ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ವಿಚಾರವಾಗಿ ಕ್ರೆಡಿಟ್‌ ಯಾರಿಗೆ ಸೇರಬೇಕು ಎಂಬ ಬಗ್ಗೆ ಆಡಳಿತ ಪಕ್ಷ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಭಾರೀ ವಾಗ್ಯುದ್ದ, ಪೈಪೋಟಿ ನಡೆದ ಪ್ರಸಂಗ ಸದನದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ವಿಧಾನಸಭೆ

ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ವಿಚಾರವಾಗಿ ಕ್ರೆಡಿಟ್‌ ಯಾರಿಗೆ ಸೇರಬೇಕು ಎಂಬ ಬಗ್ಗೆ ಆಡಳಿತ ಪಕ್ಷ ಬಿಜೆಪಿ, ಪ್ರತಿಪಕ್ಷ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಭಾರೀ ವಾಗ್ಯುದ್ದ, ಪೈಪೋಟಿ ನಡೆದ ಪ್ರಸಂಗ ಸದನದಲ್ಲಿ ನಡೆಯಿತು.

ಎಸ್ಸಿಎಸ್ಟಿ ಮೀಸಲಾತಿ (SCST reservation) ಹೆಚ್ಚಿಸುವ ಪ್ರಸ್ತಾವನೆಯನ್ನು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತಂದಿದ್ದೇ ಕಾಂಗ್ರೆಸ್‌ ಪಕ್ಷ ಎಂದು ಸಿದ್ದರಾಮಯ್ಯ ಅವರು ಹೇಳಿದರೆ, ಕಾಂಗ್ರೆಸ್‌ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ನಮ್ಮ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರು ಎಂದು ಜೆಡಿಎಸ್‌ ಸದಸ್ಯರು ತಾವು ಕ್ರೆಡಿಟ್‌ ಪಡೆಯುವ ಪ್ರಯತ್ನ ಮಾಡಿದರು. ಆಡಳಿತ ಪಕ್ಷದ ಸಚಿವ ಆರ್‌.ಅಶೋಕ್‌ (R.Ashok) ನೀವು ಏನೇ ಮಾಡಿದರೂ ಜನ ಇದರ ಕ್ರೆಡಿಟ್‌ ಅನ್ನು ನಮಗೆ ಕೊಟ್ಟಾಗಿದೆ. ನಿಮಗೆ ಸಿಗುವುದಿಲ್ಲ ಬಿಡಿ ಎಂದರು.

ರಾಜ್ಯಪಾಲರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಕುರಿತ ಭಾಷಣದ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Opposition leader Siddaramaiah) ಈ ವಿಷಯ ಪ್ರಸ್ತಾಪಿಸಿ, ಸರ್ಕಾರ ರಾಜ್ಯಪಾಲರ ಭಾಷಣದಲ್ಲಿ ಎಸ್ಟಿಮೀಸಲಾತಿಯನ್ನು ಶೇ.17ಕ್ಕೆ, ಎಸ್ಟಿಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಿ ಕ್ರಾಂತಿಕಾರಿ ನಿರ್ಧಾರ ಕೈಗೊಂಡಿರುವುದಾಗಿ ಸುಳ್ಳು ಹೇಳಿಸಿದೆ. ಎಸ್ಸಿ ಎಸ್ಟಿಮೀಸಲಾತಿ ಹೆಚ್ಚಳ ಸಂಬಂಧ ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಪ್ರಸ್ತಾವನೆ ಮಂಡಿಸಿದ್ದು ಕಾಂಗ್ರೆಸ್‌ ಪಕ್ಷ. ಈ ಪ್ರಸ್ತಾವನೆಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತು ಈ ಸಂಬಂಧ ವರದಿ ನೀಡಲು ನ್ಯಾಯಮುರ್ತಿ ನಾಗಮೋಹನ ದಾಸ್‌ (Justice Nagmohan Das)ಅವರ ಸಮಿತಿ ರಚಿಸಲಾಯಿತು.

