ಬೆಂಗಳೂರು(ಜ.01): ಬೆಸ್ಕಾಂ ವ್ಯಾಪ್ತಿಯಲ್ಲಿ 5 ಲಕ್ಷ ರು.ಗಿಂತ ಕಡಿಮೆ ಮೊತ್ತದ ವಿದ್ಯುತ್‌ ಪೂರೈಕೆಯ ಸುಧಾರಣೆ ಹಾಗೂ ನಿರ್ವಹಣಾ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ತುಂಡು ಗುತ್ತಿಗೆ ನೀಡುವಂತೆ ಖುದ್ದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ನಿರ್ದೇಶನದ ಮೇರೆಗೆ ಸರ್ಕಾರ ಆದೇಶ ಹೊರಡಿಸಿದ್ದರೂ ಬೆಸ್ಕಾಂ ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಬದಲಾಗಿ ಬೃಹತ್‌ ಕಂಪೆನಿಗಳಿಗೆ ದುಪ್ಪಟ್ಟು ದರಕ್ಕೆ ಟೆಂಡರ್‌ ನೀಡಲು ಸಜ್ಜಾಗಿದೆ.

ಹೀಗೆ ಯಡಿಯೂರಪ್ಪ ಅವರ ಆದೇಶವನ್ನೇ ಉಲ್ಲಂಘಿಸಿ ಬೃಹತ್‌ ಕಂಪೆನಿಗಳಿಗೆ ದುಪ್ಪಟ್ಟು ದರಕ್ಕೆ ಟೆಂಡರ್‌ ನೀಡುವಲ್ಲಿ ಡಿ.31ರಂದೇ ನಿವೃತ್ತರಾದ ತಾಂತ್ರಿಕ ನಿರ್ದೇಶಕ ಅಶೋಕ್‌ ಕುಮಾರ್‌ ಅವರ ಪಾತ್ರವಿದೆ. ರಾಜ್ಯದ ಇತರೆಲ್ಲ ಎಸ್ಕಾಂಗಳು ಸರ್ಕಾರದ ಆದೇಶ ಪಾಲಿಸಿದ್ದರೂ ಬೆಸ್ಕಾಂನಲ್ಲಿ ಮಾತ್ರ ಈ ಆದೇಶ ಬರದಂತೆ ತಡೆಯುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಾರ ಎಂದು ರಾಜ್ಯ ಪರವಾನಗಿ ಪಡೆದ ವಿದ್ಯುತ್‌ ಗುತ್ತಿಗೆದಾರರ ಸಂಘದ ರಾಜ್ಯ ಮಾಜಿ ಉಪಾಧ್ಯಕ್ಷ ಸಿ. ರಮೇಶ್‌ ಆರೋಪಿಸಿದ್ದಾರೆ.

ಏನಿದು ವಿವಾದ?:

ಬೆಸ್ಕಾಂ ಸೇರಿದಂತೆ ರಾಜ್ಯದಲ್ಲಿ ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲಿ 1 ಲಕ್ಷ ರು.ವರೆಗಿನ ವಿದ್ಯುತ್‌ ನಿರ್ವಹಣಾ ಕಾಮಗಾರಿಗಳನ್ನು ಸ್ಥಳೀಯ ಗುತ್ತಿಗೆದಾರರಿಗೆ ಎಸ್‌.ಆರ್‌. (ಷೆಡ್ಯೂಲ್‌ ದರ) ದರದಂತೆ ಗುತ್ತಿಗೆ ನೀಡಲು ಅವಕಾಶವಿತ್ತು. ಈ ನಿಯಮವನ್ನು ಪರಿಷ್ಕರಿಸಿ ಅ.29 ರಂದು ಆದೇಶ ಹೊರಡಿಸಿರುವ ಸರ್ಕಾರ 5 ಲಕ್ಷ ರು.ವರೆಗೂ ಎಸ್‌.ಆರ್‌. ದರದಂತೆ ತುಂಡು ಗುತ್ತಿಗೆ ನೀಡಲು ಅವಕಾಶ ಕಲ್ಪಿಸಿದೆ. ಇದಕ್ಕೆ ಆರ್ಥಿಕ ಇಲಾಖೆಯೂ ಅನುಮೋದನೆ ನೀಡಿದೆ.

ಈ ನಿಯಮವನ್ನು ರಾಜ್ಯದಲ್ಲಿರುವ ಎಲ್ಲಾ ಎಸ್ಕಾಂಗಳೂ ಅನುಷ್ಠಾನಕ್ಕೆ ತಂದಿದ್ದರೂ ಬೆಸ್ಕಾಂ ಮಾತ್ರ ತರುತ್ತಿಲ್ಲ. ಬದಲಿಗೆ ಬೆಸ್ಕಾಂನ 18 ವಲಯಗಳಲ್ಲಿ 5 ಲಕ್ಷ ರು.ಗಳಿಗಿಂತ ಕಡಿಮೆ ಮೊತ್ತದ ಕಾಮಗಾರಿಗಳನ್ನೂ ಪ್ಯಾಕೇಜ್‌ಗಳ ಅಡಿ ಟೆಂಡರ್‌ ಕರೆದು ಆರ್‌.ಸಿ. ದರದಂತೆ (ರೇಟ್‌ ಕಾಂಟ್ರಾಕ್ಟ್) ದುಪ್ಪಟ್ಟು ಮೊತ್ತಕ್ಕೆ ಬೃಹತ್‌ ಕಂಪೆನಿಗಳಿಗೆ ತುಂಡು ಗುತ್ತಿಗೆ ನೀಡುತ್ತಿದೆ. ಇದು ಕಾನೂನು ಬಾಹಿರ ಎಂದು ರಮೇಶ್‌ ಆರೋಪಿಸಿದ್ದಾರೆ.

