ನಿನ್ನಪ್ಪನನ್ನೂ ಸಿಎಂ ಮಾಡೋಕೆ ಬಂದಿದ್ದು ನಾನು, ನೀನೊಬ್ಬ ಬಚ್ಚಾ ವಿಜಯೇಂದ್ರ.. ಗೋಕಾಕ್ ಸಾಹುಕಾರ ನೇರಾನೇರ ವಾಗ್ದಾಳಿ!
ರಮೇಶ್ ಜಾರಕಿಹೊಳಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಯಡಿಯೂರಪ್ಪ ವಿರುದ್ಧ ಮಾತನಾಡಿದರೆ ಓಡಾಡಲು ಕಷ್ಟ ಎಂಬ ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಜಾರಕಿಹೊಳಿ, ಶಿಕಾರಿಪುರದಲ್ಲಿ ಪ್ರವಾಸ ಮಾಡುವುದಾಗಿ ಸವಾಲು ಹಾಕಿದ್ದಾರೆ. ಸಿದ್ದರಾಮಯ್ಯ ಸರ್ಕಾರವನ್ನು ಕಾಂಗ್ರೆಸ್ ಪಕ್ಷದ ಎಟಿಎಂ ಎಂದು ಜಾರಕಿಹೊಳಿ ಟೀಕಿಸಿದ್ದಾರೆ.

ಬೆಳಗಾವಿ (ಜ.18): ನಾನು ನಿಮ್ಮಪ್ಪನ್ನೂ ಸಿಎಂ ಮಾಡೋದಕ್ಕೆ ಬಿಜೆಪಿಗೆ ಬಂದಿದ್ದೆ ವಿಜಯೇಂದ್ರಾ.. ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ನೇರಾನೇರ ವಾಗ್ದಾಳಿ ನಡೆಸಿದರು.
ಇಂದು ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆಗೆ ಆಗಮಿಸಿದ್ದ ವೇಳೆ ಮಾತನಾಡಿದ ರಮೇಶ್ ಜಾರಕಿಹೊಳಿ, 'ಯಡಿಯೂರಪ್ಪ ವಿರುದ್ಧ ಮಾತನಾಡಿದ್ರೆ ಓಡಾಡೋದು ಕಷ್ಟ' ಎಂಬ ಬಿವೈ ವಿಜಯೇಂದ್ರ ಹೇಳಿಕೆ ವಿರುದ್ಧ ವೇದಿಕೆಯಲ್ಲೇ ತಿರುಗೇಟು ನೀಡಿದರು.
ಯಡಿಯೂರಪ್ಪ ವಿರುದ್ಧ ಮಾತನಾಡಿದ್ರೆ ಹೊರಗಡೆ ಓಡಾಡೋದಕ್ಕೆ ಆಗೊಲ್ಲ ಎಂದಿರುವೆ. ನಿನ್ನ ಸವಾಲನ್ನು ನಾನು ಸ್ವೀಕಾರ ಮಾಡುತ್ತೇನೆ. ನಾನು ನಿನ್ನ ಕ್ಷೇತ್ರಕ್ಕೇ ಬರುವೆ. ಯಾವಾಗ ಬರಬೇಕು. ವಿಜಯೇಂದ್ರ ನೀನೇ ಡೇಟ್ ಫಿಕ್ಸ್ ಮಾಡು, ನಾನು ಶಿಕಾರಿಪುರದಲ್ಲಿ ಪ್ರವಾಸ ಮಾಡುತ್ತೇನೆ. ಬರೋವಾಗ ಪೊಲೀಸರು, ಗನ್ ಮ್ಯಾನ್ ಕರೆತರಲ್ಲ. ಒಬ್ಬನೇ ಬರ್ತೇನೆ. ಅದೇನು ಮಾಡ್ತೀಯೋ ನೋಡೋಣ. ನಿನ್ನನ್ನು ಓಡಾಟ ಮಾಡದ ಹಾಗೆ ಮಾಡೋ ತಾಕತ್ತು ನನಗೆ ದೇವರು ಕೊಟ್ಟಿದ್ದಾನೆ. ಆದರೆ ನಾನು ಹಾಗೇ ಮಾಡೋದಿಲ್ಲ. ಇವತ್ತು ನಾನು ಯಡಿಯೂರಪ್ಪಗೆ ಸಲಹೆ ಕೊಡುವೆ. ಯಡಿಯೂರಪ್ಪ ಅವರೇ ನಿಮಗೆ ಪುತ್ರ ವ್ಯಾಮೋಹವೋ ಏನೋ ವಿಜಯೇಂದ್ರ ಬೆನ್ನು ಹತ್ತಿ ಹಾಳಾಗುತ್ತಿದ್ದೀರಿ. ಬಿಜೆಪಿ ಪಕ್ಷಕ್ಕೆ ಒಳ್ಳೆಯ ಅಧ್ಯಕ್ಷರನ್ನಾಗಿ ಮಾಡಲು ಸಹಕಾರ ಕೊಡಿ. ಪದೇಪದೆ ಸೈಕಲ್ ನಿಂದ ಓಡಾಟ ಸಂಘಟನೆ ಮಾಡಿದೆ ಎನ್ನಬೇಡಿ. ಪಕ್ಷದಿಂದ ಸಾವಿರಪಟ್ಟು ಲಾಭವನ್ನು ಪಡೆದಿರುವಿರಿ ಅನ್ನೋದು ಮರೆಯಬೇಡಿ ಎಂದರು.
ಇದನ್ನೂ ಓದಿ: 'ಬೆಳಗಾವೀಲಿ ಕಸ ಹೊಡೆದು ಎಲ್ಲ ಕೊಳೆ ತೆಗೆತೀವಿ' ತಮ್ಮನ ಬೆನ್ನಿಗೆ ನಿಂತ ಸತೀಶ್ ಜಾರಕಿಹೊಳಿಗೆ ಡಿಕೆಶಿ ಟಾಂಗ್!
ವಿಜಯೇಂದ್ರಗೆ ನೀನೊಬ್ಬ ಬಚ್ಚಾ!
ನಮ್ಮ ಪಕ್ಷದ ಅಧ್ಯಕ್ಷನನ್ನ ಇಳಿಸಲು ಹೋರಾಟ ಮಾಡುತ್ತಿದ್ದೇವೆ. ವಿಜಯೇಂದ್ರ, ನಾವು ನಿನಗೆ ಎಚ್ಚರಿಕೆ ಕೊಡ್ತೇವಿ. ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮುಂದುವರಿಯುವ ಅರ್ಹತೆ ಇಲ್ಲ, ನೀನೊಬ್ಬ ಬಚ್ಚಾ. ನಾನು ಯಡಿಯೂರಪ್ಪ ಬಗ್ಗೆ ಅಗೌರವದಿಂದ ಮಾತನಾಡಿಲ್ಲ. ಈಗಲೂ ಯಡಿಯೂರಪ್ಪ ನಮ್ಮ ನಾಯಕರು.
ಈ ಸರ್ಕಾರ ಕಾಂಗ್ರೆಸ್ ಪಕ್ಷದ ಎಟಿಎಂ:
ನಮ್ಮ ಕ್ಷೇತ್ರದ ಜನತೆ ನನ್ನ ಜತೆಗೆ ಗಟ್ಟಿಯಾಗಿ ಇದ್ದಾರೆ. 2008ರಲ್ಲಿ ಕಷ್ಟದಾಯಕ ಚುನಾವಣೆ ಆಗಿತ್ತು. ಆದರೂ ಕೊನೆಗೆ ಏಂಟು ಸಾವಿರ ಮತಗಳ ಅಂತರದಿಂದ ಗೆದ್ದೆ. ಗ್ಯಾರಂಟಿ ಸ್ಕೀಮ್ ನಿಂದ 70ಸಾವಿರ ಕೋಟಿ ಅನುದಾನ ಹೋಗುತ್ತಿದೆ. ಸಿದ್ದರಾಮಯ್ಯ ರಾಜ್ಯದ ಜನರ ಮೇಲೆ ಎರಡು ಪಟ್ಟು ತೆರಿಗೆ ಹಾಕಿದ್ದಾರೆ. ಆ ದುಡ್ಡು ಎಲ್ಲಿಗೆ ಹೊರಟಿದೇ ಅನೋದು ಚರ್ಚೆ ಆಗಬೇಕು. ಈ ಸರ್ಕಾರ ಕಾಂಗ್ರೆಸ್ ಪಕ್ಷದ ಎಟಿಎಂ ಆಗಿದೆ. ಮುಸ್ಲಿಂ, ಎಸ್ಸಿ, ಎಸ್ಟಿ ಜನರನ್ನ ತೋರಿಸಿ, ಹೆದರಿಸಿ ವೋಟ ಬ್ಯಾಂಕ್ ರಾಜಕಾರಣವನ್ನ ಮಾಡ್ತಿದೆ. ಇಂಥ ಜನ ವಿರೋಧಿ ಸರ್ಕಾರ ಕಿತ್ತೊಗೆಯಲು ಮೂಲೆ ಮೂಲೆಗೆ ಹೋಗಿ ಪಕ್ಷ ಸಂಘಟನೆ ಮಾಡುತ್ತೇವೆ, ಚುನಾವಣೆ ಯಾವಾಗ ಆಗುತ್ತೆ ಗೊತ್ತಿಲ್ಲ. ಆದರೆ ಪಕ್ಷ ಸಂಘಟನೆ ಬಂದಾಗ ನಾವೆಲ್ಲರೂ ಒಂದಾಗುತ್ತೇವೆ ಎಂದರು.
