ಬೆಂಗಳೂರು[ನ.15]: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧನದಲ್ಲಿದ್ದ ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ಅವರಿಗೆ ಜಾಮೀನು ಮಂಜೂರು ಮಾಡಿದ್ದ ದೆಹಲಿ ಹೈಕೋರ್ಟ್‌ನ ಕ್ರಮವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ಇ.ಡಿ.)ವು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಹಗೊಳಿಸಿದೆ. ಈ ಮೂಲಕ ಡಿಕೆಶಿಗೆ ಕೊಂಚ ರಿಲೀಫ್ ಸಿಕ್ಕಿದೆ.

ನ್ಯಾ| ರೋಹಿಂಗ್ಟನ್ ನಾರಿಮನ್ ನೇತೃತ್ವದ ಸುಪ್ರೀಂ ನ್ಯಾಯಪೀಠವು ಇಡಿ ವಾದವನ್ನು ಪುರಸ್ಕರಿಸದೇ, ದೆಹಲಿ ಹೈಕೋರ್ಟ್ ತೀರ್ಪನ್ನೇ ಎತ್ತಿಹಿಡಿದಿದೆ. ಇದೇ ವೇಳೆ ಕೇಂದ್ರ ಸರ್ಕಾರಕ್ಕೂ ನ್ಯಾಯಪೀಠ ಚಾಟಿ ಬೀಸಿದೆ. ಚಿದಂಬರಂ ಪ್ರಕರಣವನ್ನು ಉಲ್ಲೇಖಿಸಿ ಡಿಕೆಶಿ ಬಂಧನಕ್ಕೆ ಅವಕಾಶ ಕೊಡಬೇಕೆಂದು ಮನವಿ ಮಾಡಿಕೊಂಡ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮೇಲೆ ನ್ಯಾ| ನಾರಿಮನ್ ಕೋಪಗೊಂಡರು. ಸುಪ್ರೀಂಕೋರ್ಟ್​ಗೆ ನಿರ್ದೇಶನ ನೀಡಲು ಬರಬೇಡಿ. ಚಿದಂಬರಂ ಪ್ರಕರಣವನ್ನೂ ಡಿಕೆಶಿ ಪ್ರಕರಣವನ್ನೂ ತಾಳೆ ಮಾಡಬೇಡಿ ಎಂದು ಕೇಂದ್ರ ಸರ್ಕಾರದ ಪರ ವಕೀಲರಿಗೆ ಬುದ್ಧಿ ಹೇಳಿದರು.

ನ್ಯಾ| ರೋಹಿಂಟನ್‌ ನಾರಿಮನ್‌ ಮತ್ತು ನ್ಯಾ| ಎಸ್‌. ರವೀಂದ್ರ ಭಟ್‌ ಅವರಿರುವ ದ್ವಿಸದಸ್ಯ ನ್ಯಾಯಪೀಠ ಅರ್ಜಿ ವಿಚಾರಣೆಗೆ ಬಂದಿದ್ದು, ಇದಕ್ಕೆ ಡಿ.ಕೆ. ಶಿವಕುಮಾರ್‌ ಕೇವಿಯಟ್‌ ಕೂಡ ಸಲ್ಲಿಸಿದ್ದರು. ಡಿ.ಕೆ. ಶಿವಕುಮಾರ್‌ ಅವರಿಗೆ ಅರ್ಹತೆ ಮತ್ತು ವೈದ್ಯಕೀಯ ಕಾರಣ ನೀಡಿ ದೆಹಲಿ ಹೈಕೋರ್ಟ್‌ ಅ.23 ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಈ ಮೂಲಕ ಸೆ.3ರಿಂದ ಬಂಧನದಲ್ಲಿದ್ದ ಡಿ.ಕೆ. ಶಿವಕುಮಾರ್‌ ಬಂಧನ ಮುಕ್ತರಾಗಿದ್ದರು.

ದೇಶಬಿಟ್ಟು ಪರಾರಿಯಾಗುವ ಭಯವಿಲ್ಲ, ಸಾಕ್ಷಿಯನ್ನು ಬೆದರಿಸಲು ಸಾಧ್ಯವಿಲ್ಲ ಮತ್ತು ಸಾಕ್ಷ್ಯ ತಿರುಚಿಲ್ಲ ಎಂಬ ಕಾರಣಗಳನ್ನು ಒಡ್ಡಿ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿತ್ತು. ಆದರೆ ಅಕ್ರಮ ಹಣ ವರ್ಗಾವಣೆ ಕಾಯ್ದೆಯಲ್ಲಿ ಜಾಮೀನು ನೀಡುವ ಮುಂಚಿತವಾಗಿ ‘ಅವಳಿ ಷರತ್ತು’ಗಳಿದ್ದು ಅದನ್ನು ನ್ಯಾಯಾಲಯ ಗಮನಿಸಿಲ್ಲ ಎಂದು ಇ.ಡಿ. ತನ್ನ ಮೇಲ್ಮನವಿಯಲ್ಲಿ ಹೇಳಿತ್ತು.

ಡಿ.ಕೆ.ಶಿವಕುಮಾರ್‌ ಅವರಿಗೆ ಹೊಸದಾಗಿ ಯಾವುದೇ ವೈದ್ಯಕೀಯ ಸಮಸ್ಯೆಗಳು ಇರಲಿಲ್ಲ. ಸೆ.15 ರಿಂದ ಸೆ.18ರವರೆಗೆ ಇದ್ದ ಅವರ ವೈದ್ಯಕೀಯ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾದ ಬಳಿಕಷ್ಟೇ ಅವರನ್ನು ತಿಹಾರ್‌ ಜೈಲಿಗೆ ಕರೆದೊಯ್ಯಲಾಗಿತ್ತು ಎಂದು ಇ.ಡಿ. ತನ್ನ ಅರ್ಜಿಯಲ್ಲಿ ಹೇಳಿತ್ತು.

ಡಿ.ಕೆ.ಶಿವಕುಮಾರ್‌ ಅವರ ಮೇಲಿರುವ ಆರೋಪದ ಅಗಾಧತೆಯನ್ನು ನ್ಯಾಯಾಲಯ ಗಮನಿಸದೆ ಜಾಮೀನು ಮಂಜೂರು ಮಾಡಿದೆ. ಹಾಗೆಯೇ ಸಾಕ್ಷ್ಯಗಳ ಮೇಲೆ ಡಿ.ಕೆ.ಶಿವಕುಮಾರ್‌ ಪ್ರಭಾವ ಬೀರಿರುವುದಕ್ಕೆ ನೀಡಿರುವ ಪುರಾವೆಯನ್ನು ಹೈ ಕೋರ್ಟ್‌ ಗಮನಿಸಿಲ್ಲ ಎಂದು ಅರ್ಜಿಯಲ್ಲಿ ವಿವರಿಸಿತ್ತು.

ಡಿಕೆಶಿಗೆ ಜಾಮೀನು ನೀಡಿದ್ದ ದಿಲ್ಲಿ ಹೈಕೋರ್ಟ್ ನೀಡಿದ್ದ ಜಾಮೀನು ಪ್ರಶ್ನಿಸಿ ಇ.ಡಿ. ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.

ನವೆಂಬರ್ 15ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: