ಕಲಬುರಗಿ ಹೈಕೋರ್ಟ್‌ನಿಂದ ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ಸಿಕ್ಕ ಬೆನ್ನಲ್ಲೇ, ಇದೇ ದಿನದಂದು ತಮಗೂ ಪಥಸಂಚಲನಕ್ಕೆ ಅವಕಾಶ ನೀಡಬೇಕೆಂದು ಭೀಮ್ ಆರ್ಮಿ ಸಂಘಟನೆ ಪಟ್ಟು ಹಿಡಿದಿದೆ. ಅನುಮತಿ ಸಿಗದಿದ್ದರೂ ಸಾವಿರಾರು ಜನರೊಂದಿಗೆ ಮೆರವಣಿಗೆ ನಡೆಸುವುದಾಗಿ  ಘೋಷಿಸಿದೆ.

ಕಲಬುರಗಿ, (ನ.13) ಚಿತ್ತಾಪೂರದಲ್ಲಿ ನ.16ರಂದು ನಡೆಯುವ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಕಲಬುರಗಿ ಹೈಕೋರ್ಟ್ ಷರತ್ತುಬದ್ಧ ಅನುಮತಿ ನೀಡಿರುವ ಬೆನ್ನಲ್ಲೇ ಇದೀಗ ಭೀಮ್ ಆರ್ಮಿ ಸಂಘಟನೆಯ ಯುವ ಘಟಕವು ಅದೇ ದಿನ ಪಥ ಸಂಚಲನ ಮಾಡಲು ಮುಂದಾಗಿದೆ.

ಕಲಬುರಗಿ ಜಿಲ್ಲಾಡಳಿತದಿಂದ ಇಲ್ಲಿವರಗೂ ಅನುಮತಿ ದೊರೆತಿಲ್ಲದಿದ್ದರೂ, ಸಾವಿರಾರು ಸದಸ್ಯರೊಂದಿಗೆ ನಾವು ಪಥಸಂಚಲನ ಮಾಡುತ್ತೇವೆ ಎಂದು ಭೀಮ್ ಆರ್ಮಿ ಯುವ ಘಟಕದ ರಾಜ್ಯಾಧ್ಯಕ್ಷ ಸಂತೋಷ್ ಪಾಳಾ ಹೇಳಿಕೆ ನೀಡಿದ್ದಾರೆ.

ಆರೆಸ್ಸೆಸ್‌ಗೆ ಅವಕಾಶ ಕೊಟ್ಟರೆ ನಮಗೂ ಕೊಡಿ:

ಸಂತೋಷ್ ಪಾಳಾ ಅವರು ಇಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ನವೆಂಬರ್ 2ರಂದು ನಾವು ಚಿತ್ತಾಪೂರದಲ್ಲಿ ಪಥಸಂಚಲನಕ್ಕೆ ಅವಕಾಶ ಕೊಡಿ ಎಂದು ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ್ದೆವು. ಅವರು ಹಲವು ಪ್ರಶ್ನೆಗಳನ್ನು ಕೇಳಿ, ಹಿಂಬರಹ ಕೊಟ್ಟಿದ್ದರು. ನಾವು ಎಲ್ಲ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿದ್ದರೂ, ಇದುವರೆಗೂ ಅನುಮತಿ ನೀಡಿಲ್ಲ. ನಿರಾಕರಣೆಯೂ ಮಾಡಿಲ್ಲ. ಹಾಗಾಗಿ ನಾಳೆ (ನ.14) ಡಿಸಿಯವರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸುತ್ತೇವೆ. ನ.16ರಂದು ಚಿತ್ತಾಪೂರದಲ್ಲಿ ನಮಗೂ ಅವಕಾಶ ಕೊಡಿ ಎಂದು ಮನವಿ ಮಾಡುತ್ತೇವೆ ಎಂದು ತಿಳಿಸಿದರು.

ನಾವು ಹೈಕೋರ್ಟ್‌ನ ಆದೇಶವನ್ನು ಗೌರವಿಸುತ್ತೇವೆ:

ನ್ಯಾಯಾಲಯ ಅವರಿಗೆ(ಆರೆಸ್ಸೆಸ್)ಗೆ ಪಥಸಂಚಲನಕ್ಕೆ ಅನುಮತಿ ಕೊಟ್ಟಿರೋದನ್ನ ನಾವು ಗೌರವಿಸುತ್ತೇವೆ. ಆದರೆ ನಮಗೂ ಅದೇ ದಿನ ಅವಕಾಶ ಕೊಡಬೇಕಿತ್ತು ಎಂದು ಭೀಮ್ ಅರ್ಮಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಒಂದು ವೇಳೆ ಜಿಲ್ಲಾಡಳಿತ ಅನುಮತಿ ಕೊಡದಿದ್ದರೂ ನಾವು ನ.16ರಂದು ಸಾವಿರಾರು ಸಂಖ್ಯೆಯಲ್ಲಿ ಚಿತ್ತಾಪೂರದಲ್ಲಿ ಸೇರುತ್ತೇವೆ ಎಂದು ಘೋಷಿಸಿದರು. ಈ ಸಂದರ್ಭದಲ್ಲಿ ನಾಳೆ (ನ.14) ಸಂಘಟನೆಯ ಕಾರ್ಯಕರ್ತರು ಕಲಬುರಗಿ ಐವಾನ್ ಶಾಹಿ ಮೊದಲು ಸಭೆ ಸೇರುತ್ತಿದ್ದಾರೆ ಎಂದು ತಿಳಿಸಲಾಗಿದೆ.

RSS-ಭೀಮ್ ಆರ್ಮಿ ನಡುವಿನ ಸಂಘರ್ಷ ಹಿನ್ನೆಲೆ:

ಚಿತ್ತಾಪೂರದಲ್ಲಿ ನ.16ರಂದು ನಡೆಯುವ ಆರ್‌ಎಸ್‌ಎಸ್ ಪಥಸಂಚಲನ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಆರ್‌ಎಸ್‌ಎಸ್ ನಡುವೆ ನಡೆಯುತ್ತಿದ್ದ ಹಗ್ಗಜಗ್ಗಾಟಕ್ಕೆ ಕಲಬುರಗಿ ಹೈಕೋರ್ಟ್ ಪೀಠ ತೆರೆ ಎಳೆದಿದೆ. ನ್ಯಾಯಾಲಯವು ಷರತ್ತುಬದ್ಧ ಅನುಮತಿ ನೀಡಿರುವುದರಿಂದ RSS ಮಾರ್ಚ್ ಖಚಿತವಾಗಿದೆ. ಆದರೆ ಇದೇ ಸಂದರ್ಭದಲ್ಲಿ ಭೀಮ್ ಆರ್ಮಿ ಸಂಘಟನೆಯು ಪಥಸಂಚಲನ ನಡೆಸುವುದಾಗಿ ಘೋಷಿಸುವುದು ರಾಜಕೀಯ ವಲಯಗಳಲ್ಲಿ ಚರ್ಚೆಗೆ ಗುರಿಯಾಗಿದೆ.