‘ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ವಿಐಎಸ್‌ಎಲ್‌) ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಕಾರ್ಖಾನೆಯನ್ನು ಉಳಿಸಿಕೊಳ್ಳಲು ಕೇಂದ್ರಕ್ಕೆ ಪತ್ರ ಬರೆದಿದ್ದು, ಮತ್ತೊಮ್ಮೆ ಕೇಂದ್ರ ಸಚಿವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. 

ವಿಧಾನಸಭೆ (ಫೆ.17): ‘ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ (ವಿಐಎಸ್‌ಎಲ್‌) ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಕಾರ್ಖಾನೆಯನ್ನು ಉಳಿಸಿಕೊಳ್ಳಲು ಕೇಂದ್ರಕ್ಕೆ ಪತ್ರ ಬರೆದಿದ್ದು, ಮತ್ತೊಮ್ಮೆ ಕೇಂದ್ರ ಸಚಿವರೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ ಸದಸ್ಯ ಬಿ.ಕೆ. ಸಂಗಮೇಶ್‌, ಭದ್ರಾವತಿ ಉಕ್ಕಿನ ಕಾರ್ಖಾನೆ ಮುಚ್ಚದಂತೆ ಸದನದಲ್ಲಿ ನಿರ್ಣಯ ಮಂಡಿಸಿ ಕೇಂದ್ರಕ್ಕೆ ಕಳುಹಿಸಬೇಕು ಎಂದು ಒತ್ತಾಯಿಸಿದರು. 

ಇದಕ್ಕೆ ಬಿಜೆಪಿಯ ಬಿ.ಎಸ್‌. ಯಡಿಯೂರಪ್ಪ ಅವರೂ ದನಿಗೂಡಿಸಿದರು. ಈ ವೇಳೆ ಮಾತನಾಡಿದ ಬಸವರಾಜ ಬೊಮ್ಮಾಯಿ, ವಿಐಎಸ್‌ಎಲ್‌ ದಕ್ಷಿಣ ಭಾರತದ ಮೊದಲ ಉಕ್ಕು ಕಾರ್ಖಾನೆ. ಅಲ್ಲಿ ಉತ್ಪಾದನೆ ಆಗುವ ಉಕ್ಕಿನ ಗುಣಮಟ್ಟಖ್ಯಾತಿ ಪಡೆದಿತ್ತು. ಕುದುರೆಮುಖದಿಂದ ದೊರೆಯುತ್ತಿದ್ದ ಅದಿರಿನಿಂದಾಗಿ ಉತ್ಕೃಷ್ಟಉಕ್ಕು ತಯಾರಾಗುತ್ತಿತ್ತು. ಆದರೆ ಕುದುರೆಮುಖದಿಂದ ಅದಿರು ಸ್ಥಗಿತಗೊಂಡ ಬಳಿಕ ಉಕ್ಕು ಕಾರ್ಖಾನೆ ಉತ್ಪಾದನೆ ಕುಸಿಯಿತು. ಇದರಿಂದ ಕೇಂದ್ರದ ಸೇಲ್‌ (ಎಸ್‌ಎಐಎಲ್‌) ಇದನ್ನು ಖಾಸಗೀಕರಣ ಮಾಡಲು ಮುಂದಾಗಿತ್ತು. 

