ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆ ಶೀಘ್ರ ಜಾರಿ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ವಿಷಯವನ್ನು ಕೈಗೆತ್ತಿಕೊಳ್ಳುವ ಸುಳಿವು ನೀಡಿದೆ.
ಉಡುಪಿ [ನ.13]: ವಿವಾದಿತ ವಿಷಯಗಳಾದ ತ್ರಿವಳಿ ತಲಾಖ್ ರದ್ದತಿ, ಜಮ್ಮು-ಕಾಶ್ಮೀರದ ವಿಶೇಷ ಸ್ಥಾನ ಮಾನ ರದ್ದತಿ, ಅಯೋಧ್ಯೆ ರಾಮಮಂದಿರ ನಿರ್ಮಾಣ ಬಳಿಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ದೇಶಾದ್ಯಂತ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ವಿಷಯವನ್ನು ಕೈಗೆತ್ತಿಕೊಳ್ಳುವ ಸುಳಿವು ನೀಡಿದೆ.
ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವುದಾಗಿ ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲೇ ಘೋಷಿಸಿದೆ. ಅದನ್ನು ಈಡೇರಿಸುವುದು ನಮ್ಮ ಧರ್ಮವಾಗಿದೆ ಎಂದು ಸ್ವತಃ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ತಿಳಿಸಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶವನ್ನು ಏಕತೆ ಮತ್ತು ಅಖಂಡತೆಯತ್ತ ಖಂಡಿತ ಕರೆದೊಯ್ಯುತ್ತೇವೆ. ಅದಕ್ಕೆ ಬೇಕಾದ ತಳಮಟ್ಟದ ಸಿದ್ಧತೆಗಳು (ಗ್ರೌಂಡ್ ವರ್ಕ್) ಈಗಾಗಲೇ ನಡೆಯುತ್ತಿವೆ. ನಾವು ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲು ಶ್ರಮಿಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ಸಂಸದ ಶಶಿ ತರೂರ್ ವಿರುದ್ಧ ಬಂಧನದ ವಾರಂಟ್ ಜಾರಿ!...
ಇತ್ತೀಚಿನ ಚರ್ಚೆಗೆ ಇಂಬು: ಅಯೋಧ್ಯೆಯ ರಾಮಜನ್ಮಭೂಮಿ ಹಿಂದೂಗಳಿಗೇ ಸೇರಿದ್ದು ಎಂದು ಇತ್ತೀಚೆಗೆ ಸುಪ್ರೀಂಕೋರ್ಟ್ ತೀರ್ಪು ನೀಡುತ್ತಿದ್ದಂತೆ ಕೇಂದ್ರ ಸರ್ಕಾರದ ಮುಂದಿನ ಗುರಿ ಏಕರೂಪ ನಾಗರಿಕ ಸಂಹಿತೆ ಜಾರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗಿತ್ತು. ಜಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ಬಿಜೆಪಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಯಂತೆ ರದ್ದುಗೊಳಿಸಿದೆ.
ಇನ್ನೊಂದು ಭರವಸೆಯಾದ ರಾಮಮಂದಿರ ನಿರ್ಮಾಣವೂ ಸುಪ್ರೀಂ ಕೋರ್ಟ್ ತೀರ್ಪಿನಿಂದ ಸುಲಲಿತವಾಗಿದೆ. ಹಾಗಾಗಿ, ಮುಂದೆ ಸಮಾನ ನಾಗರಿಕ ಸಂಹಿತೆ ವಿಷಯವನ್ನು ಕೈಗೆತ್ತಿಕೊಳ್ಳಬಹುದು ಎಂದು ಭಾರೀ ಚರ್ಚೆಯಾಗಿತ್ತು. ಇದೀಗ ಕೇಂದ್ರ ಸಚಿವರೇ ಈ ಬಗ್ಗೆ ಹೇಳಿಕೆ ನೀಡಿರುವುದು ಈ ಚರ್ಚೆಗೆ ಮತ್ತಷ್ಟು ಇಂಬು ನೀಡಿದೆ.
ಎಂದರೇನು ?
ಆಡಳಿತ ನಿಯಮಗಳನ್ನು ಭಾರತದ ಎಲ್ಲಾ ನಾಗರಿಕರಿಗೆ ಸಮಾನವಾಗಿ ಅನ್ವಯಿಸುವುದನ್ನು ಏಕರೂಪ ನಾಗರಿಕ ಸಂಹಿತೆ ಎಂದು ಕರೆಯಲಾಗುತ್ತದೆ. ವಿವಾಹ, ವಿಚ್ಛೇದನ, ಆನುವಂಶಿಕತೆ, ದತ್ತು ಮತ್ತು ನಿರ್ವಹಣೆ, ಸಾರ್ವಜನಿಕ ಕಾನೂನಿಗೆ ಸಂಬಂಧಿಸಿದ ನಿಯಮಗಳನ್ನು ಎಲ್ಲಾ ಧರ್ಮದವರಿಗೂ ಸಮಾನವಾಗಿ ಅನ್ವಯಿಸುವುದು ಇದರ ಉದ್ದೇಶ. ಸದ್ಯಕ್ಕೆ ದೇಶದಲ್ಲಿ ಹಿಂದು, ಮುಸ್ಲಿಂ ಸೇರಿ ಹಲವು ಧರ್ಮದವರಿಗೆ ಕೆಲವು ಪ್ರತ್ಯೇಕ ನಿಯಮ/ಕಾಯ್ದೆಗಳು ಜಾರಿಯಲ್ಲಿವೆ.