ಅಪ್ಪ-ಮಗಳಿಗೆ ಒಲಿದ ಜಯ; ಮೂವರು ದಂಪತಿಗಳು ಆಯ್ಕೆ

ಬೆಸ್ಕಾಂ ಕ್ರಮ ಖಂಡಿಸಿ ಅ.26 ರಂದು ಕಾವೇರಿ ಭವನದ ಆವರಣ ಸೇರಿದಂತೆ ರಾಜ್ಯಾದ್ಯಂತ ಬೃಹತ್‌ ಪ್ರತಿಭಟನೆ ನಡೆಸಿದ್ದೆವು. ಅಲ್ಲದೆ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರು, ತಾಂತ್ರಿಕ ನಿರ್ದೇಶಕರಿಗೆ ಮನವಿ ಪತ್ರ ನೀಡಿದ್ದೆವು. ಡಿ.31 ರಂದು ನಿವೃತ್ತರಾಗುತ್ತಿರುವ ತಾಂತ್ರಿಕ ನಿರ್ದೇಶಕ ಅಶೋಕ್‌ ಕುಮಾರ್‌ ಅವರು ತರಾತುರಿಯಲ್ಲಿ ಕಡತಗಳನ್ನು ವಿಲೇವಾರಿ ಮಾಡಲು ಮುಂದಾಗಿದ್ದು, ಸಣ್ಣ ಗುತ್ತಿಗೆದಾರರ ಹಿತಾಸಕ್ತಿಯನ್ನು ಬಲಿ ನೀಡುತ್ತಿದ್ದಾರೆ ಎಂದು ದೂರಿದ್ದಾರೆ.

5 ಲಕ್ಷಕ್ಕಿಂತ ಕಡಿಮೆ ಮೊತ್ತದ ಕಾಮಗಾರಿಗಳಿಗೆ ಎಸ್‌.ಆರ್‌. ದರದಂತೆ ಅಂದಾಜು ವೆಚ್ಚ ನಮೂದಿಸಿ ಬೆಸ್ಕಾಂ ಸಂಸ್ಥೆಯು ತನ್ನದೇ ಸಾಮಗ್ರಿಗಳನ್ನು ಪೂರೈಸಿ ತುಂಡು ಗುತ್ತಿಗೆದಾರರಿಂದ ಕಾಮಗಾರಿ ಮಾಡಿಸಬೇಕು. ಆದರೆ, ಪ್ರಸ್ತುತ ಬೆಸ್ಕಾಂ ಸಂಸ್ಥೆಯು 5 ಲಕ್ಷಕ್ಕಿಂತ ಕಡಿಮೆ ಮೊತ್ತದ ಕಾಮಗಾರಿಗಳನ್ನೂ ಪ್ಯಾಕೇಜ್‌ ಮಾಡಿ ಕೋಟ್ಯಂತರ ರು. ಮೊತ್ತದ ಟೆಂಡರ್‌ಗಳಾಗಿ ಪರಿವರ್ತಿಸಿ ದೊಡ್ಡ ಕಂಪೆನಿಗಳಿಗೆ ನೀಡುತ್ತಿದೆ. ಈ ವೇಳೆ ಆರ್‌.ಸಿ. ದರದಂತೆ ನೀಡುತ್ತಿದ್ದು ಎಲ್ಲಾ ಸಾಮಗ್ರಿಗಳನ್ನೂ ಟೆಂಡರ್‌ ಪಡೆದವರೇ ತಂದು ಹಾಕಲು ಅವಕಾಶ ಕಲ್ಪಿಸಲಾಗುತ್ತಿದೆ. ಇದಕ್ಕಾಗಿ ಅವರಿಗೆ ಎಸ್‌.ಆರ್‌. ದರಕ್ಕಿಂತ ಒಂದೂವರೆ ಪಟ್ಟು ಹೆಚ್ಚು ಹಣ ಒದಗಿಸುತ್ತಿದೆ. ಇದೇ ರೀತಿ ಮುಂದುವರೆದರೆ ಬೆಸ್ಕಾಂ ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದು, ಕೆಲಸವಿಲ್ಲದೆ ಬೆಸ್ಕಾಂನ ಕೇಂದ್ರ ಗೋದಾಮು ಕೂಡ ಮುಚ್ಚುವ ಸ್ಥಿತಿ ಬರಲಿದೆ ಎಂದು ಗುತ್ತಿಗೆದಾರರು ದೂರಿದ್ದಾರೆ.

ಪ್ರತಿಕ್ರಿಯೆಗೆ ಲಭ್ಯರಾಗದ ತಾಂತ್ರಿಕ ನಿರ್ದೇಶಕ:

ಇನ್ನು ಈ ಬಗ್ಗೆ ಗುರುವಾರ ನಿವೃತ್ತರಾದ ಬೆಸ್ಕಾಂ ತಾಂತ್ರಿಕ ನಿರ್ದೇಶಕ ಅಶೋಕ್‌ ಕುಮಾರ್‌ ಅವರನ್ನು ಸಂಪರ್ಕಿಸುವ ಸತತ ಪ್ರಯತ್ನ ವಿಫಲವಾಯಿತು. ‘ಮೊಬೈಲ್‌ನಲ್ಲಿ ತಾಂತ್ರಿಕ ಸಮಸ್ಯೆಯಿದೆ. ಹೀಗಾಗಿ ಅವರು ಕರೆಗೆ ಲಭ್ಯರಾಗುತ್ತಿಲ್ಲ’ ಎಂದು ಅವರ ಕಚೇರಿಯ ಸಿಬ್ಬಂದಿ ಹೇಳುತ್ತಾರೆ.