ಮೀಸಲಾತಿ ಕುಗ್ಗಿಸಿ ಎಲ್ಲರಿಗೂ ಅನ್ಯಾಯ, ವೈಜ್ಞಾನಿಕ ಅಧ್ಯಯನವಿಲ್ಲದೆ ಚುನಾವಣೆಗಾಗಿ ಮೀಸಲು ವಿಭಜನೆ, ಮೊದಲು 17% ಮೀಸಲು ಇದ್ದ ಜಾತಿಗಳಿಗೆ ಈಗ ಅತಿ ಕಮ್ಮಿ ಮೀಸಲು: ಕಾಂಗ್ರೆಸ್
ಬೆಂಗಳೂರು(ಮಾ.28): ಯಾವುದೇ ವೈಜ್ಞಾನಿಕ ಅಧ್ಯಯನವಿಲ್ಲದೆ ಕೇವಲ ಚುನಾವಣೆಗಾಗಿ ಒಳ ಮೀಸಲಾತಿ ಹೆಸರಿನಲ್ಲಿ ಪರಿಶಿಷ್ಟಜಾತಿಯ ಮೀಸಲಾತಿ ವಿಭಜಿಸಿ ದಲಿತರ ನಡುವೆ ಸಂಘರ್ಷ ಸೃಷ್ಟಿಸಲಾಗುತ್ತಿದೆ. ಶೇ.17ರಷ್ಟು ಮೀಸಲಾತಿಗಾಗಿ ಪೈಪೋಟಿ ನಡೆಸುತ್ತಿದ್ದ ಸಮುದಾಯಗಳ ಮೀಸಲಾತಿ ಪ್ರಮಾಣವನ್ನು ಕುಗ್ಗಿಸಿ ಎಲ್ಲರಿಗೂ ಅನ್ಯಾಯ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ.
ಪರಿಶಿಷ್ಟಜಾತಿಯ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹೆಚ್ಚಳ ಮಾಡಲಾಗಿತ್ತು. ಇದರಿಂದ ಎಡಗೈ, ಬಲಗೈ ಸಮುದಾಯಗಳು, ಬಂಜಾರ, ಬೋವಿ, ಕೊರಮ, ಕೊರಚ, ಕೊರವರಂತಹ ಇತರ ಪರಿಶಿಷ್ಟಜಾತಿಗಳ ಅಭ್ಯರ್ಥಿಗಳಿಗೆ ಶೇ.17ರಷ್ಟುಮೀಸಲಾತಿ ಇರುತ್ತಿತ್ತು. ಹೀಗಾಗಿ ಉದ್ಯೋಗ, ಶಿಕ್ಷಣ ಸೇರಿ ಪ್ರತಿಯೊಂದಕ್ಕೂ ಪೈಪೋಟಿ ನಡೆಸಲು ಶೇ.17ರಷ್ಟುದೊಡ್ಡ ಪ್ರಮಾಣದ ಮೀಸಲಾತಿ ಇತ್ತು. ಆದರೆ ಈಗ ಸ್ಪೃಶ್ಯ, ಅಸ್ಪೃಶ್ಯರ ಹೆಸರಿನಲ್ಲಿ ದಲಿತರನ್ನು ಒಡೆದು ಶೇ.17ರಷ್ಟುಮೀಸಲಾತಿಯಲ್ಲಿ ಶೇ.6ರಷ್ಟುಎಡಗೈ, ಶೇ.5.5ರಷ್ಟುಬಲಗೈ, ಭೋವಿ, ಶೇ.4.5ರಷ್ಟುಬಂಜಾರ ಸೇರಿದಂತೆ ಉಳಿದವರಿಗೆ ಹಾಗೂ ಅಲೆಮಾರಿ ಸಣ್ಣ ಸಮುದಾಯಗಳಿಗೆ ಶೇ.1ರಷ್ಟುಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಇದರಿಂದ ಈ ಮೊದಲು ಬಂಜಾರದಂತಹ ಸಮುದಾಯದವರು ಶೇ.17ರಷ್ಟುಮೀಸಲಾತಿಯ ವ್ಯಾಪ್ತಿಯಲ್ಲಿ ಬರುತ್ತಿದ್ದವರು ಈಗ ಶೇ.4.5ರ ಮೀಸಲಾತಿಗೆ ಸೀಮಿತವಾಗಬೇಕಾಗುತ್ತದೆ. ಹೀಗಾಗಿ ಎಲ್ಲಾ ದಲಿತ ಸಮುದಾಯಗಳ ಮೀಸಲಾತಿ ಪೈಪೋಟಿ ವ್ಯಾಪ್ತಿ ಕುಗ್ಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ಪಂಚಮಸಾಲಿಗೆ 2ಡಿ ಮೀಸಲಾತಿ: ಹೋರಾಟ ಸಮಿತಿ ಇಬ್ಭಾಗದಿಂದ ಕಣ್ಣೀರಿಟ್ಟ ಸ್ವಾಮೀಜಿ
