ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಮತದಾರರ ಪಟ್ಟಿ ಪರಿಷ್ಕರಿಸಲು ರಾಜ್ಯ ಚುನಾವಣಾ ಆಯೋಗ ಮುಂದಾಗಿದೆ. ಹಿಂದೆ ಪ್ರಕಟಿಸಿದ ಅಂತಿಮ ಮತದಾರ ಪಟ್ಟಿಗೆ ತಡೆ ನೀಡಲಾಗಿದೆ.
ಬೆಂಗಳೂರು(ಜೂ.21) ಚುನಾವಣಾ ಆಯೋಗದಿಂದ ಕರ್ನಾಟಕದಲ್ಲಿ SIR ಆರಂಭಕ್ಕೆ ಸಿದ್ಧತೆ ಶುರುವಾಗಿದೆ. ಇದರ ಬೆನ್ನಲ್ಲೇ ರಾಜ್ಯ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ. ಜಿಬಿಎ ವ್ಯಾಪ್ತಿಯಲ್ಲಿ ಮತ್ತೊಮ್ಮೆ ಮತ ಪಟ್ಟಿ ಪರಿಷ್ಕರಣೆಗೆ ರಾಜ್ಯ ಚುನಾವಣಾ ಆಯೋಗ ಮುಂದಾಗಿದೆ. ಹಿಂದೆ ಪ್ರಕಟಿಸಿದ ಅಂತಿಮ ಮತದಾರ ಪಟ್ಟಿಗೆ ತಡೆ ನೀಡಲಾಗಿದ್ದು, ಇದೀಗ ಹೊಸದಾಗಿ SIR ನಡೆಸಲು ನಿರ್ಧರಿಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆ ಚುನಾವಣೆ ಹಿನ್ನಲೆಯಲ್ಲಿ ಎಪ್ರಿಲ್ 18ರಂದು ಪ್ರಕಟಿಸಿದ್ದ ಅಂತಿಮ ಮತಪಟ್ಟಿಗೆ ತೆಡ ನೀಡಿದ ರಾಜ್ಯ ಚುನಾವಣಾ ಆಯೋಗ ಇದೀಗ ಹೊಸದಾಗಿ ಮತದಾರರ ಪಟ್ಟಿ ಪರಿಷ್ಕರಿಸಲು ಮುಂದಾಗಿದೆ. ಈ ಹಿಂದಿನ ಮತದಾರರ ಪಟ್ಟಿ ಪರಿಷ್ಕರಣೆ ಬಳಿಕ ದೂರುಗಳು ಕೇಳಿಬಂದಿರುವ ಹಿನ್ನಲೆಯಲ್ಲಿ ರಾಜ್ಯ ಚುನವಣಾ ಆಯೋಗ ಮತ್ತೊಮ್ಮೆ SIR ನಡೆಸಲು ಮುಂದಾಗಿದೆ.
ರಾಜ್ಯ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿ ಪರಿಷ್ಕರಣೆ
- ಜೂನ್ 25 ರಂದು ಒಂದು ದಿನ BLA ಗಳಿಗೆ ತರಬೇತಿ
- ಜೂನ್ 26 ರಿಂದ ಮನೆ ಮನೆ ಸಮೀಕ್ಷೆ
- ಜುಲೈ 9 ರಂದು ಕರಡು ಮತದಾರ ಪಟ್ಟಿ ಪರಿಷ್ಕರಣೆ
- ಜುಲೈ 10 ರಿಂದ 26 ರ ತನಕ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ
- ಜುಲೈ 31ಕ್ಕೆ ಅಂತಿಮ ಮತಪಟ್ಟಿ ಪ್ರಕಟ
ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ರಾಜ್ಯ ಚುನಾವಣಾ ಆಯೋಗ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರಪಾಲಿಕೆಗೆಳ ಸಾರ್ವತ್ರಿಕ ಚುನಾವಣೆ -2026, ಬೆಂಗಳೂರು ಪೂರ್ವ ನಗರಪಾಲಿಕೆಯ ವಾರ್ಡ್ ಸಂಖ್ಯೆ 28 ರಿಂದ 50 ವರೆಗೆ (ಒಟ್ಟು 23 ವಾರ್ಡ್ ಗಳು)ಹಾಗೂ ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ವಾರ್ಡ್ ಸಂಖ್ಯೆ 31(ಒಂದು ವಾರ್ಡ್) ಗಳ ಹಾಗೂ ಬೆಂಗಳೂರು ಕೇಂದ್ರ ನಗರಪಾಲಿಕೆಯ ವಾರ್ಡ್ ಸಂಖ್ಯೆ 57, 58 ಮತ್ತು 59 ರ(3 ವಾರ್ಡ್ಗಳು) ಮತದಾರರ ಪಟ್ಟಿಗಳಿಗೆ ಸಂಬಂಧಿಸಿದಂತೆ ಪ್ರಮುಖ ರಾಜಕೀಯ ಪಕ್ಷ ಹಾಗೂ ಸಾರ್ವಜನಿಕರಿಂದ ಆಕ್ಷೇಪಣೆಗಳು ಸ್ವೀಕೃತವಾಗಿರುವ ಹಿನ್ನೆಲೆಯಲ್ಲಿ, ಸಂಬಂಧಿಸಿದ ವಾರ್ಡ್‌ಗಳ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಆಯೋಗವು ತೀರ್ಮಾನಿಸಿರುತ್ತದೆ. ಸದರಿ ವಾರ್ಡ್‌ಗಳಿರುವ ದಿನಾಂಕ: 18.04.2026ರಂದು ಪ್ರಕಟಿಸಿರುವ ಅಂತಿಮ ಮತದಾರರ ಪಟ್ಟಿಯನ್ನು ಮುಂದಿನ ಆದೇಶದವರೆಗೆ ತಡೆ ಹಿಡಿಯಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಭಾರತ ಸಂವಿಧಾನದ ಆರ್ಟಿಕಲ್ 243-ZA ಹಾಗೂ ಗ್ರೇಟರ್ ಬೆಂಗಳೂರು (ಆಡಳಿತ) ಅಧಿನಿಯಮ, 2025 ಪ್ರಕರಣ 35 ಮತ್ತು ಗ್ರೇಟರ್ ಬೆಂಗಳೂರು ಆಡಳಿತ(ಮತದಾರರ ನೋಂದಣಿ) ನಿಯಮಗಳು 2025ರ ನಿಯಮ 23(2)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸದರಿ ವಾರ್ಡ್‌ಗಳ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯವನ್ನು ದಿನಾಂಕ: 26.06.2026ರಿಂದ ಕೈಗೊಳ್ಳಲು ಆದೇಶಿಸಲಾಗಿದೆ.


