Ambedkar Jayanti 2022: ಸಂವಿಧಾನದ ಆಶಯ ಕೇಂದ್ರದ ಮೋದಿ ಸರ್ಕಾರದಿಂದ ಸಾಕಾರ
ಜಾತಿಪದ್ಧತಿ ನಾಶವಾದರೆ ಮಾತ್ರ ಹಿಂದೂ ಸಮಾಜ ಆತ್ಮ ರಕ್ಷಣೆಗೆ ಸಮರ್ಥವಾಗಬಲ್ಲದು. ಇಂಥ ಆಂತರಿಕ ಶಕ್ತಿ ಇಲ್ಲದೇ ಹೋದರೆ ಸ್ವರಾಜ್ಯವೆಂಬುದು ಹಿಂದೂಗಳ ಪಾಲಿಗೆ ಗುಲಾಮಗಿರಿಯತ್ತ ಇಡುವ ಇನ್ನೊಂದು ಹೆಜ್ಜೆಯೇ ಆದೀತು ಎಂದು ಹೇಳಿದ್ದರು. ಅದನ್ನು ನಾವೆಲ್ಲ ಅರಿತುಕೊಳ್ಳಬೇಕು.
ನಾವು ಪ್ರಪ್ರಥಮವಾಗಿ ಭಾರತೀಯರು ಮತ್ತು ಅಂತ್ಯದಲ್ಲಿಯೂ ಭಾರತೀಯರಾಗಿಯೇ ಇರಬೇಕು ಎಂದು ಬೋಧಿಸಿದ ಪ್ರಖಂಡ ರಾಷ್ಟ್ರೀಯವಾದಿ, ನ್ಯಾಯಶಾಸ್ತ್ರಜ್ಞ, ರಾಜಕೀಯ ಮುತ್ಸದ್ದಿ, ಸಂಘಟಕ, ತತ್ವಶಾಸ್ತ್ರಜ್ಞ, ಚಿಂತಕ, ಮಾನವಶಾಸ್ತ್ರಜ್ಞ, ಇತಿಹಾಸಕಾರ, ವಾಗ್ಮಿ, ಲೇಖಕ, ಅರ್ಥಶಾಸ್ತ್ರಜ್ಞ, ವಿದ್ವಾಂಸ, ಸಂಪಾದಕ, ಕ್ರಾಂತಿಕಾರಿ ಎಲ್ಲವೂ ಆಗಿದ್ದವರು ಮಹಾನ್ ನೇತಾರ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್. ಜೀವನದುದ್ದಕ್ಕೂ ಮಾದರಿಯಾಗಿಯೇ ಬದುಕಿದ, ಶ್ರೇಷ್ಠ ವ್ಯಕ್ತಿತ್ವದ, ಅದ್ಭುತ ಸಾಮರ್ಥ್ಯ ಶಕ್ತಿಯಾಗಿ ಅಂಬೇಡ್ಕರ್ ಅವರ ಜೀವನಗಾಥೆಯನ್ನು ಈ ದೇಶ ಬಂಗಾರದ ಶಬ್ದಗಳಲ್ಲಿ ಬರೆದರೂ ಸಾಲುವುದಿಲ್ಲ.
ಅಂದು ಜಗವೆಲ್ಲ ಮಲಗಿರಲು, ಅವನೊಬ್ಬ ಎದ್ದಿದ್ದ, ದೇಶವೆಲ್ಲ ಅಜ್ಞಾನದ ಕತ್ತಲಲ್ಲಿ ಮಲಗಿರುವಾಗ ಆ ಕತ್ತಲನ್ನು ಕಳೆಯುವ ಜ್ಞಾನದ ಬೆಳಕಿನಲ್ಲಿ ಎಚ್ಚರವಾಗಿದ್ದ ಎಂದು ದಾರ್ಶನಿಕರು ಬರೆಯುತ್ತಾರೆ. ಇಡೀ ಭಾರತಕ್ಕೆ ಸಂವಿಧಾನವೆಂಬ ಬೆಳಕನ್ನು ನೀಡಿ, ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಜ್ಞಾನದ ದೀವಟಿಗೆಯನ್ನು ಹಿಡಿದ ಮಹಾನ್ ಯುಗಪುರುಷ ಡಾ. ಬಿ.ಆರ್.ಅಂಬೇಡ್ಕರ್ ಅವನ ಜನ್ಮದಿನದಂದು ಅವರ ದಿವ್ಯಚೇತನಕ್ಕೆ ಸಾಷ್ಟಾಂಗ ನಮನಗಳು.