ಪಂಚಮಸಾಲಿಗೆ ಮೀಸಲಾತಿ ಕೊಡದಿದ್ದರೆ ಬಿಜೆಪಿಗೆ ದೊಡ್ಡ ನಷ್ಟ: ಜಯಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

ಅನಂತರ ಅಧಿಕಾರಕ್ಕೆ ಬಂದ ಬಿಜೆಪಿ ಎರಡು ವರ್ಷ ಕಳೆದರೂ ಆ ವರದಿಯನ್ನು ಜಾರಿಗೊಳಿಸದೆ ಧೂಳು ಹಿಡಿಸಿತ್ತು. ಸಮುದಾಯದ ಎಲ್ಲ ಸ್ವಾಮೀಜಿಗಳು 257 ದಿನ ಪ್ರತಿಭಟನೆ ನಡೆಸಿದ ಬಳಿಕ ಎಚ್ಚೆತ್ತು ಸಂವಿಧಾನಕ್ಕೆ ತಿದ್ದುಪಡಿ ಆಗದೆ ಮೀಸಲಾತಿ ಹೆಚ್ಚಿಸಿರುವುದಾಗಿ ಹೇಳಿಕೊಳ್ಳುತ್ತಿದೆ. ಇದು ಸರಿಯಲ್ಲ. ಈಗಲಾದರೂ ಎಸ್ಸಿ ಎಸ್ಟಿಮೀಸಲಾತಿ ಹೆಚ್ಚಳದ ಕಾನೂನು ಊರ್ಜಿತಗೊಳಿಸಲು ಸಂವಿಧಾನಕ್ಕೆ ತಿದ್ದುಪಡಿ ತಂದು ಅದನ್ನು 9 ಶೆಡ್ಯೂಲ್‌ಗೆ ಸೇರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ಬೇಕಿದ್ದರೆ ನಿಯೋಗ ಕೊಂಡೊಯ್ದರೆ ನಾವೂ ಬರುತ್ತೇವೆ ಎಂದರು.

ಸಿದ್ದರಾಮಯ್ಯ ಅವರ ಭಾಷಣದ ವೇಳೆ ಮಧ್ಯಪ್ರವೇಶಿಸಿದ ಜೆಡಿಎಸ್‌ ಸದಸ್ಯ ಸಾ.ರಾ.ಮಹೇಶ್‌, ಎಸ್ಸಿ ಎಸ್ಟಿಮೀಸಲು ಹೆಚ್ಚಳದ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ್ದು ಅಂದಿನ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಎಂಬುದನ್ನೂ ಹೇಳಿ. ಸತ್ಯ ಮುಚ್ಚಿಡುವುದು ಎಷ್ಟುಸರಿ ಎಂದು ಹೇಳುವ ಮೂಲಕ ಇದರ ಕ್ರೆಡಿಟ್‌ ತಮ್ಮ ಪಕ್ಷಕ್ಕೂ ಸೇರಬೇಕೆಂದು ಹೇಳುವ ಪ್ರಯತ್ನ ಮಾಡಿದರು. ಆಗ ಸಿದ್ದರಾಮಯ್ಯ ಅವರು ಅದಕ್ಕೆ ನಾನು ಸಮ್ಮಿಶ್ರ ಸರ್ಕಾರದಲ್ಲಿ ಎಂದು ಹೇಳಿದ್ದು ಎಂದು ಸಮಾಧಾನ ಪಡಿಸಿದರು. ಮಧ್ಯ ಪ್ರವೇಶಿಸಿದ ಸಚಿವ ಅಶೋಕ್‌, ಈ ವಿಷಯದಲ್ಲಿ ಜನ ನಮಗೆ (ಸರ್ಕಾರಕ್ಕೆ) ಕ್ರೆಡಿಟ್‌ ಕೊಟ್ಟಾಗಿದೆ. ಸಮುದಾಯದ ಸ್ವಾಮೀಜಿಗಳು ಹೇಳಿದ್ದಾರೆ. ನೀವು ಕ್ರೆಡಿಟ್‌ ತೆಗೆದುಕೊಳ್ಳಲು ಬಿಡುವುದಿಲ್ಲ ಎಂದರು. ಆಗ ಸಿದ್ದರಾಮಯ್ಯ ನೀವು ಭ್ರಮೆಯಲ್ಲಿದ್ದೀರಿ ಆ ಸಮುದಾಯದ ಜನರಿಗೆ ನೀವು ಮೂಗಿಗೆ ಉಪ್ಪ ಸವರಿದ್ದೀರಿ ಎಂಬುದು ಗೊತ್ತಿದೆ ಎಂದರು.

ಎಸ್‌ಸಿ, ಎಸ್‌ಟಿ ಮೀಸಲು ಹೆಚ್ಚಳ ಕೇಂದ್ರಕ್ಕೆ ಶಿಫಾರಸು