ತು ಉಪಸಭಾಪತಿ ಸ್ಥಾನವನ್ನು ಬಿಜೆಪಿ ಹಂಚಿಕೊಳ್ಳಲಿವೆ.

ಸಭಾಪತಿಯಾಗಿ ಜೆಡಿಎಸ್‌ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿಅವರು ಆಯ್ಕೆಯಾಗುವುದು ಬಹುತೇಕ ನಿಚ್ಚಳವಾಗಿದ್ದು, ಉಪಸಭಾಪತಿ ಸ್ಥಾನಕ್ಕೆ ಬಿಜೆಪಿಯ ಎಂ.ಕೆ.ಪ್ರಾಣೇಶ್‌ ಅವರು ಗುರುವಾರ ನಾಮಪತ್ರ ಸಲ್ಲಿಸಲಿದ್ದಾರೆ. ಉಪಸಭಾಪತಿ ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ಹಾಲಿ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿಅವರು ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆಗ ಹೊರಟ್ಟಿಅವರು ಸಭಾಪತಿ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಂದೂವರೆ ವರ್ಷಗಳ ಕಾಲ ಹೊರಟ್ಟಿಅವರು ಸಭಾಪತಿ ಸ್ಥಾನ ಅಲಂಕರಿಸುವುದಕ್ಕೆ ಯಾವುದೇ ಅಡಚಣೆ ಎದುರಾಗಲಿಕ್ಕಿಲ್ಲ. ಆದರೆ, 2022ರ ಜೂನ್‌ ಬಳಿಕ ಪರಿಷತ್ತಿನಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆಯುವ ನಿರೀಕ್ಷೆಯಿದೆ. ಆಗ ಸಭಾಪತಿ ಸ್ಥಾನವನ್ನು ಬಿಜೆಪಿಯವರೇ ಅಲಂಕರಿಸಲಿದ್ದಾರೆ. ಅಲ್ಲಿಯವರೆಗೆ ಜೆಡಿಎಸ್‌ ಬಳಿಯಿರುತ್ತದೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್‌ನ ಪ್ರತಾಪ್‌ಚಂದ್ರ ಶೆಟ್ಟಿಅವರು ಸರ್ಕಾರ ಮಂಡಿಸಿದ ಹಲವು ವಿಧೇಯಕಗಳ ಸುಗಮ ಅನುಮೋದನೆಗೆ ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕಾಗಿ ಬೇಸರಗೊಂಡಿದ್ದ ಬಿಜೆಪಿ ನಾಯಕರು ತೆರೆಮರೆಯಲ್ಲಿ ಅವರನ್ನು ಇಳಿಸುವ ತಂತ್ರ ರೂಪಿಸಿದ್ದರು. ಆ ತಂತ್ರದ ಭಾಗವಾಗಿಯೇ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಅದರ ಪರಿಣಾಮ ಕಳೆದ ಅಧಿವೇಶನದ ಕೊನೆಯ ದಿನ ರಾದ್ಧಾಂತ ನಡೆದಿತ್ತು.

ಪರಿಷತ್ತಿನಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದ್ದರೂ ಜೆಡಿಎಸ್‌ ನೆರವಿಲ್ಲದೆ ಸಭಾಪತಿ ಸ್ಥಾನ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ಜೆಡಿಎಸ್‌ಗೆ ಸಭಾಪತಿ ಸ್ಥಾನದ ಆಸೆ ತೋರಿಸಿ ತನ್ನ ತಂತ್ರ ಅನುಷ್ಠಾನಕ್ಕೆ ಮುಂದಾಯಿತು. ಆ ಪ್ರಕಾರ ಉಭಯ ಪಕ್ಷಗಳ ಹಿರಿಯ ನಾಯಕರ ನಡುವೆ ಮಾತುಕತೆ ನಡೆದ ಬಳಿಕ ಹೊಂದಾಣಿಕೆಗೆ ವೇದಿಕೆ ಸಿದ್ಧವಾಗಿದೆ.