Ambedkar Portrait Controversy ಕೋರ್ಟ್‌ನಲ್ಲಿ ರಾಷ್ಟ್ರೀಯ ಹಬ್ಬಕ್ಕೆ ಅಂಬೇಡ್ಕರ್ ಫೋಟೋ ಕಡ್ಡಾಯ!
ಸ್ವಸಹಾಯ ಜೀವನದ ಪ್ರತಿಪಾದಕ
ಬದುಕಿದರೆ ಹುಲಿ ಸಿಂಹಗಳಂತೆ ಬದುಕಿ, ಏಕೆಂದರೆ ಬಲಿ ಕೊಡುವುದು ಕುರಿ ಕೋಳಿಗಳನ್ನೇ ಹೊರತು ಹುಲಿ ಸಿಂಹಗಳನ್ನಲ್ಲ ಎಂದು ಡಾ.ಅಂಬೇಡ್ಕರ್ ಅವರು ಅಂದು ಹೇಳಿದ್ದ ಮಾತನ್ನು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ ಜಾಗತಿಕವಾಗಿ ಅನುಷ್ಠಾನಕ್ಕೆ ತಂದಿದೆ ಎಂದು ಹೆಮ್ಮೆಯಿಂದ ಹೇಳಬಲ್ಲೆ. ಅಂತಹ ಸರ್ಕಾರದ ಸಂಸದನಾಗಿ ಇರುವುದು ನನ್ನ ಪಾಲಿನ ಭಾಗ್ಯ ಎಂದು ಭಾವಿಸುತ್ತೇನೆ.
ನಾನು ಕೇವಲ ಒಂದೇ ಜಾತಿ ಅಥವಾ ಒಂದೇ ಜನಾಂಗದ ಪರವಾಗಿ ಕೆಲಸ ಮಾಡಿಲ್ಲ. ಭಾರತದ ಪ್ರತಿಯೊಬ್ಬ ಕಟ್ಟಕಡೆಯ ವ್ಯಕ್ತಿಯ ಸಲುವಾಗಿ ಜೀವ ಸವೆಸಿದ್ದೇನೆ. ಸಂಶಯವಿದ್ದರೆ ಹೋಗಿ ಸಂವಿಧಾನ ಓದಿಕೊಳ್ಳಿ ಎಂದು ಡಾ.ಅಂಬೇಡ್ಕರ್ ಒಂದು ಕಡೆ ಬರೆಯುತ್ತಾರೆ. ಅದು ನೂರಕ್ಕೆ ನೂರರಷ್ಟುಸತ್ಯ. ಅವರು ಪ್ರತಿ ಭಾರತೀಯನ ಏಳಿಗೆಯನ್ನು ದೃಷ್ಟಿಯಲ್ಲಿಟ್ಟು ಸಂವಿಧಾನದಲ್ಲಿ ತತ್ವಗಳನ್ನು ಅಳವಡಿಸಿದರು. ನೀವು ಗೌರವಾನ್ವಿತ ಬದುಕನ್ನು ಬದುಕಬೇಕಾದರೆ ಸ್ವಸಹಾಯ ಜೀವನ ಶೈಲಿಯನ್ನು ಪಾಲಿಸಲೇಬೇಕು. ಇದೇ ಸರಿಯಾದ ಜೀವನಶೈಲಿ ಎಂದು ಡಾ.ಅಂಬೇಡ್ಕರ್ ಹೇಳುತ್ತಿದ್ದರು. ಇವತ್ತಿನ ಕಾಲಘಟ್ಟದಲ್ಲಿ ಯುವಜನಾಂಗ ಸ್ವ ಉದ್ಯೋಗದ ಅಥವಾ ಸ್ಟಾರ್ಚ್‌ಅಪ್ ಮೂಲಕ ಹೊಸ ಮನ್ವಂತರಕ್ಕೆ ಕಾಲಿಡುತ್ತಿದೆ. ಅದಕ್ಕೆ ಮೋದಿ ಸರ್ಕಾರ ಪ್ಯಾಕೇಜುಗಳ ಮೂಲಕ, ಮುದ್ರಾ ಯೋಜನೆಗಳ ಮೂಲಕ ಸಹಾಯ ನೀಡುತ್ತಿದೆ. ಉದ್ಯೋಗ ಹುಡುಕುವುದಕ್ಕಿಂತ ಉದ್ಯೋಗ ಸೃಷ್ಟಿಸುವ ಉದ್ಯೋಗದಾತರು ಈಗಿನ ಯುವಶಕ್ತಿಯಾಗಬೇಕು ಎನ್ನುವುದು ವಾಸ್ತವದ ಅಗತ್ಯ ಕೂಡ ಹೌದು.
