ಮ್ಮ ಪಕ್ಷದ ಹಾಲಿ ಹಾಗೂ ಮಾಜಿ ಶಾಸಕರನ್ನು ಆಪರೇಷನ್‌ ಹಸ್ತದ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ಸೆಳೆಯುವ ತೆರೆಮರೆಯ ಚಟುವಟಿಕೆ ಬಿರುಸಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಜೆಪಿ ನಾಯಕರು, ಪಕ್ಷದಲ್ಲೇ ಉಳಿಸಿಕೊಳ್ಳುವ ಸಂಬಂಧ ಕಸರತ್ತು ಆರಂಭಿಸಿದ್ದಾರೆ.

ಬೆಂಗಳೂರು (ಆ.19) :  ತಮ್ಮ ಪಕ್ಷದ ಹಾಲಿ ಹಾಗೂ ಮಾಜಿ ಶಾಸಕರನ್ನು ಆಪರೇಷನ್‌ ಹಸ್ತದ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ಸೆಳೆಯುವ ತೆರೆಮರೆಯ ಚಟುವಟಿಕೆ ಬಿರುಸಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಜೆಪಿ ನಾಯಕರು, ಪಕ್ಷದಲ್ಲೇ ಉಳಿಸಿಕೊಳ್ಳುವ ಸಂಬಂಧ ಕಸರತ್ತು ಆರಂಭಿಸಿದ್ದಾರೆ.

ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಅವರ ನಿವಾಸದಲ್ಲಿ ಶುಕ್ರವಾರ ಸಂಜೆ ಬಿಬಿಎಂಪಿ ವ್ಯಾಪ್ತಿಯ ಶಾಸಕರ ತುರ್ತು ಸಭೆ ನಡೆಸಿದ ನಾಯಕರು ಕಾಂಗ್ರೆಸ್‌ ಪ್ರಯತ್ನ ವಿಫಲಗೊಳಿಸುವ ಕುರಿತು ಸುದೀರ್ಘ ಚರ್ಚೆ ನಡೆಸಿದರು.

Ghar wapsi: ಕಾಂಗ್ರೆಸ್‌ಗೆ ಸೋಮಶೇಖರ್‌ ಕರೆ ತರಲು ಶಾಸಕ ಶ್ರೀನಿವಾಸ್‌ಗೆ ಡಿಕೆ ಶಿವಕುಮಾರ್‌ ಟಾಸ್ಕ್

ಮುಂಬರುವ ಲೋಕಸಭಾ ಚುನಾವಣೆ ಹಾಗೂ ಬಿಬಿಎಂಪಿ ಚುನಾವಣೆ ಗುರಿಯಾಗಿಸಿಕೊಂಡು ಕಾಂಗ್ರೆಸ್‌ ನಾಯಕರು ತಮ್ಮ ಪಕ್ಷದ ಹಾಲಿ ಹಾಗೂ ಮಾಜಿ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಅಂಥವರನ್ನು ಗುರುತಿಸಿ ಅವರೊಂದಿಗೆ ಮಾತುಕತೆ ನಡೆಸಿ ಮನವೊಲಿಸುವ ಜವಾಬ್ದಾರಿಯನ್ನು ಮೂವರು ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಅವರಿಗೆ ವಹಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಈಗ ಕೇಳಿಬರುತ್ತಿರುವ ಹಾಲಿ ಶಾಸಕರೂ ಸೇರಿದಂತೆ ಯಾರು ಅರೆಮನಸ್ಸಿನಲ್ಲಿದ್ದಾರೆಯೋ ಅಂಥ ಮುಖಂಡರನ್ನು ಕರೆಸಿ ಮಾತುಕತೆ ನಡೆಸಬೇಕು. ಜತೆಗೆ ಅವರ ಅಹವಾಲನ್ನು ಆಲಿಸಿ ಪಕ್ಷದ ಸಂಘಟನೆಗೆ ಸಂಬಂಧಿಸಿದಂತೆ ಅವರ ಸಮಸ್ಯೆಗಳಿಗೆ ಪರಿಹಾರೋಪಾಯ ಕಂಡುಕೊಳ್ಳಲು ನಿರ್ಧರಿಸಲಾಗಿದೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಚುಟುಕಾಗಿ ಮಾತನಾಡಿದ ಯಡಿಯೂರಪ್ಪ, ಯಾರೊಬ್ಬರೂ ಬಿಜೆಪಿ ತೊರೆದು ಹೋಗುವುದಿಲ್ಲ. ಒಬ್ಬಿಬ್ಬರು ಆ ಬಗ್ಗೆ ಆಲೋಚಿಸುತ್ತಿದ್ದಾರೆ. ಆ ಬಗ್ಗೆ ಚರ್ಚಿಸುತ್ತೇವೆ ಎಂದು ಹೇಳಿದರು.

