ಬೆಂಗಳೂರು(ಜೂ.08): ಕೊರೋನಾ ಸೋಂಕು ಹರಡುತ್ತದೆ ಎಂಬ ಕಾರಣದಿಂದ ಎಲ್ಲ ಶಾಪಿಂಗ್‌ ಮಾಲ್‌ಗಳಲ್ಲಿ ಬಟ್ಟೆಗಳನ್ನು ಟ್ರಯಲ್‌ ಮಾಡುವುದನ್ನು ನಿಷೇಧಿಸಲಾಗಿದೆ.

ಸೋಮವಾರದಿಂದ ನಗರದಲ್ಲಿ ಶಾಪಿಂಗ್‌ ಮಾಲ್‌ಗಳು ಪುನರಾರಂಭವಾಗುತ್ತಿದ್ದು, ಸೋಂಕು ಹರಡದಂತೆ ಸಾಕಷ್ಟುಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದು, ಬಟ್ಟೆಗಳ ಅಳತೆ ಪರೀಕ್ಷೆಗಾಗಿ ಟ್ರಯಲ್‌ ಮಾಡುವುದಕ್ಕೆ ಅವಕಾಶ ಇಲ್ಲ ಎಂದು ಬಹುತೇಕ ಮಾಲ್‌ಗಳು ತಿಳಿಸಿವೆ.

ಗ್ರಾಹಕರ ಸುರಕ್ಷತೆ ದೃಷ್ಟಿಯಿಂದ ಮಾಲ್‌ಗಳಲ್ಲಿ ಪ್ರತಿಯೊಬ್ಬರೂ ಬಳಸುವ ಲಿಫ್ಟ್‌, ಎಸ್ಕಲೇಟರ್‌ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆ. 8ರಿಂದ 10 ಜನರ ಸಾಮರ್ಥ್ಯವಿರುವ ಲಿಫ್ಟ್‌ಗಳಲ್ಲಿ ಕೇವಲ ಮೂರು ಮಂದಿ ಮಾತ್ರ ಬಳಸಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಓರಾಯನ್‌ ಮಾಲ್‌ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಕೆ. ಆರ್‌. ಮಾರುಕಟ್ಟೆ ಆರಂಭವಾಗುವುದು ಡೌಟ್‌!

ಮಾಲ್‌ಗಳಲ್ಲಿನ ಎಲ್ಲ ವಿಭಾಗವಾರು ಸ್ವಚ್ಛತಾ ಸಿಬ್ಬಂದಿ ಪ್ರತಿ ತಾಸಿಗೊಮ್ಮೆ ಎಲ್ಲ ಭಾಗಗಳಲ್ಲಿ ಸ್ಯಾನಿಟೈಜ್‌ ಮಾಡಿ ಶುದ್ಧಗೊಳಿಸಲು ಸೂಚನೆ ನೀಡಲಾಗಿದೆ. ಹೆಚ್ಚುವರಿ ಸಿಬ್ಬಂದಿ ನೇಮಿಸಿದ್ದು ಕಾಲ ಕಾಲಕ್ಕೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಸೂಚನೆ ನೀಡಲಾಗಿದೆ ಎಂದು ಗರುಡಾ ಮಾಲ್‌ನ ಸಿಬ್ಬಂದಿ ತಿಳಿಸಿದ್ದಾರೆ.

ಮಾಸ್ಕ್‌ ಧರಿಸಿದವರಿಗೆ ಮಾತ್ರ ಮಾಲ್‌ ಪ್ರವೇಶಕ್ಕೆ ಅವಕಾಶ ನೀಡುತ್ತಿದ್ದು, ಪ್ರವೇಶ ದ್ವಾರದಲ್ಲಿಯೇ ಸ್ಯಾನಿಟೈಸರ್‌ನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ. ಜೊತೆಗೆ ಪ್ರತಿಯೊಬ್ಬರಿಗೂ ಥರ್ಮಲ್‌ ಸ್ಕಾ್ಯನಿಂಗ್‌ ಕಡ್ಡಾಯ ಮಾಡಲಾಗಿದೆ ಎಂದು ಅವರ ವಿವರಿಸಿದರು.

ಹೊರಗಡೆಯಿಂದ ಬಂದ ಸಿಬ್ಬಂದಿ ಕ್ವಾರಂಟೈನ್‌ಗೆ

ಕಳೆದ ಮೂರು ತಿಂಗಳಿನಿಂದ ಮಾಲ್‌ಗಳು ಪ್ರಾರಂಭವಾಗದ ಹಿನ್ನೆಲೆಯಲ್ಲಿ ಎಲ್ಲ ಸಿಬ್ಬಂದಿ ಊರುಗಳಿಗೆ ತೆರಳಿದ್ದಾರೆ. ಈ ಸಿಬ್ಬಂದಿ ಹೊರ ಭಾಗದಿಂದ ಬೆಂಗಳೂರಿಗೆ ಬರುತ್ತಿದ್ದಂತೆ 15 ದಿನ ಕ್ವಾರಂಟೈನ್‌ ಮಾಡಲು ಸೂಚನೆ ನೀಡಲಾಗಿದೆ. ಮಾಲ್‌ಗಳ ಪ್ರವೇಶ ಮಾಡುತ್ತಿದ್ದಂತೆ ಎಲ್ಲ ವಾಹನಗಳ ಚಕ್ರಗಳನ್ನು ಸ್ಯಾನಿಟೈಜ್‌ ಮಾಡಿ ಪ್ರವೇಶಕ್ಕೆ ಅವಕಾಶ ನೀಡಲಾಗುವುದು ಎಂದು ಫೋರಂ ಮಾಲ್‌ ಸಿಬ್ಬಂಂದಿ ವಿವರಿಸಿದರು.