ಸ್ತ್ರೀಯರ ಪ್ರಗತಿಗೆ ಒತ್ತು
ಮಹಿಳೆಯರ ಪ್ರಗತಿಯ ಆಧಾರದ ಮೇಲೆ ಸಮುದಾಯದ ಪ್ರಗತಿಯನ್ನು ಅಳೆಯಬೇಕು ಎಂದಿದ್ದರು ಅಂಬೇಡ್ಕರ್. ತ್ರಿವಳಿ ತಲಾಖ್ ನಿಷೇಧ, ಉಜಾಲಾ ಯೋಜನೆ, ಉಜ್ವಲಾ ಯೋಜನೆ ಸಹಿತ ಮಹಿಳೆಯರು ಸ್ವಾವಲಂಬಿಯಾಗಿ ಬದುಕಲು ಏನು ಯೋಜನೆಗಳನ್ನು ತರಲು ಸಾಧ್ಯವಿದೆಯೋ ಅದನ್ನು ತಂದ ಕೀರ್ತಿ ನಮ್ಮ ಸರ್ಕಾರದ್ದು. ಅದಕ್ಕಾಗಿ ಕಳೆದ ಬಾರಿ ಚುನಾವಣೆ ನಡೆದ ಪಂಚ ರಾಜ್ಯಗಳಲ್ಲಿ ಮಹಿಳೆಯರು ಹೆಚ್ಚಾಗಿ ಭಾರತೀಯ ಜನತಾ ಪಾರ್ಟಿಗೆ ಮತ ಚಲಾಯಿಸುವ ಮೂಲಕ ತಮ್ಮ ಉನ್ನತಿಗೆ ಸಹಾಯ ಮಾಡಿದ ಮೋದಿಯವರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.
Hijab Row ಏಕರೂಪ ಸಂಹಿತೆ ಬಗ್ಗೆ ಅಂಬೇಡ್ಕರ್ ಹೇಳಿದ್ದೇನು?
ಈ ದೇಶದಲ್ಲಿ ರಾಜಕೀಯ ಪ್ರಜಾಪ್ರಭುತ್ವದ ಜೊತೆಗೆ ಸಾಮಾಜಿಕ ಪ್ರಜಾಪ್ರಭುತ್ವವೂ ಅತ್ಯಗತ್ಯ. ಆಂತರಿಕ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದಿಂದ ಮಾತ್ರ ಸಾಮಾಜಿಕ ಪ್ರಜಾಪ್ರಭುತ್ವ ಸಾಧ್ಯ. ಇದು ಭಾರತೀಯರ ಜೀವನದಲ್ಲಿ ಹಾಸುಹೊಕ್ಕಾದಾಗ ಪ್ರಜಾಪ್ರಭುತ್ವ ಸಾರ್ಥಕವಾಗುತ್ತದೆ ಎಂದು ಡಾ.ಭೀಮರಾವ್ ರಾಮಜಿ ಅಂಬೇಡ್ಕರ್ ಅವರು ಹೇಳಿದ ಮಾತು ಅರ್ಥಗರ್ಭಿತ.
