Asianet Suvarna News Asianet Suvarna News

ಬೆಂಗಳೂರಿನ ಬೃಹತ್‌ ಕೊರೋನಾ ಆರೈಕೆ ಕೇಂದ್ರ ಬಂದ್‌: ಕಾರಣ..?

ಬಿಐಇಸಿ ಕೊರೋನಾ ಆರೈಕೆ ಕೇಂದ್ರ ಮುಚ್ಚಲು ಆದೇಶ|ಸೋಂಕಿತರ ದಾಖಲಾತಿ ಇಳಿಕೆ ಹಿನ್ನೆಲೆ|ಬಿಬಿಎಂಪಿ ಆದೇಶ| ಹಾಸಿಗೆ, ದಿಂಬುಗಳನ್ನು ವಸತಿಗೃಹ, ಆಸ್ಪತ್ರೆಗೆ ನೀಡಲು ಸೂಚನೆ| 

BIEC Center Will Be Close on Sep 15th
Author
Bengaluru, First Published Sep 6, 2020, 8:46 AM IST | Last Updated Sep 6, 2020, 8:46 AM IST

ಬೆಂಗಳೂರು(ಸೆ.06): ತುಮಕೂರು ರಸ್ತೆಯ ಮಾದಾವರ ಬಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಕೋವಿಡ್‌ ರೋಗಿಗಳ ಆರೈಕೆಗೆ ನಿರ್ಮಿಸಲಾಗಿದ್ದ 6000 ಹಾಸಿಗೆಗಳ ಕೋವಿಡ್‌ ನಿಗಾ ಕೇಂದ್ರವನ್ನು ಮುಚ್ಚಲು ಬಿಬಿಎಂಪಿ ಶನಿವಾರ ಆದೇಶ ಹೊರಡಿಸಿದೆ.

ಈ ಕೇಂದ್ರಕ್ಕೆ ಬಿಬಿಎಂಪಿಯಿಂದ ಖರೀದಿಸಲಾಗಿದ್ದ ಹಾಸಿಗೆಗಳು, ಮ್ಯಾಟ್ರೆಸ್‌ಗಳು ಸೇರಿದಂತೆ ಎಲ್ಲ ರೀತಿಯ ಪೀಠೋಪಕರಣಗಳನ್ನು ಸರ್ಕಾರಿ ಸ್ವಾಮ್ಯದ ವಸತಿ ಗೃಹಗಳು, ಆಸ್ಪತ್ರೆಗಳಿಗೆ ವರ್ಗಾಯಿಸಲು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಆದೇಶ ಮಾಡಿದ್ದಾರೆ.

