ಬೆಂಗಳೂರು(ಜ.09): ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರು ಕಾಗೆಗಳು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ನೆರೆ ರಾಜ್ಯ ಕೇರಳದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಗಡಿಭಾಗದ ಐದು ಜಿಲ್ಲೆಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದಲ್ಲಿ ಈವರೆಗೆ ಹಕ್ಕಿ ಜ್ವರ ವರದಿಯಾಗಿಲ್ಲ. ಹೀಗಾಗಿ ಜನರು ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಶು ಸಂಗೋಪನಾ ಇಲಾಖೆ ಸಚಿವರು, ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ನಿರಂತರವಾಗಿ ಚರ್ಚಿಸುತ್ತಿದ್ದೇವೆ. ಅಧಿಕಾರಿಗಳು ಹಕ್ಕಿ ಜ್ವರ ಬಗ್ಗೆ ನಿಗಾ ವಹಿಸಿದ್ದು, ಆರು ಕಾಗೆಗಳ ಮಾದರಿಗಳನ್ನು ಪರೀಕ್ಷೆಗೆ ರವಾನಿಸಲಾಗಿದೆ. ವರದಿ ಆಧರಿಸಿ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮಾಂಸ ಚೆನ್ನಾಗಿ ಬೇಯಿಸಿ ತಿನ್ನಿ:

ಹಕ್ಕಿ ಜ್ವರದಿಂದಾಗಿ ಕೇರಳಕ್ಕೆ ಹೊಂದಿಕೊಂಡಿರುವ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಮೈಸೂರು, ಕೊಡಗು ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಈ ಭಾಗದಲ್ಲಿ ಮಾತ್ರವಲ್ಲದೆ ರಾಜ್ಯಾದ್ಯಂತ ಮಾಂಸಾಹಾರಿಗಳು ಮಾಂಸ ಸೇವನೆ ಮಾಡುವಾಗ ಚೆನ್ನಾಗಿ ಬೇಯಿಸಿ ಸ್ವೀಕರಿಸಬೇಕು. ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಹೆಚ್ಚುವರಿ ಮಾರ್ಗಸೂಚಿಯನ್ನು ಪ್ರಕಟಿಸಿದರೆ ಜನರ ಗಮನಕ್ಕೆ ತರುತ್ತೇವೆ ಎಂದರು.

ಕೊರೋನಾ ಹೋಗಿಲ್ಲ, ನಿರ್ಲಕ್ಷ್ಯ ಬೇಡ

ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಲೇ ರಾಜ್ಯದಲ್ಲಿ ಜನರು ಮಾಸ್ಕ್‌ ಹಾಕುವುದನ್ನೂ ಬಿಟ್ಟಿದ್ದಾರೆ. ವಿಶ್ವಾದ್ಯಂತ ಕೊರೋನಾ ಆತಂಕ ಸೃಷ್ಟಿಸುತ್ತಿದ್ದರೆ ನಮ್ಮ ಜನ ಮಾಸ್ಕ್‌ ಹಾಕಲು ಏಕೆ ನಿರ್ಲಕ್ಷ್ಯ ಮಾಡುತ್ತಾರೆ ಎಂದೇ ಅರ್ಥ ಆಗುತ್ತಿಲ್ಲ. ಪ್ರತಿಯೊಬ್ಬರಿಗೂ ಲಸಿಕೆ ನೀಡುವವರೆಗೂ ಮುನ್ನೆಚ್ಚರಿಕೆ ಅತ್ಯಗತ್ಯ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ. ಸುಧಾಕರ್‌ ಹೇಳಿದ್ದಾರೆ. ಕೋವಿಡ್‌ ಬಗ್ಗೆ ನಿರ್ಲಕ್ಷ್ಯ ಸಲ್ಲದು. ಬ್ರಿಟನ್‌ನಲ್ಲಿ ಬುಧವಾರ ಒಂದೇ ದಿನ 70 ಸಾವಿರ ಮಂದಿಗೆ ಸೋಂಕು ಬಂದಿದೆ. 1,100 ಜನ ಒಂದೇ ದಿನ ಮರಣವನ್ನಪ್ಪಿದ್ದಾರೆ. ಹೀಗಿರುವಾಗ ನಾವು ಸದಾ ಕಟ್ಟೆಚ್ಚರದಲ್ಲಿರಬೇಕು.

ಏರ್ ಶೋ: ಹೈಕೋರ್ಟ್‌ನಿಂದ ಸರ್ಕರಕ್ಕೆ ಮಹತ್ವದ ನಿರ್ದೇಶ

ರಾಜ್ಯದಲ್ಲಿ ಬ್ರಿಟನ್‌ ವೈರಸ್‌ ಹರಡುವ ಆತಂಕ ಕಡಿಮೆಯಾಗಿದೆ. ಆದರೂ ಮುನ್ನೆಚ್ಚರಿಕೆ ವಹಿಸುವುದು ಉತ್ತಮ. ಬ್ರಿಟನ್‌ನಿಂದ ಆಗಮಿಸಿದವರ ಪೈಕಿ ರಾಜ್ಯದಲ್ಲಿ ಒಟ್ಟು 117 ಮಂದಿ ಇನ್ನೂ ಪತ್ತೆಯಾಗಿಲ್ಲ. ಇವರೆಲ್ಲರ ಪಾಸ್‌ಪೋರ್ಟ್‌ನಲ್ಲಿ ವಿದೇಶದ ವಿಳಾಸ ಇರುವುದರಿಂದ ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ ಎಂದರು.