ಅಂಬೇಡ್ಕರ್ ಒಳಗೊಬ್ಬ ಕ್ರಾಂತಿಕಾರಿ
ಮಧ್ಯಪ್ರದೇಶದ ಮಾಹುವಿನಲ್ಲಿ ಭಾರತಾಂಬೆಯ ಮಡಿಲಲ್ಲಿ 1891 ಏಪ್ರಿಲ್ 14ರಂದು ಈ ದೇಶದ ರತ್ನವೊಂದು ಜನ್ಮ ತಳೆದಾಗ ಮುಂದೊಂದು ದಿನ ಇಡೀ ವಿಶ್ವವೇ ನಿಬ್ಬೆರಗಾಗುವಂತಹ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಸಂವಿಧಾನದ ಜನಕನ ಜನ್ಮವಾಗಿದೆ ಎನ್ನುವ ಕಲ್ಪನೆ ಯಾರಿಗೂ ಇರಲು ಸಾಧ್ಯವಿಲ್ಲ. ಯಾಕೆಂದರೆ ಅಂಬೇಡ್ಕರ್ ಅವರೇ ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿರುವಂತೆ ಶಾಲೆಯಲ್ಲಿ ಬಾಯಾರಿದಾಗ ನೀರಿನ ಪೈಪನ್ನು ಮುಟ್ಟಿನೀರು ಕುಡಿಯುವಷ್ಟುಸ್ವಾತಂತ್ರ್ಯ ಅವರಿಗಿರಲಿಲ್ಲ. ಬಹುಶಃ ತಮ್ಮ ಮೇಲೆ ಆದ ಇಂತಹ ಘಟನೆಗಳು ಅಂಬೇಡ್ಕರ್ ಅವರನ್ನು ಮಾನಸಿಕವಾಗಿ ಗಟ್ಟಿಗೊಳಿಸುತ್ತಾ ಹೋದವು. ಆ ಮೂಲಕ ಒಬ್ಬ ಕ್ರಾಂತಿಕಾರಿ ಅವರ ಒಳಗೆ ಜನ್ಮ ಎತ್ತಿದ್ದ.
ಜಗತ್ತಿನ ಅತ್ಯಂತ ಶ್ರೇಷ್ಠ ಸಂವಿಧಾನ
ಬದುಕು ಉದ್ದವಾಗಿರದೇ ಸಾಧನೆ ದೀರ್ಘವಾಗಿರಲಿ ಎಂದು ಬಯಸಿದವರು ಅಂಬೇಡ್ಕರ್. ಭಾರತದ ಸಂವಿಧಾನ ರಚನೆಯಾಗುವ ವಿಚಾರ ಮಾಡುವಾಗ ಏಳು ಜನರ ನಿಯೋಗವನ್ನು ರಚಿಸಲಾಗಿತ್ತು. ರಚನಾ ಸಮಿತಿಗೆ ಯಾರನ್ನು ಮುಖ್ಯಸ್ಥರನ್ನಾಗಿ ಮಾಡಬೇಕು ಎನ್ನುವ ಚಿಂತನೆಯನ್ನು ನೆಹರೂ ಹಾಗೂ ಪಟೇಲರು ಮಾಡುವಾಗ ಅಂತರಾಷ್ಟ್ರೀಯವಾಗಿ ಪ್ರಖ್ಯಾತರಾಗಿದ್ದ ಸಂವಿಧಾನ ತಜ್ಞ ಎಂದೇ ಗುರುತಿಸಲ್ಪಟ್ಟಿದ್ದ ಸರ್ ಗೋರ್ ಜೆನ್ನಿಂಗ್‌್ಸ ಅವರ ಹೆಸರು ಚರ್ಚೆಗೆ ಬಂದಿತ್ತು. ಈ ಬಗ್ಗೆ ಮಹಾತ್ಮ ಗಾಂಧೀಜಿಯವರ ಅಭಿಪ್ರಾಯ ಕೇಳಿದಾಗ ಸಂವಿಧಾನದ ರಚನೆಗೆ ಯಾವುದೇ ವಿದೇಶಿಗರ ಅಗತ್ಯವೇ ಇಲ್ಲ. ನಮ್ಮ ದೇಶದಲ್ಲಿಯೇ, ನಮ್ಮ ಸಮಕಾಲೀನರಾಗಿರುವ ಡಾ.ಅಂಬೇಡ್ಕರ್ ಅವರು ಸಂವಿಧಾನದ ಮೂಲ ತಿರುಳು ಮತ್ತು ಈ ದೇಶದ ಮೂಲ ಸತ್ವವನ್ನು ಅಗಾಧವಾಗಿ ಅರಿತಿದ್ದು, ಶ್ರೇಷ್ಠ ಸಂವಿಧಾನ ರಚನೆಗೆ ಪೂರ್ಣ ವಿದ್ವತ್ತನ್ನು ಹೊಂದಿದ್ದಾರೆ.