ಬೊಮ್ಮಾಯಿ ಮಾತನಾಡಿ, ರಾಜ್ಯ ಸರ್ಕಾರದ ಭ್ರಷ್ಟಾಚಾರ ಹಾಗೂ ಕಮಿಷನ್‌ ದಂಧೆಯ ವಿರುದ್ಧ ಕೇಳಿ ಬರುತ್ತಿರುವ ಆರೋಪವನ್ನು ಡೈವರ್ಚ್‌ ಮಾಡಲು ಬಿಜೆಪಿ ಶಾಸಕರ ಪಕ್ಷಾಂತರದ ಬಗ್ಗೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಎಸ್‌.ಟಿ.ಸೋಮಶೇಖರ್‌, ಶಿವರಾಮ… ಹೆಬ್ಬಾರ್‌ ಜೊತೆ ನಾನು ಮಾತನಾಡಿದ್ದೇನೆ. ಬಿಜೆಪಿಯ ಯಾವುದೇ ಶಾಸಕರು ಪಕ್ಷ ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೆಲವು ಶಾಸಕರು ಸ್ಥಳೀಯವಾಗಿರುವ ಸಮಸ್ಯೆಗಳನ್ನು ಹೇಳಿದ್ದಾರೆ. ಅದನ್ನು ರಾಜ್ಯಾಧ್ಯಕ್ಷರ ಗಮನಕ್ಕೆ ತಂದಿದ್ದೇವೆ. ಎಲ್ಲವನ್ನೂ ಬಗೆಹರಿಸುತ್ತೇವೆ. ನಾವೆಲ್ಲ ಒಗ್ಗಟ್ಟಾಗಿದ್ದೇವೆ. ಕಾಂಗ್ರೆಸ್‌ನವರ ವಿರುದ್ಧ ಕೇಳಿ ಬಂದ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅವರ ಶಾಸಕರೇ ದಂಗೆ ಎದ್ದಿರುವುದನ್ನು ಮರೆ ಮಾಚಲು ಪಕ್ಷಾಂತರದ ಸುಳ್ಳು ಕತೆ ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಏರ್‌ಲಿಫ್ಟ್‌ ಮೂಲಕ ಹಣ ಸಾಗಿಸ್ತಿದೆ: ಜೆಡಿಸ್‌ ನಾಯಕ ಆರೋಪ

ಅಶೋಕ್‌ ಮಾತನಾಡಿ, ಸಿದ್ದರಾಮಯ್ಯ ತಮ್ಮ ರಾಜಕೀಯ ಗುರು ಎಂಬ ಎಸ್‌.ಟಿ.ಸೋಮಶೇಖರ್‌ ಹೇಳಿಕೆಗೆ ವಿಶೇಷ ಅರ್ಥ ಬೇಡ. ಈ ಹಿಂದೆ ಕೆಲವರು ಬಸವರಾಜ ಬೊಮ್ಮಾಯಿ ಅವರನ್ನು ನಮ್ಮ ಗುರು ಎಂದಿದ್ದರು. ಇನ್ನು ಹಲವರು ಯಡಿಯೂರಪ್ಪ ಅವರನ್ನು ನಮ್ಮ ಗುರು ಎನ್ನುತ್ತಾರೆ. ರಾಜಕೀಯವೇ ಬೇರೆ, ಗುರುವೇ ಬೇರೆ. ಅಪ್ಪ ಮಗ, ಅಣ್ಣ ತಮ್ಮ ಬೇರೆ ಬೇರೆ ಪಕ್ಷದಲ್ಲಿ ಇರುವ ಕಾಲ ಇದು. ಈಗಾಗಲೇ ಎರಡು ಬಾರಿ ಸೋಮಶೇಖರ್‌ ನನಗೆ ಕರೆ ಮಾಡಿ ಮಾತನಾಡಿದ್ದಾರೆ. ಈ ಸಭೆಗೆ ಶಾಸಕರಾದ ಸೋಮಶೇಖರ್‌ ಮತ್ತು ಬೈರತಿ ಬಸವರಾಜು ಅವರು ಗಮನಕ್ಕೆ ತಂದೇ ಗೈರು ಹಾಜರಾಗಿದ್ದಾರೆ. ಬೈರತಿ ಅವರು ಊರಲ್ಲಿ ಇಲ್ಲ. ಅವರು ಬರುತ್ತಿದ್ದಂತೆಯೇ ಇಬ್ಬರನ್ನೂ ಮಾಧ್ಯಮಗಳ ಮುಂದೆ ನಿಲ್ಲಿಸಿ ಸ್ಪಷ್ಟೀಕರಣ ಕೊಡಿಸುತ್ತೇನೆ ಎಂದು ಹೇಳಿದರು.

ಘರ್‌ ವಾಪ್ಸಿ ‘ಕೈ’ ಬಲ!

