ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಪತ್ನಿಯನ್ನು ಗ್ರೂಪ್ ಸಿ ಹುದ್ದೆಗೆ ನೇಮಕಗೊಳಿಸಿ ಸರಕಾರ ಆದೇಶ
ಬಿಜೆಪಿ ಕಾರ್ಯಕರ್ತ ದಿವಂಗತ ಪ್ರವೀಣ್ ನೆಟ್ಟಾರು ಅವರ ಪತ್ನಿ ಶ್ರೀಮತಿ ನೂತನ ಕುಮಾರಿ ಎಂ. ಅವರನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ ಅವರು ಮುಖ್ಯಮಂತ್ರಿ ಸಚಿವಾಲಯದಲ್ಲಿನ ಗ್ರೂಪ್ ಸಿ ಹುದ್ದೆಗೆ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು (ಸೆ.29): ದುಷ್ಕರ್ಮಿಗಳಿಂದ ಹತ್ಯೆಯಾಗಿರುವ ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು ಅವರ ಮನೆಯವರಿಗೆ ಸರ್ಕಾರದ ವತಿಯಿಂದ ನೀಡಲಾದ ಭರವಸೆಯನ್ನು ಮುಖ್ಯಮಂತ್ರಿಗಳು ಈಡೇರಿಸಿದ್ದಾರೆ. ಬಿಜೆಪಿ ಕಾರ್ಯಕರ್ತ ದಿವಂಗತ ಪ್ರವೀಣ್ ನೆಟ್ಟಾರು ಅವರ ಪತ್ನಿ ಶ್ರೀಮತಿ ನೂತನ ಕುಮಾರಿ ಎಂ. ಅವರನ್ನು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಎಸ್. ಬೊಮ್ಮಾಯಿ ಅವರು ಮುಖ್ಯಮಂತ್ರಿ ಸಚಿವಾಲಯದಲ್ಲಿನ ಗ್ರೂಪ್ ಸಿ ಹುದ್ದೆಗೆ ನೇಮಕಗೊಳಿಸಿ ಆದೇಶ ಹೊರಡಿಸಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಅವರು, ಪ್ರವೀಣ್ ನೆಟ್ಟಾರು ಅವರ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿ ಕಚೇರಿಯಲ್ಲಿ ಉದ್ಯೋಗ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಈ ಮೊದಲು ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಬಿಜೆಪಿ 25 ಲಕ್ಷ ರು. ಪರಿಹಾರ ಮತ್ತು ಸರ್ಕಾರ ವತಿಯಿಂದಲೂ ಆರ್ಥಿಕ ನೆರವನ್ನು ನೀಡಲಾಗಿತ್ತು. ಅಲ್ಲದೇ, ಕೆಲ ಬಿಜೆಪಿ ಮುಖಂಡರು ಸಹ ಆರ್ಥಿಕ ಸಹಾಯ ಮಾಡಿದ್ದರು. ಜು.26ರಂದು ದುಷ್ಕರ್ಮಿಗಳಿಂದ ಹತ್ಯೆಗೆ ಒಳಗಾದ ಪ್ರವೀಣ್ ನೆಟ್ಟಾರು ಪ್ರಕರಣವನ್ನು ರಾಜ್ಯ ಸರ್ಕಾರ ಎನ್‌ಐಎಗೆ ಶಿಫಾರಸು ಮಾಡಿತ್ತು. ಬಳಿಕ ಎನ್‌ಐಎ ಅಧಿಕಾರಿ ದ.ಕ. ಜಿಲ್ಲೆಗೆ ಆಗಮಿಸಿ ಪ್ರಾಥಮಿಕ ತನಿಖೆ ನಡೆಸಿದ್ದರು. ಈ ಹತ್ಯೆಗೆ ಸಂಬಂಧಿಸಿ ಈಗಾಗಲೇ 10ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದ್ದು, ಬೆಂಗಳೂರು ಜೈಲಿಗೆ ಸ್ಥಳಾಂತರಿಸಲಾಗಿದೆ.
Praveen Nettaru Murder Case: ದ.ಕ.ದಲ್ಲಿ 32ಕ್ಕೂ ಹೆಚ್ಚು ಕಡೆ NIA ದಾಳಿ!
ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ನೀಡಿದ ಭರವಸೆ ಈಡೇರಿಸದಿದ್ದರೆ ಧರಣೆ ಎಂದಿದ್ದ ಮುತಾಲಿಕ್: ದುಷ್ಕರ್ಮಿಗಳಿಂದ ಹತ್ಯೆಯಾಗಿರುವ ಹಿಂದೂ ಮುಖಂಡ ಪ್ರವೀಣ್ ನೆಟ್ಟಾರು ಅವರ ಮನೆಯವರಿಗೆ ಸರ್ಕಾರದ ವತಿಯಿಂದ ನೀಡಲಾದ ಭರವಸೆಯನ್ನು ಮುಖ್ಯಮಂತ್ರಿಗಳು ಈಡೇರಿಸಬೇಕು ಎಂದು ಶ್ರೀರಾಮ ಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ ಕಳೆದ ವಾರ ಒತ್ತಾಯಿಸಿದ್ದರು. ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿ ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ಮುತಾಲಿಕ್ , ಸಿಎಂ ತಮ್ಮ ಕಚೇರಿಯಲ್ಲಿ ಪ್ರವೀಣ್ ಪತ್ನಿಗೆ ಕೆಲಸ ಕೊಡುವುದಾಗಿ ತಿಳಿಸಿದ್ದಾರೆ. ಅದನ್ನು ಕೂಡಲೇ ನೆರವೇರಿಸಬೇಕು.
ಈ ಹಿಂದೆಯೂ ಇದೇ ರೀತಿಯ ಆಶ್ವಾಸನೆ ನೀಡಿ ಈಡೇರಿಸಿಲ್ಲ. ಅದು ಪರೇಶ್ ಮೇಸ್ತಾ, ಶರತ್ ಮಡಿವಾಳ ಅವರಿಗೆ ನೀಡಿದ ಘೋಷಣೆ ಕೂಡ ಈಡೇರಿಸಲಿಲ್ಲ. ಸರ್ಕಾರ ಮಾತು ತಪ್ಪಿದಲ್ಲಿ ಮುಖ್ಯಮಂತ್ರಿ ಮನೆ ಮುಂದೆ ಸಾವಿರಾರು ಜನ ಸೇರಿಸಿ ಧರಣಿ ಕುಳಿತುಕೊಳ್ಳಬೇಕಾದೀತು. ಕೃತ್ಯ ಎಸಗಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ಅವರಿಗೆ ಎಂದಿಗೂ ಜಾಮೀನು ದೊರೆಯದಂತೆ ನೋಡಿಕೊಳ್ಳಬೇಕು ಎಂದಿದ್ದರು.
Mangaluru: ಪ್ರವೀಣ್ ನೆಟ್ಟಾರು ಚಿಕನ್ ಸೆಂಟರ್ ಪುನಾರಂಭಿಸಿದ ಹಿಂದೂ ಕಾರ್ಯಕರ್ತ..!
ಪಿಎಫ್‌ಐ, ಎಸ್‌ಡಿಪಿಐ ನಿಷೇಧಿಸಿ: ಮತಾಂಧ ಸಂಘಟನೆಯಾದ ಪಿಎಫ್‌ಐ ಮತ್ತು ಎಸ್‌ಡಿಪಿಐಯನ್ನು ಸರ್ಕಾರ ನೀಷೇಧಿಸಬೇಕು ಎಂಬ ಆಗ್ರಹವನ್ನಿಟ್ಟುಕೊಂಡು ಮುಂದಿನ ತಿಂಗಳು ರಾಜ್ಯಾದ್ಯಂತ ದೊಡ್ಡ ಮಟ್ಟಿನ ಆಂದೋಲನ ನಡೆಸಲಾಗುತ್ತದೆ. ಈ ಸಂಘಟನೆಗಳನ್ನು ಬೆಳೆಸಿದ್ದು ಬಿಜೆಪಿಯೇ, ಕ್ಯಾನ್ಸರ್‌ನಂತೆ ಬೆಳೆಯುತ್ತಿರುವ ಇವುಗಳನ್ನು ನಿರ್ಮೂಲನೆ ಮಾಡದಿದ್ದರೆ ನಿಮ್ಮನ್ನೇ ನುಂಗುತ್ತವೆ ಎಂದು ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ಕೂಡ ಇದೇ ವೇಳೆ ನೀಡಿದ್ದರು.