ಅವರನ್ನೇ ಮುಖ್ಯಸ್ಥರನ್ನಾಗಿ ಮಾಡುವುದು ಸೂಕ್ತ ಎಂದು ಹೇಳಿದ್ದು ಎಷ್ಟೊಂದು ನಿಜವಾಗಿತ್ತಲ್ಲ ಎಂದು ಸಂವಿಧಾನ ರಚನೆಯಾಗಿ ಏಳು ದಶಕಗಳ ಬಳಿಕವೂ ಅನಿಸುತ್ತದೆ. ನಮ್ಮ ಜ್ಞಾನವನ್ನು ಪ್ರಚೋದಿಸುವ, ಸಮಬಾಳ್ವೆಯನ್ನು ಸಾಧಿಸುವ ಮತ್ತು ಎಲ್ಲರಿಗೂ ಯೋಗ್ಯ ಜೀವನವನ್ನು ನಿಶ್ಚಿತಗೊಳಿಸುವ ರೀತಿಯಲ್ಲಿಯೇ ಬದುಕಿದ ದಿವ್ಯ ಚೇತನವನ್ನು ಸಂವಿಧಾನದ ನಿರ್ಮಾತೃರಾಗಿ ಮಾಡಿದ್ದು ಯೋಗ್ಯ ನಿರ್ಧಾರವಾಗಿದೆ ಎಂದು ಅವರ ಜೀವನ ಚರಿತ್ರೆಯನ್ನು ಬರೆದ ಲೇಖಕರು ಅಭಿಪ್ರಾಯಪಟ್ಟಿದ್ದಾರೆ.
ಬ್ರಿಟಿಷರಿಗೆ ತಲೆಬಾಗದ ನಾಯಕ
ಸಂವಿಧಾನದ ರಚನೆಯಲ್ಲಿ ಬ್ರಿಟಿಷ್ ಅಧಿಕಾರಿಗಳೊಂದಿಗಿನ ದುಂಡು ಮೇಜಿನ ಪರಿಷತ್ ಸಭೆ ಅತಿ ಮಹತ್ವಪೂರ್ಣವಾಗಿದೆ. ದುಂಡು ಮೇಜಿನ ಪರಿಷತ್‌ನ ಮೊದಲ ಸಭೆಯಲ್ಲಿಯೇ ಬ್ರಿಟಿಷ್ ಸರ್ಕಾರಕ್ಕೆ ಸ್ಪಷ್ಟಮಾತುಗಳಲ್ಲಿ ಹೇಳಿದ ಅಂಬೇಡ್ಕರ್ ಅವರು ಈ ದೇಶಕ್ಕೆ ಎಂತಹ ಸಂವಿಧಾನವನ್ನು ನಾವು ರಚಿಸಬೇಕಾಗಿದೆ ಎಂದರೆ ಅದು ಈ ದೇಶದ ಬಹುತೇಕ ನಾಗರಿಕರಿಗೆ ಒಪ್ಪುವಂತೆ ಇರಬೇಕು. ನೀವು ನಮಗೆ ಯಾವುದೇ ನಿರ್ದೇಶನಗಳನ್ನು ನೀಡುವುದನ್ನು ನಾವು ಒಪ್ಪುವ ವಿಷಯವೇ ಇಲ್ಲ.
