ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ಟೈನ್ ಸಿನಿಮಾಗಳ ಪ್ರದರ್ಶನವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಪ್ರಕಾಶ್ ರಾಜ್ ಹೇಳಿಕೆಯನ್ನು ಬೆಂಬಲಿಸಿದ ಅವರು, ಮಾಜಿ ಪ್ರಧಾನಿ ವಾಜಪೇಯಿ ಅವರ ನಿಲುವನ್ನು ಸ್ಮರಿಸಿದರು.
ವಿಧಾನಸೌಧ (ಜ.30): ಸಿನಿಮಾಗಳ ಸ್ಕ್ರೀನಿಂಗ್ ಆಗಬೇಕು ಎಂಬುದನ್ನು ನಾವು ಒಪ್ಪಬೇಕಾಗುತ್ತದೆ. ಪ್ಯಾಲೆಸ್ಟೈನ್ ಸಿನಿಮಾ ಪ್ರದರ್ಶನದಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ಬದಲಾಗಿ ಅಲ್ಲಿನ ಜನರ ಕಷ್ಟಗಳು ಮತ್ತು ಜೀವನದ ಸ್ಥಿತಿಗತಿಗಳು ಜಗತ್ತಿಗೆ ತಿಳಿಯುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅಭಿಪ್ರಾಯಪಟ್ಟರು.
ಬೆಂಗಳೂರಿನ ವಿಧಾನಸೌಧದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, 17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ಟೈನ್ ಸಿನಿಮಾಗಳ ಪ್ರದರ್ಶನ ವಿಚಾರವಾಗಿ ಪ್ರಕಾಶ್ ರಾಜ್ ಹೇಳಿಕೆ ಬೆಂಬಲಿಸಿದರು.
ವಾಜಪೇಯಿ ಅವರ ಮಾತು ಸ್ಮರಿಸಿದ ಲಾಡ್
ಇದೇ ವೇಳೆ ಈ ಹಿಂದೆ ಸದನದಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ಯಾಲೆಸ್ಟೈನ್ ಪರವಾಗಿ ಮಾತನಾಡಿದ್ದನ್ನು ಸಚಿವ ಸಂತೋಷ್ ಲಾಡ್ ನೆನಪಿಸಿದರು. 'ಅಂದು ವಾಜಪೇಯಿ ಸಾಹೇಬರೇ ಪ್ಯಾಲೆಸ್ಟೈನ್ ಪರ ನಿಲುವು ವ್ಯಕ್ತಪಡಿಸಿದ್ದರು. ಹೀಗಿರುವಾಗ ಚಿತ್ರಗಳ ಪ್ರದರ್ಶನಕ್ಕೆ ತಡೆಯೊಡ್ಡುವುದು ಸರಿಯಲ್ಲ' ಎಂದರು.
ಪ್ರಕಾಶ್ ರಾಜ್ ಹೇಳಿಕೆ ಸಮರ್ಥನೆ
ಪ್ಯಾಲೆಸ್ಟೈನ್ ಸಿನಿಮಾಗಳ ನಿರ್ಬಂಧದ ವಿರುದ್ಧ ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ವ್ಯಕ್ತಪಡಿಸಿದ ಆಕ್ರೋಶಕ್ಕೆ ಸಚಿವರು ಬೆಂಬಲ ಸೂಚಿಸಿದರು. 'ಪ್ರಕಾಶ್ ರಾಜ್ ಅವರು ಹೇಳಿರುವುದು ಸರಿಯಿದೆ. ಸಾಹಿತ್ಯ ಮತ್ತು ಸಿನಿಮಾ ಕಾರ್ಯಕ್ರಮಗಳಲ್ಲಿ ರಾಜಕೀಯ ಹಸ್ತಕ್ಷೇಪ ಇರಬಾರದು. ಮಾನವೀಯ ಸಂಬಂಧಗಳ ದೃಷ್ಟಿಯಿಂದ ಇಂತಹ ಸಿನಿಮಾಗಳ ಪ್ರದರ್ಶನ ಅಗತ್ಯ' ಎಂದು ಲಾಡ್ ಹೇಳಿದರು.
ನಮ್ಮ ಇಲಾಖೆಯಲ್ಲಿ ಯಾವುದೇ ಬಿಲ್ ಬಾಕಿ ಇಲ್ಲ
ಇನ್ನು ಗುತ್ತಿಗೆದಾರರ ಬಾಕಿ ಬಿಲ್ ಆರೋಪದ ಕುರಿತು ಸ್ಪಷ್ಟನೆ ನೀಡಿದ ಸಚಿವರು, ನಮ್ಮ ಇಲಾಖೆಯಿಂದ ಯಾವುದೇ ಬಿಲ್ ಬಾಕಿ ಉಳಿಸಿಕೊಂಡಿಲ್ಲ. ಪೆಂಡಿಂಗ್ ಎನ್ನುವಂತಹದ್ದು ಏನೂ ಇಲ್ಲ. ಆದರೂ ಗುತ್ತಿಗೆದಾರರು ಆರೋಪ ಮಾಡುತ್ತಿರುವುದರಿಂದ ನಾನು ಮತ್ತೊಮ್ಮೆ ಇಲಾಖೆಯ ಕಡತಗಳನ್ನು ಪರಿಶೀಲಿಸುತ್ತೇನೆ' ಎಂದು ಅವರು ತಿಳಿಸಿದರು.