ವೈಜ್ಞಾನಿಕವಾಗಿ ಒಳಮೀಸಲಾತಿ ನೀಡಿಲ್ಲ:
ರಾಜ್ಯ ಸರ್ಕಾರವು ಆರ್‌ಎಸ್‌ಎಸ್ ಸಿದ್ಧಾಂತದಂತೆ ದಲಿತರ ಒಗ್ಗಟ್ಟು ಒಡೆದು ವಿಭಜಿಸಿ ಆಳುವ ನೀತಿಯನ್ವಯ ಒಳ ಮೀಸಲಾತಿ ಮೂಲಕ ಜಾತಿ-ಜಾತಿಗಳ ನಡುವೆ ವೈಷಮ್ಯ ಸೃಷ್ಟಿಸಿದೆ. ಏಕೆಂದರೆ, ಮೀಸಲಾತಿಗೆ ಹಿಂದುಳಿದಿರುವಿಕೆ ಮಾನದಂಡ ಆಗಿರುವಾಗ ಒಳ ಮೀಸಲಾತಿಗೂ ಹಿಂದುಳಿದಿರುವಿಕೆಯೇ ಮಾನದಂಡವಾಗಬೇಕು. ಆದರೆ, ಈ ನಿಟ್ಟಿನಲ್ಲಿ ಯಾವುದೇ ವೈಜ್ಞಾನಿಕ ಅಧ್ಯಯನ ಆಗಿಲ್ಲ. ಹಿಂದುಳಿದಿರುವಿಕೆ ಆಧಾರದ ಮೇಲೆ ಒಳ ಮೀಸಲಾತಿ ನೀಡಿಲ್ಲ. ಕೇವಲ ಜನಸಂಖ್ಯೆ ಆಧಾರದ ಮೇಲೆ ಚುನಾವಣೆಗಾಗಿ ಜಾತಿಗಳನ್ನು ವಿಭಜಿಸಿ ವಿಕೃತಿ ಮೆರೆದಿದ್ದಾರೆ ಎಂದು ಕಾಂಗ್ರೆಸ್ ನಾಯಕರು ದೂರಿದ್ದಾರೆ.
ಕೇವಲ ಜನಸಂಖ್ಯೆಯ ಆಧಾರದ ಮೇಲೆ ಪರಿಶಿಷ್ಟಜಾತಿಯ ಪಟ್ಟಿಯನ್ನು ತಿದ್ದಿ ಮರು ವರ್ಗೀಕರಿಸಲಾಗಿದೆ. ತನ್ಮೂಲಕ ದಲಿತರಲ್ಲಿ ನಾಲ್ಕು ಗುಂಪುಗಳನ್ನು ಸೃಷ್ಟಿಸಿದ್ದಾರೆ. ಎಡಗೈ, ಬಲಗೈ ಹೊರತುಪಡಿಸಿ ಬಂಜಾರ, ಬೋವಿ, ಕೊರಮ, ಕೊರಚ, ಕೊರವ ಸಮುದಾಯಗಳವರೇ 45 ಲಕ್ಷದಷ್ಟಿರುವುದಾಗಿ ಹೇಳುತ್ತಾರೆ. ಅವರಿಗೆ ಶೇ.4.5ರಷ್ಟುಮೀಸಲಾತಿ ಕಲ್ಪಿಸಲಾಗಿದೆ. ತನ್ಮೂಲಕ ಗೊಂದಲಗಳನ್ನು ಸೃಷ್ಟಿಸಲಾಗಿದೆ. ಇದರ ಬದಲು ವೈಜ್ಞಾನಿಕ ಅಧ್ಯಯನ ನಡೆಸಿ ವರದಿ ಆಧಾರದ ಮೇಲೆ ಮೀಸಲಾತಿ ಹಂಚಿಕೆ ಮಾಡಬೇಕು. ಇಲ್ಲದಿದ್ದರೆ ದಲಿತರಲ್ಲಿ ಒಡಕು ಮೂಡಿಸಿದ ಶಾಪ ಸರ್ಕಾರಕ್ಕೆ ತಟ್ಟುತ್ತದೆ ಎಂದು ಕಾಂಗ್ರೆಸ್ಸಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