ನಾವು ಭಾರತೀಯರ ಮನದಾಳದ ಬಯಕೆಯಂತೆ ಸಂವಿಧಾನವನ್ನು ರಚಿಸುತ್ತೇವೆ. ಈ ವಿಷಯದಲ್ಲಿ ನಮ್ಮ ಜನರ ಹಿತಾಸಕ್ತಿಗಳೇ ನಮಗೆ ಮುಖ್ಯ ಎಂದು ಹೇಳಿದ್ದರು. ಡಾ.ಅಂಬೇಡ್ಕರ್ ಅವರು ಯಾವುದೋ ಕಾನೂನುಗಳನ್ನು ಮಾಡಿ ಅದನ್ನು ಜನರ ಮೇಲೆ ಹೇರಲು ಬಯಸದೇ, ಜನರ ಅಭಿಪ್ರಾಯಗಳನ್ನು ಸ್ವೀಕರಿಸಿ, ಜನರಿಂದಲೇ ರಚನೆಯಾಗುವ ಸರ್ಕಾರಗಳು ಹೇಗಿರಬೇಕು, ಅದರ ಆದ್ಯತೆಗಳೇನಾಗಿರಬೇಕು ಮತ್ತು ಅದನ್ನು ಜನಪರವಾಗಿ ಹೇಗೆ ಮಾಡಬಹುದು ಎಂದು ಚಿಂತಿಸಿ ಅದನ್ನು ಸಂವಿಧಾನದಲ್ಲಿ ಅಳವಡಿಸಿದ್ದರು. ಉತ್ತಮ ಸರ್ಕಾರವು ಜನರ ಕೈಯಲ್ಲಿಯೇ ಇರಬೇಕೇ ವಿನಃ ಅದು ಕೆಲವರಿಂದ ಕೆಲವರಿಗಾಗಿ ಇರಬಾರದು. ಎಲ್ಲರ ಅಭಿಪ್ರಾಯ ಕ್ರೋಢೀಕರಿಸಿ ಸರ್ಕಾರ ರಚನೆಯಾಗಬೇಕು ಎಂದು ಅವರು ಅಂದುಕೊಂಡಿದ್ದರು ಮತ್ತು ಹಾಗೆ ನಡೆದುಕೊಂಡರು.
ಡಾ.ಅಂಬೇಡ್ಕರ್ ಅವರು ಸಂವಿಧಾನದ ರಚನೆಯಲ್ಲಿ ಬಹುಮುಖ್ಯ ಪಾತ್ರ ವಹಿಸಿ ದೇಶದಲ್ಲಿ ಪ್ರಜಾಪ್ರಭುತ್ವ ಸರ್ಕಾರದ ಆಯ್ಕೆ ಮತ್ತು ಅದರ ಜವಾಬ್ದಾರಿ ಮತ್ತು ಸ್ಥಿರತೆಯ ಬಗ್ಗೆ ನಿಖರವಾಗಿ ಕಾನೂನುಗಳನ್ನು ರಚಿಸಿದ್ದ ಕಾರಣ ಅದು ಇಡೀ ಪ್ರಪಂಚಕ್ಕೆ ಮಾದರಿಯಾಗಿದೆ. ನಮ್ಮ ಜೀವನ ಸಾರ್ಥಕವಾಗುವುದು ನಾವು ಎಷ್ಟುಸುಖ ಸಂತೋಷದಿಂದ ಇದ್ದೇವೆ ಎಂಬುವುದರಿಂದಲ್ಲ, ನಮ್ಮಿಂದಾಗಿ ಎಷ್ಟುಜನ ಸುಖ, ಶಾಂತಿ, ಸಂತಸದಿಂದ ಇದ್ದಾರೆ ಎಂಬುವುದರ ಮೇಲೆ ಎಂದು ಅವರು ಹೇಳಿದ್ದಾರೆ. ಅವರ ಜೀವನಾಮೃತ ಭಾರತೀಯ ರಾಜಕಾರಣದ ಸ್ವರ್ಣ ಶಬ್ದಗಳು ಎಂದೇ ಪರಿಗಣಿತವಾಗಿವೆ. ರಾಜಕಾರಣಿಗಳು ಈ ಮಾತುಗಳನ್ನು ತಮ್ಮ ಬದುಕಿನಲ್ಲಿ ಸ್ವೀಕರಿಸಿದರೆ ನಿಜಕ್ಕೂ ಮಾದರಿ ವ್ಯಕ್ತಿತ್ವವನ್ನು ಗಳಿಸಬಹುದು.
