ಬಿಟ್ಕಾಯಿನ್ ದಂಧೆ ತನಿಖೆ ಶುರು: ಎಸ್‌ಐಟಿ ರಚನೆ ಬೆನ್ನಲ್ಲೇ ಡಿಜಿಪಿ ಅಲೋಕ್ ಉನ್ನತ ಮಟ್ಟದ ಸಭೆ
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ‘ಬಿಟ್ ಕಾಯಿನ್ ಹಗರಣ’ದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಬೆನ್ನಲ್ಲೇ ಮುಂದಿನ ಹಂತದ ಕಾರ್ಯಾಚರಣೆ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ನೇತೃತ್ವದಲ್ಲಿ ಮಂಗಳವಾರ ಉನ್ನತ ಮಟ್ಟದ ಮಹತ್ವದ ಸಭೆ ನಡೆದಿದೆ.
ಬೆಂಗಳೂರು (ಜು.05): ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ‘ಬಿಟ್ ಕಾಯಿನ್ ಹಗರಣ’ದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಬೆನ್ನಲ್ಲೇ ಮುಂದಿನ ಹಂತದ ಕಾರ್ಯಾಚರಣೆ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ನೇತೃತ್ವದಲ್ಲಿ ಮಂಗಳವಾರ ಉನ್ನತ ಮಟ್ಟದ ಮಹತ್ವದ ಸಭೆ ನಡೆದಿದೆ.
ನಗರದ ನೃತುಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಇಲಾಖೆಯ ಕೇಂದ್ರ ಕಚೇರಿಯಲ್ಲಿ ಡಿಜಿಪಿ-ಐಜಿಪಿ ಅವರು, ಸಿಐಡಿ ಡಿಜಿಪಿ ಡಾ.ಎಂ.ಸಲೀಂ, ಎಸ್‌ಐಟಿ ಮುಖ್ಯಸ್ಥ ಮನೀಷ್ ಕರ್ಬೀಕರ್, ಡಿಐಜಿ ಕೃಷ್ಣ ವಂಶಿ, ಸದಸ್ಯರಾದ ಡಿಸಿಪಿ ಅನೂಪ್ ಶೆಟ್ಟಿಹಾಗೂ ಎಂ.ಡಿ.ಶರತ್ ಜತೆ ಸುದೀರ್ಘವಾಗಿ ಸಮಾಲೋಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ: ಸ್ವಪಕ್ಷದ ನಾಯಕರ ವಿರುದ್ದ ಮಾಜಿ ಸಚಿವ ರಾಜೂಗೌಡ ಗರಂ
ಬಿಟ್ ಕಾಯಿನ್ ಹಗರಣದ ಕುರಿತು ಇದುವರೆಗೆ ನಡೆದಿರುವ ತನಿಖೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದ್ದು, ಮುಂದಿನ ಹಂತದ ತನಿಖೆ ಹೇಗಿರಲಿದೆ. ಯಾವ ಮಾನದಂಡದಲ್ಲಿ ತನಿಖೆ ದಿಕ್ಕು ಸಾಗಬೇಕು. ಇಡೀ ಹಗರಣದ ಕೇಂದ್ರ ಬಿಂದು ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಪತ್ತೆ ಹೇಗೆ ಎಂಬುದರ ಕುರಿತು ಎಸ್‌ಐಟಿ ಅಧಿಕಾರಿಗಳ ಜತೆ ಚರ್ಚಿಸಿದ್ದಾರೆ. ಹಲವು ತಿಂಗಳುಗಳಿಂದ ತನ್ನ ಕುಟುಂಬದವರ ಸಂಪರ್ಕಕ್ಕೂ ಸಿಗದೆ ಶ್ರೀಕಿ ನಾಪತ್ತೆಯಾಗಿದ್ದಾನೆ. ಹೀಗಾಗಿ ಆತನ ಹುಡುಕಾಟಕ್ಕೆ ಡಿಜಿಪಿ ಸೂಚಿಸಿದ್ದಾರೆ ಎನ್ನಲಾಗಿದೆ.
ಕಡತಗಳ ವರ್ಗಾವಣೆಗೆ ಕೋರಿಕೆ: ಅಲ್ಲದೆ ಬಿಟ್ ಕಾಯಿನ್ ಹಗರಣದ ಸಂಬಂಧಿಸಿದ ಎಫ್‌ಐಆರ್ ಪ್ರತಿ, ಆರೋಪ ಪಟ್ಟಿಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು ಸೇರಿದಂತೆ ಸಿಸಿಬಿ ಬಳಿಯಿರುವ ದಾಖಲೆಗಳನ್ನು ಪಡೆಯಲು ನ್ಯಾಯಾಲಯಕ್ಕೆ ಎಸ್‌ಐಟಿ ಮನವಿ ಸಲ್ಲಿಸಲಿದೆ. ಇದಕ್ಕೂ ಮುನ್ನ ಮಂಗಳವಾರ ಔಪಚಾರಿಕವಾಗಿ ಸಿಸಿಬಿ ಜಂಟಿ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಅವರಿಂದ ಹಗರಣದ ಕುರಿತು ಮಾಹಿತಿಯನ್ನು ಎಸ್‌ಐಟಿ ಅಧಿಕಾರಿಗಳು ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ನನಗೂ ಸ್ಥಾನಮಾನ ಬೇಕು: ಅಧಿಕಾರದ ಆಸೆ ಬಹಿರಂಗಪಡಿಸಿದ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯ!
ತನಿಖಾಧಿಕಾರಿ ನೇಮಕ: ಈ ಪ್ರಕರಣದ ತನಿಖೆಗೆ ಸಿಐಡಿ ಡಿವೈಎಸ್ಪಿ ಶ್ರೀನಿವಾಸ್ ಅವರನ್ನು ತನಿಖಾಧಿಕಾರಿಯಾಗಿ ಎಸ್‌ಐಟಿ ಮುಖ್ಯಸ್ಥ ಹಾಗೂ ಎಡಿಜಿಪಿ ಮನೀಷ್ ಕರ್ಬೀಕರ್ ನೇಮಿಸಿದ್ದಾರೆ. ಈ ಪ್ರಕರಣದ ಕುರಿತು ಪ್ರಾಥಮಿಕ ಹಂತದ ಮಾಹಿತಿಯನ್ನು ಸೈಬರ್ ಹಾಗೂ ಸಿಸಿಬಿ ಅಧಿಕಾರಿಗಳಿಂದ ಶ್ರೀನಿವಾಸ್ ಪಡೆದಿದ್ದು, ಬುಧವಾರ ನ್ಯಾಯಾಲಯಕ್ಕೆ ಬಿಟ್ ಕಾಯಿನ್ ಹಗರಣದ ಮುಂದುವರೆದ ತನಿಖೆ ಬಗ್ಗೆ ತನಿಖಾಧಿಕಾರಿ ಮಾಹಿತಿ ನೀಡಲಿದ್ದಾರೆ ಎಂದು ಮೂಲಗಳು ಹೇಳಿವೆ.