‘ಬಾಂಬೆ ಬಾಯ್ಸ್(Bobay boys congress leader) ಶಾಸಕರ ಪೈಕಿ ಕೆಲವರು ಕಾಂಗ್ರೆಸ್ಸಿಗೆ ವಾಪಸಾಗುತ್ತಾರೆ ಎಂಬ ವರದಿಗಳ ನಡುವೆಯೇ ಅದಕ್ಕೆ ಇಂಬು ನೀಡುವಂತಹ ಮಾತುಗಳನ್ನು ಕಾಂಗ್ರೆಸ್ಸಿನ ಪ್ರಮುಖ ನಾಯಕರು ಆಡಿದ್ದಾರೆ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಎಂದು ಡಿಸಿಎಂ ಡಿಕೆಶಿ, ಪಕ್ಷದ ತತ್ವ-ಸಿದ್ಧಾಂತ ಒಪ್ಪಿ ಯಾರು ಬೇಕಾದರೂ ಬರಬಹುದು ಗೃಹ ಸಚಿವ ಡಾ

ಜಿ. ಪರಮೇಶ್ವರ್‌ ಹೇಳಿದ್ದರೆ, ಬಿಜೆಪಿ-ಜೆಡಿಎಸ್‌ನಿಂದ 10ರಿಂದ 15 ಹಾಲಿ/ಮಾಜಿ ಶಾಸಕರು ಕಾಂಗ್ರೆಸ್ಸಿಗೆ ಬರಲು ಸಜ್ಜಾಗಿದ್ದಾರೆ ಎಂದು ಸಚಿವ ಚಲುವರಾಯ ಮತ್ತೊಂದು ‘ಬಾಂಬ್‌’ ಸಿಡಿಸಿದ್ದಾರೆ.

10-15 ಜನ ಬರ್ತಾರೆ

ಬಿಜೆಪಿ, ಜೆಡಿಎಸ್‌ನಿಂದ 10-15 ಹಾಲಿ/ಮಾಜಿ ಶಾಸಕರು ಕಾಂಗ್ರೆಸ್‌ ಸೇರಲು ಸಜ್ಜಾಗಿದ್ದಾರೆ. ಮಾತುಕತೆ ನಡೆಯುತ್ತಿದೆ. ಯಾರಾರ‍ಯರು ಸೇರುತ್ತಾರೆಂದು ಈಗಲೇ ಹೇಳಲಾಗದು.

- ಚಲುವರಾಯಸ್ವಾಮಿ ಸಚಿವ

ಏನಾದರೂ ಆಗಬಹುದು

ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಪಕ್ಷದ ಮತ ಪ್ರಮಾಣ ಹೆಚ್ಚಿಸಿಕೊಳ್ಳಲು ಬೇರೆ ಪಕ್ಷದ ಕಾರ್ಯಕರ್ತರನ್ನು ಸೇರ್ಪಡೆ ಮಾಡಿಕೊಳ್ಳಲು ತಿಳಿಸಿದ್ದೇನೆ.

- ಡಿ.ಕೆ.ಶಿವಕುಮಾರ್‌ ಉಪಮುಖ್ಯಮಂತ್ರಿ

ಅನೇಕರು ಸಂಪರ್ಕದಲ್ಲಿ

ಅನೇಕ ಮುಖಂಡರು ಈಗಾಗಲೇ ಪಕ್ಷದ ರಾಜ್ಯ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ. ಯಾರು ಸಂಪರ್ಕದಲ್ಲಿದ್ದಾರೆ ಎಂದು ನಾನು ಬಹಿರಂಗಪಡಿ​ಸ​ಲು ಆಗಲ್ಲ.

- ಎನ್‌.ಎಸ್‌.ಬೋಸರಾಜು ಸಚಿವ

ಬಿಜೆಪಿ ನಾಯಕರ ಬಗ್ಗೆ ಅಸಮಾಧಾನ ಇದೆ, ಕಾದುನೋಡಿ: ಶಾಸಕ ಹೆಬ್ಬಾರ್‌

ಕಾರವಾರ: ‘ಬಿಜೆಪಿಯ ಕೆಲ ನಾಯಕರ ಬಗ್ಗೆ ನನಗೆ ಅಸಮಾಧಾನವಿದೆ. ಕ್ಷೇತ್ರದಲ್ಲಿನ ವಿದ್ಯಮಾನ, ನನಗಿರುವ ಆತಂಕದ ಬಗ್ಗೆ ವರಿಷ್ಠರ ಗಮನಕ್ಕೆ ತಂದಿದ್ದೇನೆ. ಆದರೆ, ಎಲ್ಲಿಯೂ ನಾನು ಸಭೆ ಮಾಡಿಲ್ಲ. ಕಾಂಗ್ರೆಸ್‌ ಪಕ್ಷದವರು ನನ್ನನ್ನು ಸಂಪರ್ಕಿಸಿಲ್ಲ. ಬಿಜೆಪಿಯಲ್ಲೇ ಇದ್ದೇನೆ’ ಎಂದು ಯಲ್ಲಾಪುರದ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್‌ ಸ್ಪಷ್ಟಪಡಿಸಿದ್ದಾರೆ. ಆದರೆ, ‘ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಕಾದು ನೋಡಿ’ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.