ಸ್ವ ಅರಿವೇ ಮೋಕ್ಷಕ್ಕೆ ದಾರಿ ಎಂದ ಮಹಾವೀರ
ಅಂಬೇಡ್ಕರ್ ಆಶಯಕ್ಕೆ ಬಿಜೆಪಿ ಒತ್ತು
ನಮ್ಮ ಭಾರತೀಯ ಜನತಾ ಪಾರ್ಟಿ ಡಾ.ಅಂಬೇಡ್ಕರ್ ಅವರ ಚಿಂತನಾ ಶೈಲಿಯನ್ನು ಅಳವಡಿಸಿಕೊಂಡಿದೆ ಎನ್ನುವುದಕ್ಕೆ ಅವರ ಒಂದು ಸಂದೇಶವೇ ಸಾಕ್ಷಿ. ಅಂಬೇಡ್ಕರ್ ಹೇಳಿರುವಂತೆ ದೇಶದ ಹಿತಕ್ಕಿಂತ ಪಕ್ಷದ ಹಿತವನ್ನೇ ಪ್ರಧಾನವೆಂದು ಪರಿಗಣಿಸುವ ರಾಜಕೀಯ ಪಕ್ಷಗಳ ಹುನ್ನಾರದ ಬಗ್ಗೆ ಇಡೀ ದೇಶ ಎಚ್ಚರದಿಂದಿರಬೇಕಾಗುತ್ತದೆ. ಇಲ್ಲದೇ ಹೋದರೆ ದೇಶದ ಸ್ವಾತಂತ್ರ್ಯ, ಏಕತೆ ಹಾಗೂ ಸಂವಿಧಾನದ ಮೇಲೆ ಅಪಾಯದ ಕಾರ್ಮೋಡ ಕವಿಯುತ್ತದೆ ಭಾಜಪಾದ ಮೊದಲ ಸಿದ್ಧಾಂತವೇ ದೇಶ ಮೊದಲು. ಅದನ್ನೇ ಅಂಬೇಡ್ಕರ್ ಅವರು ಪ್ರತಿಪಾದಿಸಿದ್ದರು. ಪಕ್ಷ ಮೊದಲು ಎಂದುಕೊಳ್ಳುವವರು ದೇಶಕ್ಕೆ ಅಪಾಯ ಎಂದಿದ್ದರು.
ಹಿಂದೂ ಸಮಾಜದ ರಕ್ಷಣೆಗೆ ನಾಂದಿ
ಅವರ ಇನ್ನೊಂದು ಸಂದೇಶವನ್ನೇ ತೆಗೆದುಕೊಳ್ಳೋಣ. ಜಾತಿಪದ್ಧತಿ ನಾಶವಾದರೆ ಮಾತ್ರ ಹಿಂದೂ ಸಮಾಜ ಆತ್ಮ ರಕ್ಷಣೆಗೆ ಸಮರ್ಥವಾಗಬಲ್ಲದು. ಇಂಥ ಆಂತರಿಕ ಶಕ್ತಿ ಇಲ್ಲದೇ ಹೋದರೆ ಸ್ವರಾಜ್ಯವೆಂಬುದು ಹಿಂದೂಗಳ ಪಾಲಿಗೆ ಗುಲಾಮಗಿರಿಯತ್ತ ಇಡುವ ಇನ್ನೊಂದು ಹೆಜ್ಜೆಯೇ ಆದೀತು ಎಂದು ಹೇಳಿದ್ದರು. ಅದನ್ನು ಅರಿತುಕೊಳ್ಳುವುದರಿಂದ ಹಿಂದೂ ಸಮಾಜ ಎಷ್ಟುಸದೃಢವಾಗುತ್ತದೆ ಎನ್ನುವುದಕ್ಕೆ ಅವರ ಮಾತುಗಳೇ ಸಾಕ್ಷಿ.