ಕಳೆದ ಅಧಿವೇಶನದ ಬಳಿಕ ಪರಿಷತ್ತಿನ ಉಪಸಭಾಪತಿಯಾಗಿದ್ದ ಎಸ್‌.ಎಲ್‌.ಧರ್ಮೇಗೌಡ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೀಗ ಆ ಸ್ಥಾನಕ್ಕೆ ಚುನಾವಣೆ ಎದುರಾಗಿದೆ. ಮೊದಲ ಬಾರಿಗೆ ಪರಿಷತ್‌ ಸದಸ್ಯರಾಗಿರುವ ಚಿಕ್ಕಮಗಳೂರಿನ ಪ್ರಾಣೇಶ್‌ ಅವರಿಗೆ ಆ ಸ್ಥಾನ ಒಲಿದು ಬರಲಿದೆ. ಕಾಂಗ್ರೆಸ್‌ ತನ್ನ ಅಭ್ಯರ್ಥಿ ಕಣಕ್ಕಿಳಿಸುವ ಸಾಧ್ಯತೆ ಕಡಿಮೆ ಇರುವುದರಿಂದ ಪ್ರಾಣೇಶ್‌ ಅವರು ಅವಿರೋಧವಾಗಿ ಆಯ್ಕೆಯಾಗುವ ಸಂಭವ ಹೆಚ್ಚಾಗಿದೆ.

ಸಭಾಪತಿ ಸ್ಥಾನವನ್ನು ಜೆಡಿಎಸ್‌ನ ಹೊರಟ್ಟಿಅವರಿಗೆ ಬಿಟ್ಟುಕೊಡುವುದರಿಂದ ದಕ್ಷಿಣ ಕರ್ನಾಟಕ ಭಾಗಕ್ಕೆ ಉಪಸಭಾಪತಿ ಸ್ಥಾನ ಸಿಗಲಿ ಎಂಬ ಅಭಿಪ್ರಾಯ ಬಿಜೆಪಿಯಲ್ಲಿ ವ್ಯಕ್ತವಾಯಿತು. ಬುಧವಾರ ಸಂಜೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿವಾಸದಲ್ಲಿ ನಡೆದ ಪರಿಷತ್ತಿನ ಬಿಜೆಪಿ ಸದಸ್ಯರ ಸಭೆಯಲ್ಲಿ ಸಭಾಪತಿ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟು ಉಪಸಭಾಪತಿ ಸ್ಥಾನಕ್ಕೆ ಸ್ಪರ್ಧಿಸುವ ಹಾಗೂ ಪ್ರಾಣೇಶ್‌ ಅವರನ್ನು ಉಪಸಭಾಪತಿ ಸ್ಥಾನಕ್ಕೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ ನಿರ್ಧಾರ ಕೈಗೊಳ್ಳಲಾಯಿತು.

ಇದಕ್ಕೂ ಮೊದಲು ಬುಧವಾರ ಬೆಳಗ್ಗೆ ಹೊರಟ್ಟಿಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಂಗಳವಾರ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರ ನೇತೃತ್ವದಲ್ಲಿ ನಡೆದ ಸಭೆಯ ವಿವರಗಳನ್ನು ತಿಳಿಸಿದರು. ಅಲ್ಲದೆ, ಉಪಸಭಾಪತಿ ಸ್ಥಾನಕ್ಕೆ ಜೆಡಿಎಸ್‌ ಸ್ಪರ್ಧಿಸುವುದಿಲ್ಲ ಎಂಬ ವಿಷಯವನ್ನೂ ಸ್ಪಷ್ಟಪಡಿಸಿದರು ಎನ್ನಲಾಗಿದೆ.

ಆರಿಸಿದವರಿಗೆ ಧನ್ಯವಾದ

ಸಭಾಪತಿ ಸ್ಥಾನಕ್ಕೆ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಪಕ್ಷದ ಸದಸ್ಯರು ಮತ್ತು ಬಿಜೆಪಿ ಸರ್ಕಾರಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ. ನನ್ನ ಬಗ್ಗೆ ಎಲ್ಲಾ ಪಕ್ಷದ ಸದಸ್ಯರು ಒಳ್ಳೆಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದಕ್ಕೆ ಅಭಿನಂದನೆಗಳು. ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನಪರಿಷತ್‌ ಪ್ರವೇಶಿಸಿದ ಕಾರಣಕ್ಕಾಗಿ ಸಭಾಪತಿ ಸ್ಥಾನ ಒಲಿದುಬಂದಿದೆ.

- ಬಸವರಾಜ ಹೊರಟ್ಟಿ, ವಿಧಾನಪರಿಷತ್‌ ಸದಸ್ಯ

Latest Videos
Follow Us:
Download App:
  • android
  • ios