ನಾವೆಂದೂ ಮತಗಳಿಗಾಗಿ ಆಮಿ​ಷ​ವೊಡ್ಡಲ್ಲ: ಶಾಸಕಿ ಅನಿತಾ ಕುಮಾ​ರ​ಸ್ವಾಮಿ

ವಹಿಸಿಕೊಳ್ಳಲು ಯಾವ ಕಂಪನಿಯೂ ಮುಂದೆ ಬಾರದಿದ್ದಕ್ಕೆ ಮುಚ್ಚುವ ತೀರ್ಮಾನವನ್ನು ಇತ್ತೀಚೆಗೆ ಆಡಳಿತ ಮಂಡಳಿಯಲ್ಲಿ ತೆಗೆದುಕೊಳ್ಳಲಾಗಿತ್ತು. ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದು ಯಾವುದೇ ಕಾರಣಕ್ಕೂ ಕಾರ್ಖಾನೆ ಮುಚ್ಚದಂತೆ ತಿಳಿಸಿದ್ದೇವೆ. ಸದ್ಯದಲ್ಲೇ ಕೇಂದ್ರ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು. ಕಾರ್ಖಾನೆಯನ್ನು ಮುಂದುವರೆಸುವ ಮೂಲಕ ನೌಕರರು, ರಾಜ್ಯ ಸರ್ಕಾರದ ಹಿತ ಕಾಯುವ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಹೊರಗುತ್ತಿಗೆ ಸಂಸ್ಥೆಗಳಲ್ಲೂ ನೌಕರರಿಗೆ ಮೀಸಲು: ಹೊರಗುತ್ತಿಗೆ ನೌಕರರನ್ನು ಒದಗಿಸುವ ಸಂಸ್ಥೆಗಳಲ್ಲಿ ಮೀಸಲಾತಿ ಪಾಲನೆಗೆ ಸೂಚನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಬಿಜೆಪಿಯ ಛಲವಾದಿ ಟಿ. ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕಾಯಂ ನೇಮಕಾತಿಗಳಲ್ಲಿ ಮೀಸಲಾತಿಯನ್ನು ಜಾರಿಗೆ ತರಲಾಗುತ್ತದೆ. 

ಅದೇ ರೀತಿ ಹೊರಗುತ್ತಿಗೆ ಸೇವೆ ಒದಗಿಸುವ ಸಂಸ್ಥೆಗಳು ಸಹ ತಮ್ಮಲ್ಲಿನ ನೇಮಕಾತಿ ವೇಳೆ ಮೀಸಲಾತಿ ಪ್ರಮಾಣವನ್ನು ಪಾಲನೆ ಮಾಡುವಂತೆ ಸೂಚನೆ ನೀಡಲಾಗುವುದು. ಜೊತೆಗೆ ವಿವಿಧ ಇಲಾಖೆಗಳು, ನಿಗಮ ಮಂಡಳಿ ಇತ್ಯಾದಿಗಳಲ್ಲಿ ನಡೆದಿರುವ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡವರಲ್ಲಿ ಪರಿಶಿಷ್ಟರು ಹಾಗೂ ಇತರ ಹಿಂದುಳಿದ ವರ್ಗದವರ ಅಂಕಿ-ಅಂಶ ಸಂಗ್ರಹಿಸಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಗುತ್ತಿಗೆ ನೇಮಕಾತಿ ವೇಳೆ ಮೀಸಲಾತಿ ಜಾರಿ ಬಗ್ಗೆ ಕಾನೂನು ತರುವ ಬಗ್ಗೆ ಸಹ ಪರಿಶೀಲಿಸಲಾಗುವುದು ಎಂದು ಹೇಳಿದರು. 

ಭಾರತದಲ್ಲೇ ಅತಿ ದೊಡ್ಡ ಭ್ರಷ್ಟ ಸರ್ಕಾರ ಬಿಜೆಪಿ: ರಣದೀಪ್‌ ಸಿಂಗ್‌ ಸುರ್ಜೇವಾಲ

ಇದಕ್ಕೂ ಮುನ್ನ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಗುತ್ತಿಗೆ ಆಧಾರದ ಮೇಲೆ ನೌಕರರ ನೇಮಕ ಮಾಡುವ ಸಂದರ್ಭದಲ್ಲಿ ಉಳ್ಳವರು/ಪ್ರಭಾವಿಗಳು ನೇಮಕವಾಗುತ್ತಿದ್ದಾರೆ. ಅರ್ಹ ಹಾಗೂ ತಳ ಸಮುದಾಯದ ನಿರುದ್ಯೋಗಿಗಳು ವಂಚಿತರಾಗುತ್ತಿದ್ದಾರೆ. ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡವರನ್ನು ಕಾಯಂ ಮಾಡಲು ಅವಕಾಶ ಇಲ್ಲದ ಕಾರಣ ಅವರಿಗೆ ಸಮಾನ ವೇತನ ನೀಡಿ ಮುಂದುವರೆಸುವುದು ಸಹಕಾರಿ ಸಂಸ್ಥೆ, ಡೈರಿಗಳಲ್ಲಿ ನಡೆಯುತ್ತಿದೆ. ಇದರಿಂದ ಉಳಿದವರಿಗೆ ಅನ್ಯಾಯವಾಗುತ್ತಿದೆ. ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.