Asianet Suvarna News Asianet Suvarna News

ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾಗೆ ಬಿಗ್ ರಿಲೀಫ್

ಜನಾರ್ದನ ರೆಡ್ಡಿ ಪತ್ನಿಗೆ ಬಿಗ್ ರಿಲೀಫ್ ಸಿಕ್ಕಿದೆ. ಗಣಿ ಧಣಿ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಇದೀಗ ಪ್ರಕರಣ ಒಂದರಿಂದ ಮುಕ್ತಿ ಪಡೆದಿದ್ದಾರೆ. 

Big relief To Janardhan Reddy Wife Aruna in illegal Mining Case snr
Author
Bengaluru, First Published Feb 23, 2021, 9:14 AM IST

 ಬೆಂಗಳೂರು (ಫೆ.23):  ಮೆಸ​ರ್ಸ್ ಅಸೋಸಿಯೇಟೆಡ್‌ ಮೈನಿಂಗ್‌ ಕಂಪನಿ ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಪ್ರಕರಣದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮೀ ಅರುಣಾ ಅವರ ಹೆಸರು ಕೈಬಿಟ್ಟು ನಗರದ ಸಿಬಿಐ ವಿಶೇಷ ನ್ಯಾಯಾಲಯ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ಪುರಸ್ಕರಿಸಿದೆ.

ಸಿಬಿಐ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಮಾಜ ಪರಿವರ್ತನಾ ಸಮುದಾಯದ ಅಂಗ ಸಂಸ್ಥೆ ಆಶಾ ದೀಪ್‌ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಎಸ್‌.ಆರ್‌. ಹಿರೇಮಠ್‌ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೋಮಶೇಖರ್‌ ಅವರಿದ್ದ ಏಕ ಸದಸ್ಯ ನ್ಯಾಯಪೀಠ, ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದು ಅರ್ಜಿ ವಜಾಗೊಳಿಸಿದೆ.

ಕರ್ನಾಟಕ-ಆಂಧ್ರ ಗಡಿ ಸರ್ವೇ ಕಂಪ್ಲೀಟ್‌: ಮತ್ತೆ ಜೈಲಿಗೆ ಹೋಗ್ತಾರಾ ಜನಾರ್ದನ ರೆಡ್ಡಿ? ..

ಲಕ್ಷ್ಮೀ ಅರುಣಾ ಅವರು ಮೆಸ​ರ್ಸ್ ಅಸೋಸಿಯೇಟೆಡ್‌ ಮೈನಿಂಗ್‌ ಕಂಪನಿಯ ದಾಖಲೆಗೆ ಸಹಿ ಹಾಕಿದ್ದಾರೆ. ಪತಿ ಗಾಲಿ ಜನಾರ್ದನ ರೆಡ್ಡಿ ಹೇಳಿದ ದಾಖಲೆಗೆ ಸಹಿ ಹಾಕಿದ್ದಾರೆ. ಅದಕ್ಕಾಗಿ ಅಕ್ರಮ ಗಣಿಗಾರಿಕೆಯಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಹೇಳಲಾಗುವುದಿಲ್ಲ. ಹೀಗಾಗಿ, ಪ್ರಕರಣದಿಂದ ಲಕ್ಷ್ಮೀ ಅರುಣಾ ಹೆಸರು ಕೈಬಿಟ್ಟಸಿಬಿಐ ನ್ಯಾಯಾಲಯದ ಆದೇಶ ಸರಿಯಿದೆ ಎಂದು ಹೈಕೋರ್ಟ್‌ ಆದೇಶದಲ್ಲಿ ತಿಳಿಸಿದೆ.

ಅಸೋಸಿಯೇಟೆಡ್‌ ಮೈನಿಂಗ್‌ ಕಂಪನಿ ಬಳ್ಳಾರಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪ ಸಂಬಂಧ ತನಿಖೆ ನಡೆಸಿದ್ದ ಸಿಬಿಐ ತನಿಖಾಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ಜನಾರ್ದನ ರೆಡ್ಡಿ ಮೊದಲನೆ ಆರೋಪಿ ಹಾಗೂ ಅವರ ಪತ್ನಿ ಲಕ್ಷ್ಮೀ ಅರುಣಾ ಎರಡನೇ ಆರೋಪಿಯಾಗಿದ್ದರು. ಇದರಿಂದ ಲಕ್ಷ್ಮೀ ಅರುಣಾ ಅವರು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

Follow Us:
Download App:
  • android
  • ios