ಬೆಂಗಳೂರು ದಕ್ಷಿಣ ನಗರ ಪಾಲಿಕೆಯು, ಅರಕೆರೆ ಶಾಂತಿನಿಕೇತನ ಬಡಾವಣೆಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಸುಮಾರು 10 ಕೋಟಿ ರೂಪಾಯಿ ಮೌಲ್ಯದ ಸಿ.ಎ. ನಿವೇಶನಗಳನ್ನು ವಶಕ್ಕೆ ಪಡೆದಿದೆ. ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ, ಆಯುಕ್ತರ ನೇತೃತ್ವದಲ್ಲಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಗಿದೆ.

ಬೆಂಗಳೂರು (ಮಾ.07): ರಾಜಧಾನಿಯ ಸರ್ಕಾರಿ ