ಐಟಿ ದಾಳಿಯಲ್ಲಿ ಸಿಕ್ಕಿದ್ದು ಕಮಿಷನ್ ಹಣ: ಸಿಎಂ, ಡಿಸಿಎಂ ರಾಜೀನಾಮೆಗೆ ಬಿಜೆಪಿ ಒತ್ತಾಯ
ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರು ಐಟಿ ದಾಳಿಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿ ಈ ಹಣಕ್ಕೂ ಮತ್ತು ಕಾಂಗ್ರೆಸ್ ಸರ್ಕಾರಕ್ಕೂ ಸಂಬಂಧವಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು(ಅ.14): ಆದಾಯ ತೆರಿಗೆ ಇಲಾಖೆ ದಾಳಿ ವೇಳೆ ಗುತ್ತಿಗೆದಾರರೊಬ್ಬರಿಗೆ ಸೇರಿದ 42 ಕೋಟಿ ರು. ನಗದು ಪತ್ತೆಯಾಗಿರುವುದು ಕಮಿಷನ್ ಹಣ ಎಂದು ಆಪಾದಿಸಿರುವ ಪ್ರತಿಪಕ್ಷ ಬಿಜೆಪಿ ನಾಯಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಉಪಮುಖ್ಯಮಂತ್ರಿಗಳಾದ ಕೆ.ಎಸ್.ಈಶ್ವರಪ್ಪ, ಡಾ.ಸಿ.ಎನ್.ಅಶ್ವತ್ಥನಾರಾಯಣ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರು ಐಟಿ ದಾಳಿಗೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿ ಈ ಹಣಕ್ಕೂ ಮತ್ತು ಕಾಂಗ್ರೆಸ್ ಸರ್ಕಾರಕ್ಕೂ ಸಂಬಂಧವಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರಿನ 15ಕ್ಕೂ ಹೆಚ್ಚು ಕಡೆ ಐಟಿ ದಾಳಿಗೂ, ರಾಜಸ್ತಾನ ಚುನಾವಣೆಗೂ ಲಿಂಕ್!
ನಳಿನ್ ಕುಮಾರ್ ಕಟೀಲ್ ಮಾತನಾಡಿ, ಐಟಿ ದಾಳಿಯಲ್ಲಿ 23 ಬಾಕ್ಸ್‌ಗಳಲ್ಲಿ ಪತ್ತೆಯಾದ 42 ಕೋಟಿ ರು. ಮೊತ್ತ ಕಮಿಷನ್ ಹಣ ಎಂಬುದು ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಕರ್ನಾಟಕದಲ್ಲಿ ಕಾಂಗ್ರೆಸ್‌ನ ಎಟಿಎಂ ಸರ್ಕಾರ ಆಡಳಿತ ನಡೆಸುತ್ತಿದೆ. ಕೆಲವು ದಿನಗಳ ಹಿಂದೆ 600 ಕೋಟಿ ರು. ಬಾಕಿ ಮೊತ್ತವನ್ನು ಸರ್ಕಾರ ಗುತ್ತಿಗೆದಾರರಿಗೆ ಬಿಡುಗಡೆ ಮಾಡಿತ್ತು. ಈಗ ಸಿಕ್ಕ ಹಣ ಕಮಿಷನ್ ಹಣ ಎಂಬ ಮಾಹಿತಿ ಲಭಿಸಿದೆ. ತೆಲಂಗಾಣ ಚುನಾವಣೆಗೆ ಸಂಗ್ರಹಿಸಲಾದ ಹಣ ಇದು ಎನ್ನಲಾಗುತ್ತಿದೆ. ಕೆಲವು ಅಧಿಕಾರಿಗಳೇ ಈ ಹಿಂದೆ ರಾಜ್ಯಪಾಲರಿಗೆ ಸರ್ಕಾರದ ಕಮಿಷನ್ ಬಗ್ಗೆ ದೂರು ಕೊಟ್ಟಿದ್ದರು. ಈಗ ಸಿಕ್ಕಿದ ಹಣ ಸಂಪೂರ್ಣ ಭ್ರಷ್ಟಾಚಾರದ ಹಣ ಎಂದು ಹೇಳಿದರು.
ಎಐಸಿಸಿಗೆ ಕಳಿಸುವ ತಯಾರಿ:
ಕೆ.ಎಸ್.ಈಶ್ವರಪ್ಪ ಮಾತನಾಡಿ, ಐಟಿ ದಾಳಿಯನ್ನು ಸಿದ್ದರಾಮಯ್ಯ, ಡಿಕೆಶಿ ಖಂಡನೆ ಮಾಡಬೇಕಿತ್ತು. ಆದರೆ, ಅವರು ಹಾಗೆ ಮಾಡುತ್ತಿಲ್ಲ. ಕಾಂಗ್ರೆಸ್‌ನವರಿಗೂ ಗುತ್ತಿಗೆದಾರರಿಗೂ ನೇರ ಸಂಬಂಧ ಇದೆ. ಕಳೆದ ಸಲ ನಮ್ಮ ಮೇಲೆ 40% ಆರೋಪವನ್ನು ದಾಖಲೆ ಇಲ್ಲದೇ ಮಾಡಿದ್ದರು. ಆಗಲೇ ನಾವು ಇವರು ಕಾಂಗ್ರೆಸ್ ಏಜೆಂಟರು ಎಂದಿದ್ದೆವು. ಗುತ್ತಿಗೆದಾರರು ಮತ್ತು ಕಾಂಗ್ರೆಸ್‌ನವರು ಅಣ್ಣ ತಮ್ಮಂದಿರ ಹಾಗೆ. ಈ ಹಣವನ್ನು ಕೇಂದ್ರದ ಎಐಸಿಸಿಗೆ ಕಳಿಸಿಕೊಡುವ ತಯಾರಿ ಆಗಿತ್ತು, ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಆಪಾದಿಸಿದರು.
ಅಲ್ಪಾವಧಿಯ ಲೂಟಿಗೆ ಸಾಕ್ಷಿ:
ಡಾ.ಅಶ್ವತ್ಥನಾರಾಯಣ ಮಾತನಾಡಿ, ಇದು ಎಟಿಎಂ ಸರ್ಕಾರ ಎಂಬ ಆರೋಪ ಈಗ ಸಾಕ್ಷಿ ಸಮೇತ ಸ್ಪಷ್ಟವಾಗಿದೆ. ಕಲೆಕ್ಷನ್ ಮಾಡಿರುವ ಸಣ್ಣ ಮೊತ್ತ ಸಿಕ್ಕಿದೆ. ಇನ್ನೂ ಬಹಳಷ್ಟು ಕಡೆ ಇರುತ್ತದೆ. ಕಿರುಕುಳ ಕೊಟ್ಟು, ಹೆದರಿಸಿ ಕಲೆಕ್ಷನ್ ಮಾಡಿರುವ ದುಡ್ಡು. ಯಾರದು ಅಂತ ಗುತ್ತಿಗೆದಾರರು ಹೇಳಬೇಕು. ಅಲ್ಪಾವಧಿಯಲ್ಲೇ ಬಹಳಷ್ಟು ಹಣ ಲೂಟಿ ಮಾಡಿದ್ದಕ್ಕೆ ಇದು ಸಾಕ್ಷಿ. ಇನ್ನೂ ದುಡ್ಡಿನ ರಾಶಿ ಎಲ್ಲೆಲ್ಲಿ ಇದೆ ಎಂಬುದನ್ನು ನೋಡಬೇಕು. ಅಂದು ಇದೇ ಗುತ್ತಿಗೆದಾರ ಅಂಬಿಕಾಪತಿ ನಮ್ಮ ಸರ್ಕಾರದ ಮೇಲೆ ಆಧಾರವಿಲ್ಲದೇ ಆರೋಪ ಮಾಡಿದರು. ಇದು ಕಿಕ್ ಬ್ಯಾಕ್ ದುಡ್ಡು, ವಸೂಲಿ ದುಡ್ಡು, ಕಮಿಷನ್ ದುಡ್ಡು ಎಂದು ಹರಿಹಾಯ್ದರು.
ಬೆಂಗಳೂರಿನಲ್ಲಿ ಐಟಿ ಮೆಗಾ ರೇಡ್, ಏಕಕಾಲಕ್ಕೆ 15ಕ್ಕೂ ಹೆಚ್ಚು ಕಡೆ ದಾಳಿ, ವೈದ್ಯೆ ಸೇರಿ ಹಲವು ಮಂದಿಗೆ ಶಾಕ್
ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, 42 ಕೋಟಿ ರು. ನಗದು ಹಣ ಯಾವುದಕ್ಕೆ ಸಂಗ್ರಹ ಮಾಡಲಾಗಿತ್ತು, ಯಾರಿಗೆ ಕಳುಹಿಸುವುದಕ್ಕೆ ಸಂಗ್ರಹ ಮಾಡಲಾಗಿತ್ತು, ಯಾರ ಮೂಲಕ ಸಂಗ್ರಹ ಮಾಡಲಾಗಿತ್ತು ಎನ್ನುವುದನ್ನು ಸ್ಪಷ್ಟಪಡಿಸಬೇಕು. ಕರ್ನಾಟಕದ ಬವಣೆಗಳು ಇರುವಾಗ ಇಂತಹ ಅಕ್ರಮವಾಗಿ ಸಿಕ್ಕ ಹಣ ಯಾರು, ಯಾರಿಗೆ, ಯಾರಿಗೋಸ್ಕರ ಸಂಗ್ರಹ ಮಾಡುತ್ತಿದ್ದಾರೆ ಸರ್ಕಾರ ಸ್ಪಷ್ಟನೆ ಮಾಡಬೇಕಾಗುತ್ತದೆ. ಪಂಚರಾಜ್ಯ ಚುನಾವಣೆಗೂ ಇಲ್ಲಿ ಸಂಗ್ರಹವಾದ ಹಣಕ್ಕೆ ಯಾವ ನಂಟು ಇದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.
ರವಿಕುಮಾರ್ ಮಾತನಾಡಿ, ಗುತ್ತಿಗೆದಾರರಿಗೆ ಸರಕಾರ ಬಿಡುಗಡೆ ಮಾಡಿದ 650 ಕೋಟಿ ಹಣದಲ್ಲಿ ಬಂದಿರುವ ಕಮಿಷನ್ ಹಣವೇ 42 ಕೋಟಿ; ಅದು ಇವತ್ತು ಆದಾಯ ತೆರಿಗೆ ಇಲಾಖೆ ದಾಳಿಯ ವೇಳೆ ಸಿಕ್ಕಿದೆ ಎಂದು ಆರೋಪಿಸಿದರು.