ಬೆಂಗಳೂರು(ಜ.08): ಫೆಬ್ರವರಿಯಲ್ಲಿ ನಗರದಲ್ಲಿ ನಡೆಯಲಿರುವ ಏರೋ ಇಂಡಿಯಾ ವೇಳೆ ಯಾವುದೇ ಅವಘಡ ಸಂಭವಿಸದಂತೆ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿದೆ.

ಯಲಹಂಕ ವಾಯು ನೆಲೆಯಲ್ಲಿ ಕಳೆದ 2019ರ ಫೆಬ್ರವರಿಯಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ಏರ್‌ ಶೋ ವೇಳೆ ಸಂಭವಿಸಿದ್ದ ಅಗ್ನಿ ಅನಾಹುತ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸುವಂತೆ ಕೋರಿ ನಿವೃತ್ತ ವಿಂಗ್‌ ಕಮಾಂಡರ್‌ ಜಿ.ವಿ ಅತ್ರಿ ಹಾಗೂ ವಕೀಲರಾದ ಗೀತಾ ಮಿಶ್ರಾ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ನಗರದ 8 ವಲಯಗಳ 8 ಕಡೆ ಡ್ರೈರನ್

ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಇದೇ ಫೆ.3ರಿಂದ 5ರವರೆಗೆ ನಡೆಯುವ ಏರೋ ಶೋ ವೇಳೆ ಹಿಂದಿನ ಬಾರಿ ಘಟನೆಯು ಈ ಬಾರಿ ಮರುಕಳಿಸದಂತೆ ವಾಯು ಪಡೆ, ರಾಜ್ಯ ಸರ್ಕಾರದ ಪ್ರಾಧಿಕಾರಗಳ ಸಹಕಾರದೊಂದಿಗೆ ಎಲ್ಲ ಅಗತ್ಯ ಕ್ರಮ ಜರುಗಿಸಬೇಕೆಂದು ನಿರ್ದೇಶಿಸಿತು.

ಅಲ್ಲದೆ, ಯಾವುದೇ ಅವಗಢ ಸಂಭವಿಸದಂತೆ ಯಾವೆಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ ವಾಯುಪಡೆಯ ಸಂಬಂಧಪಟ್ಟಅಧಿಕಾರಿ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಬೇಕು ಎಂದು ನಿರ್ದೇಶಿಸಿ ನ್ಯಾಯಪೀಠ ವಿಚಾರಣೆಯನ್ನು ಫೆ.17ಕ್ಕೆ ಮುಂದೂಡಿತು.