ಶಿಕ್ಷಣ ಮತ್ತು ಜ್ಞಾನದ ಪಕ್ಷಪಾತಿ
ಶಿಕ್ಷಣ ಪ್ರಬಲ ಮತ್ತು ಪರಿಣಾಮಕಾರಿ ಅಸ್ತ್ರ ಎಂಬುದನ್ನು ಡಾ.ಅಂಬೇಡ್ಕರ್ ಆವತ್ತೇ ಬೋಧಿಸಿದ್ದರು. ಆ ಕಾಲಕ್ಕೆ ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದ ಅಂಬೇಡ್ಕರ್ ಅವರಿಗೆ ಶಿಕ್ಷಣದ ಮಹತ್ವ ಗೊತ್ತಿತ್ತು. ತಮ್ಮ ಸಮಾಜ ಮಾತ್ರವಲ್ಲ, ಶಿಕ್ಷಣ ಹೊಂದುವ ಯಾವುದೇ ವ್ಯಕ್ತಿ ಬಲಶಾಲಿಯಾಗಿರುತ್ತಾನೆ ಎಂದು ಎಲ್ಲಾ ಕಡೆ ಹೇಳುತ್ತಿದ್ದರು. ಅಂಬೇಡ್ಕರ್ ಅವರ ಜೀವನ ಸಂದೇಶಗಳು ಕೆಲವರಿಗೆ ಒಂದಿಷ್ಟುಕಹಿಯಂತೆ ಕಂಡರೂ ಅದರ ಒಳಗೆ ದೂರಗಾಮಿ ಪರಿಣಾಮಗಳು ಇರುತ್ತವೆ ಎಂದು ಯಾರೂ ಅಲ್ಲಗಳೆಯುವಂತಿರಲಿಲ್ಲ. ಭಾರತದ ಜನತೆ ದೇವಸ್ಥಾನಗಳಿಗೆ ಸಾಲುಗಟ್ಟಿನಿಲ್ಲುವಂತೆ ಗ್ರಂಥಾಲಯಗಳಿಗೆ ಸಾಲುಗಟ್ಟಿಯಾವಾಗ ನಿಲ್ಲುತ್ತಾರೋ, ಅಂದು ಭಾರತ ಜಗತ್ತಿನ ಗುರುವಾಗಲಿದೆ ಎಂದಿದ್ದರು. ಇದು ಶಿಕ್ಷಣಕ್ಕೆ ಅವರು ಕೊಡುತ್ತಿದ್ದ ಮೊದಲ ಪ್ರಾಶಸ್ತ್ಯ ಆಗಿತ್ತು.
ಜ್ಞಾನ ಒಂದು ಅಸ್ತ್ರ ಎಂದು ಪ್ರತಿಪಾದಿಸುತ್ತಲೇ ಬರುತ್ತಿದ್ದರು ಅಂಬೇಡ್ಕರ್. ಸತ್ತ ಮೇಲೆ ಬದುಕಬೇಕು ಎಂದರೆ ಜನ ಓದುವ ಹಾಗೆ ಏನಾದರೂ ಬರೆದಿಟ್ಟು ಹೋಗಿ ಅಥವಾ ಜನ ನಿಮ್ಮ ಬಗ್ಗೆ ಬರೆಯುವ ಹಾಗೆ ಏನಾದರೂ ಕಾರ್ಯ ಮಾಡಿ ಹೋಗಿ ಎಂದು ಹೇಳಿದ್ದರು. ಹಾಗೆ ಬದುಕಿದ ಅಂಬೇಡ್ಕರ್ ಅವರು ಪ್ರತಿ ಮನುಷ್ಯನಲ್ಲಿಯೂ ಏನಾದರೂ ವಿಶೇಷವಾಗಿರುವುದನ್ನು ಸಾಧಿಸುವ ಸಾಮರ್ಥ್ಯ ಇದೆ ಎನ್ನುತ್ತಿದ್ದರು. ಅದನ್ನು ಸಾಧಿಸಲು ಪ್ರತಿಯೊಬ್ಬರಿಗೆ ಪ್ರೇರಣೆ ನೀಡುವ ಮಾತುಗಳನ್ನು ಅವರು ಆಡುತ್ತಿದ್ದರು. ಅವರ ಚಿಂತನೆಗಳು ಯಾವತ್ತೂ ಪ್ರಸ್ತುತವಾಗಿಯೇ ಇರಲಿದೆ ಮತ್ತು ಎಂದಿಗೂ ನಮಗೆ ದಾರಿದೀಪವಾಗಿರುತ್ತವೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
- ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಜ್ಯಾಧ್ಯಕ್ಷ