ಬೆಂಗಳೂರಿನಲ್ಲಿ ಸರ್ಕಾರಿ ಕೆಲಸದ ಆಮಿಷವೊಡ್ಡಿ ಬಿ.ಕಾಂ ಪದವೀಧರೆಯೊಬ್ಬರಿಗೆ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ನಂತರ, ಶಸ್ತ್ರಚಿಕಿತ್ಸೆಯ ಖರ್ಚು ತೀರಿಸಲು ಅವರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ ಅಮಾನವೀಯ ಘಟನೆ ನಡೆದಿದೆ.

ಬೆಂಗಳೂರು (ಜ.07): ಸಿಲಿಕಾನ್ ಸಿಟಿಯಲ್ಲಿ ಮಂಗಳಮುಖಿಯರ ನಡುವಿನ ಆಂತರಿಕ ದೌರ್ಜನ್ಯದ ಕರಾಳ ಮುಖವೊಂದು ಬಯಲಾಗಿದೆ. ಬಿ.ಕಾಂ ಪದವೀಧರೆಯೊಬ್ಬರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ, ಆಕೆಗೆ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡಿಸಿ, ನಂತರ ಆಕೆಯನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ನೂಕಿರುವ ಘೋರ ಘಟನೆ ಶ್ರೀರಾಮಪುರದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆಯ ವಿವರ:

ಶ್ರೀರಾಮಪುರ ನಿವಾಸಿ ಜೆರೋಮಿಯಾ ಎಂಬುವವರು ಬಿ.ಕಾಂ ಪದವೀಧರೆ. ಇವರಿಗೆ ಐಶ್ವರ್ಯಾ ರೆಡ್ಡಿ ಎಂಬ ಮಂಗಳಮುಖಿ ಪರಿಚಯವಾಗಿ, ಸರ್ಕಾರಿ ಕೆಲಸ ಕೊಡಿಸುವುದಾಗಿ ಆಮಿಷವೊಡ್ಡಿದ್ದಳು. ಇದಕ್ಕೆ ಪೂರಕವಾಗಿ ಜೆರೋಮಿಯಾಗೆ ಸುಮಾರು 2 ಲಕ್ಷ ರೂಪಾಯಿ ಖರ್ಚು ಮಾಡಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ (Operation) ಮಾಡಿಸಲಾಗಿತ್ತು. ಆದರೆ, ಶಸ್ತ್ರಚಿಕಿತ್ಸೆ ಮುಗಿಯುತ್ತಿದ್ದಂತೆ ಐಶ್ವರ್ಯಾ ರೆಡ್ಡಿಯ ಅಸಲಿ ರೂಪ ಹೊರಬಂದಿದೆ.

ಪ್ರತಿನಿತ್ಯ 10 ಸಾವಿರ ರೂ.ಗೆ ಬೇಡಿಕೆ

‘ನಿನ್ನ ಶಸ್ತ್ರಚಿಕಿತ್ಸೆ ಮತ್ತು ಮಂಗಳಮುಖಿ ಕಾರ್ಯಕ್ರಮಕ್ಕೆ (Function) ನಾನೇ ಸಾಲ ಮಾಡಿ ಹಣ ಖರ್ಚು ಮಾಡಿದ್ದೇನೆ. ಆ ಸಾಲ ತೀರಿಸಲು ನೀನು ಪ್ರತಿನಿತ್ಯ ಸೆಕ್ಸ್ ವರ್ಕರ್ ಆಗಿ ಕೆಲಸ ಮಾಡಬೇಕು. ದಿನಕ್ಕೆ ಕನಿಷ್ಠ 10 ಸಾವಿರ ರೂಪಾಯಿ ಸಂಪಾದಿಸಿ ತಂದು ಕೊಡಬೇಕು’ ಎಂದು ಐಶ್ವರ್ಯಾ ರೆಡ್ಡಿ ಮತ್ತು ಆಕೆಯ ತಂಡ ಜೆರೋಮಿಯಾಗೆ ಕಿರುಕುಳ ನೀಡಲು ಆರಂಭಿಸಿದೆ. ವೇಶ್ಯಾವಾಟಿಕೆಗೆ ನಿರಾಕರಿಸಿದ ಜೆರೋಮಿಯಾ ಮೇಲೆ ಐಶ್ವರ್ಯಾ ರೆಡ್ಡಿ ಮತ್ತು ಆಕೆಯ ಸಹಚರರು ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಬಲವಂತವಾಗಿ ಜೆರೋಮಿಯಾ ಅವರ ತಲೆ ಕೂದಲು ಬೋಳಿಸಿ, ರೂಮ್‌ನಲ್ಲಿ ಕೂಡಿ ಹಾಕಿ ಟಾರ್ಚರ್ ನೀಡಿದ್ದಾರೆ. ಈ ಅಮಾನವೀಯ ಕೃತ್ಯದಿಂದ ನೊಂದ ಜೆರೋಮಿಯಾ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಪೊಲೀಸರ ಮೊರೆ ಹೋಗಿದ್ದಾರೆ.

ಪೊಲೀಸ್ ಪ್ರಕರಣ ದಾಖಲು

ಸಂತ್ರಸ್ತ ಜೆರೋಮಿಯಾ ನೀಡಿದ ದೂರಿನನ್ವಯ ಶ್ರೀರಾಮಪುರ ಪೊಲೀಸರು ಐಶ್ವರ್ಯಾ ರೆಡ್ಡಿ ಮತ್ತು ಆಕೆಯ ಜೊತೆಯಲ್ಲಿದ್ದ ಇತರರ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದಾರೆ. ಕೆಲಸ ಕೊಡಿಸೋ ನೆಪದಲ್ಲಿ ಜೀವನವನ್ನೇ ಬಲಿ ಕೊಡಲು ಮುಂದಾದ ಈ ಜಾಲದ ವಿರುದ್ಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.