ಬೆಂಗಳೂರು(ಜ.26): ಮೈಸೂರು ರಸ್ತೆಯ ಬಾಲಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯ (ಸಿರ್ಸಿ ಫ್ಲೈಓವರ್‌) ಮೈಸೂರು ರಸ್ತೆಯಿಂದ ಪುರಭವನ ಕಡೆಗೆ ಸಾಗುವ ಮಾರ್ಗದ ಕಾಮಗಾರಿ ಪೂರ್ಣಗೊಂಡಿದ್ದು, ಶನಿವಾರ ರಾತ್ರಿ 8ರಿಂದ ಸಂಚಾರ ಮುಕ್ತಗೊಳಿಸಲಾಗಿದೆ.

ಟೌನ್‌ಹಾಲ್‌ ಕಡೆಯಿಂದ ಮೈಸೂರು ರಸ್ತೆ ಕಡೆಗೆ ಸಾಗುವ ಮಾರ್ಗವನ್ನು 2019ರ ಮಾಚ್‌ರ್‍ನಲ್ಲಿ ನೂತನ ತಂತ್ರಜ್ಞಾನ ಬಳಸಿಕೊಂಡು ಡಾಂಬರೀಕರಣ ಮಾಡಲಾಗಿತ್ತು. ಮತ್ತೊಂದು ಭಾಗದ ರಸ್ತೆಗೆ ಡಾಂಬರೀಕರಣ ಕಾಮಗಾರಿಯನ್ನು ಕಳೆದ ಡಿಸೆಂಬರ್‌ನಲ್ಲಿ ಕೈಗೊಳ್ಳಲಾಗಿತ್ತು. ಇದೀಗ ಮೇಲ್ಸೇತುವೆಯ ಡಾಂಬರೀಕರಣ ಕಾಮಗಾರಿ ಸಂಪೂರ್ಣಗೊಂಡಿದ್ದು, ಶನಿವಾರ ಸಂಚಾರ ಮುಕ್ತಗೊಳಿಸಲಾಗಿದೆ.

ಸ್ವಚ್ಛ ಕೆರೆಗೆ ಕೊಳಚೆ ನೀರು: ಕೊನೆಗೂ ಬಿತ್ತು ಬ್ರೇಕ್

5.90 ಕೋಟಿ ವೆಚ್ಚದಲ್ಲಿ 2.65 ಕಿ.ಮೀ ಉದ್ದ ಎರಡು ಪಥದ ಮಾರ್ಗದ ಡಾಂಬರೀಕರಣದ ಗುತ್ತಿಗೆಯನ್ನು ನೀಡಲಾಗಿತ್ತು. ಎರಡೂ ಹಂತದ ಕಾಮಗಾರಿಯನ್ನು ಶನಿವಾರ ಪೂರ್ಣಗೊಳಿಸಲಾಗಿದೆ ಎಂದು ಬಿಬಿಎಂಪಿ ಎಂಜಿನಿಯರ್‌ ಸುರೇಶ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ. ಇದೀಗ ಮೇಲ್ಸೇತುವೆ ಸಂಚಾರ ಮುಕ್ತಗೊಳಿಸಿರುವುದರಿಂದ ಮೇಲ್ಸೇತುವೆ ಮೇಲೆ ಸಂಚರಿಸುವ ವಾಹನ ಸವಾರರು ನಿರಾಳರಾಗಿದ್ದಾರೆ.

ಬೇರೆಯವರಿಗೆ ಗುತ್ತಿಗೆ

ಬಿಬಿಎಂಪಿ 2014ರಲ್ಲಿ ಮೇಲ್ಸೇತುವೆಯ ದುರಸ್ತಿ ಕಾಮಗಾರಿಯನ್ನು ಆರ್‌ಟ್ರೇ ಇನ್‌ಫ್ರಾ ಪ್ರಾಜೆಕ್ಟ್ ಸಂಸ್ಥೆ ನೀಡಿತ್ತು. ಗುತ್ತಿಗೆ ಪಡೆದ ಸಂಸ್ಥೆ ಐದು ವರ್ಷ ಮೇಲ್ಸೇತುವೆ ನಿರ್ವಹಣೆ ಮಾಡಬೇಕಾಗಿತ್ತು. ಆದರೆ, ಮೂರು ವರ್ಷ ನಿರ್ವಹಣೆ ಮಾಡಿ ಬಳಿಕ ಕೈ ಬಿಟ್ಟಿತ್ತು. ಇದರಿಂದ ಬಿಬಿಎಂಪಿ ಗುತ್ತಿಗೆ ಸಂಸ್ಥೆಯ .11 ಲಕ್ಷ ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಂಡು ದುರಸ್ತಿ ಕಾಮಗಾರಿಯನ್ನು ಬೇರೆ ಸಂಸ್ಥೆಗೆ ನೀಡಿತ್ತು.