ಇದನ್ನೂ ಓದಿ: ಪತ್ರಕರ್ತರ ಸಮ್ಮೇಳನ: ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ.. ಗಣಪತಿ ಶ್ಲೋಕ ಹೇಳಿದ ಗೃಹ ಸಚಿವ!
ಸಿದ್ದರಾಮಯ್ಯ ಶಕ್ತಿ ಕುಂದಿದೆ:
ನಮ್ಮ ಪಕ್ಷದ ನಿಲುವು ಏನೇ ಆಗಿರಲಿ. ವೈಯಕ್ತಿಕವಾಗಿ ಜಾತಿ ಗಣತಿ ಪರವಾಗಿದ್ದೇನೆ. ಸಿದ್ದರಾಮಯ್ಯ ಏಕೆ ಜಾತಿಗಣತಿ ಜಾರಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಡಿಕೆಶಿ ಸೇರಿ ಅಲ್ಲಿರುವ ನಾಯಕರಿಗೆ ಹೆದರಿ ಹಿಂದೇಟು ಹಾಕುತ್ತಿದ್ದಾರೆ. ಸಿದ್ಧರಾಮಯ್ಯ ಬಗ್ಗೆ ಗೌರವ ಇದೆ. ಆದರೆ ಹಿಂದಿನಂತೆ ಸಿದ್ಧರಾಮಯ್ಯ ಅಹಿಂದ ನಾಯಕರಾಗಿ ಉಳಿದಿಲ್ಲ. ಈಗಿನ ಸಿದ್ದರಾಮಯ್ಯ ಮೊದಲಿನಂತಿಲ್ಲ, ಸಿದ್ದರಾಮಯ್ಯ ಶಕ್ತಿ ಕುಂದಿದೆ. ಮೇಲಿನವರು ಅವಾಜ್ ಮಾಡುತ್ತಿದ್ರು ಸುಮ್ಮನಿದ್ದಾರೆ ಹಿಂದೆ ಇದೇ ಸಿದ್ದರಾಮಯ್ಯ ಕೂತ್ರೆ ವೇಣುಗೋಪಾಲ ಎದ್ದು ನಿಲ್ಲುತ್ತಿದ್ರು. ಅಂಥ ಸಿದ್ದರಾಮಯ್ಯ ಈಗ ಕನಕಪುರದ ಮನುಷ್ಯನ ಘರ್ಜನೆಗೆ ಹೆದರುತ್ತಿದ್ದಾರೆ. ಸಿದ್ದರಾಮಯ್ಯ ಅವರಲ್ಲಿ ಹಿಂದಿನ ಪವರ್ ಉಳಿದಿಲ್ಲ. ಹೀಗಾಗಿ ಸಿದ್ದರಾಮಯ್ಯ ಹೋಗುವಾಗ ಘರ್ಜನೆ ಮಾಡಿ ರಾಜಕೀಯ ನಿವೃತ್ತಿ ಆಗಬೇಕು. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದಾ ನಾಯಕರಾಗಿ, ಮೊದಲನೇ ಸಿದ್ದರಾಮಯ್ಯರಾಗಿ ನಿವೃತ್ತಿ ಆಗಬೇಕು ಎಂದರು.