ಲಕ್ಷಣಗಳಿಲ್ಲದ ಹಾಗೂ ಸೌಮ್ಯ ಲಕ್ಷಣಗಳುಳ್ಳ ಕೋವಿಡ್‌ ಸೋಂಕಿತರ ಆರೈಕೆಗಾಗಿ ನಿರ್ಮಿಸಲಾಗಿದ್ದ ಈ ನಿಗಾ ಕೇಂದ್ರಕ್ಕೆ ಇತ್ತೀಚಿನ ದಿನಗಳಲ್ಲಿ ಯಾವುದೇ ಸೋಂಕಿತರು ದಾಖಲಾಗದೆ ಇರುವ ಹಿನ್ನೆಲೆಯಲ್ಲಿ ತೋಟಗಾರಿಕಾ ಇಲಾಖೆ ನಿರ್ದೇಶಕರು ಹಾಗೂ ಟಾಸ್ಕ್‌ ತಂಡದ ಮುಖ್ಯಸ್ಥರು ಈ ಕೇಂದ್ರವನ್ನು ಮುಚ್ಚಲು ಸಲಹೆ ನೀಡಿದ್ದರು. ಅದರಂತೆ, ಆಗಸ್ಟ್‌ 31ರಂದು ಮುಖ್ಯಮಂತ್ರಿ ಅವರೊಂದಿಗೆ ನಡೆದ ಸಭೆಯಲ್ಲಿ ತೀರ್ಮಾನಿಸಿರುವಂತೆ ಈ ಕೋವಿಡ್‌ ನಿಗಾ ಕೇಂದ್ರಕ್ಕೆ ಬಿಬಿಎಂಪಿಯಿಂದ ಖರೀದಿಸಲಾಗಿದ್ದ ಸ್ಟ್ರೀಲ್‌ ಹಾಸಿಗೆಗಳು, ಮ್ಯಾಟ್ರೆಸ್‌ಗಳು, ಪೆಸಸ್ಟ್ರಲ್‌ ಫ್ಯಾನ್‌ಗಳು, ಕಸ ಸಂಗ್ರಹ ಬುಟ್ಟಿಗಳು, ಬಕೆಟ್‌, ಮಗ್ಗು ಹಾಗೂ ವಾಟರ್‌ ಡಿಸ್ಪೆನ್ಸರ್‌ಗಳು ಇತ್ಯಾದಿ ಪೀಠೋಪಕರಣಗಳನ್ನು ಸರ್ಕಾರಿ ಸ್ವಾಮ್ಯದ ವಸತಿ ಗೃಹಗಳು, ಆಸ್ಪತ್ರೆಗಳಿಗೆ ಉಚಿತವಾಗಿ ನೀಡುವಂತೆ ಆಯುಕ್ತ ಪಾಲಿಕೆ ಅಧಿಕಾರಿಗಳಿಗೆ ಆದೇಶ ಮಾಡಿದ್ದಾರೆ.

ದೇಶದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್‌ನಲ್ಲಿ ಇದೆಂತಾ ದುರ್ಗತಿ!

ತೋಟಗಾರಿಕೆ ವಿದ್ಯಾಲಯ ಬಾಗಲಕೋಟೆಯ ಹಾಸ್ಟೆಲ್‌, ಅಲ್ಪಸಂಖ್ಯಾತ ಇಲಾಖೆಯ ಹಾಸ್ಟೆಲ್‌ಗಳು ಹಾಗೂ ಬೆಂಗಳೂರಿನ ಜಿಕೆವಿಕೆ ಹಾಸ್ಟೆಲ್‌ಗೆ ತಲಾ 1000 ಪೀಠೋಪಕರಣ, ಸಮಾಜ ಕಲ್ಯಾಣ ಇಲಾಖೆ ಮತ್ತು ಬುಡಕಟ್ಟು ಕಲ್ಯಾಣ ಹಾಸ್ಟೆಲ್‌ಗಳಿಗೆ 2500 ಪೀಠೋಪಕರಣಗಳನ್ನು ಹಸ್ತಾಂತರಿಸಬೇಕು. ಉಳಿದವುಗಳನ್ನು ಇತರೆ ಸರ್ಕಾರಿ ಆಸ್ಪತ್ರೆ ಮತ್ತು ಹಾಸ್ಟೆಲ್‌ಗಳಿಂದ ಬರುವ ಕೋರಿಕೆಯಂತೆ ಹಸ್ತಾಂತರಿಸಲು ಆದೇಶಿಸಲಾಗಿದೆ.

ಬಿಐಇಸಿ ನಿಗಾ ಕೇಂದ್ರದ ನೋಡೆಲ್‌ ಅಧಿಕಾರಿಗಳು ಈ ಕೇಂದ್ರವನ್ನು ಮುಚ್ಚಲು ಕನಿಷ್ಠ ಒಂದು ವಾರಗಳ ಸಮಯಾವಕಾಶ ಕೋರಿದ್ದು ಅದರಂತೆ ಸೆಪ್ಟೆಂಬರ್‌ 15ರಿಂದ ಕೇಂದ್ರವನ್ನು ಸಂಪೂರ್ಣವಾಗಿ ಮುಚ್ಚುವಂತೆ ಅಗತ್ಯ ಕ್ರಮ ಕೈಗೊಳ್ಳಲು ಆದೇಶದಲ್ಲಿ ಸೂಚಿಸಲಾಗಿದೆ.
 

Latest Videos
Follow Us:
Download App:
  • android
  • ios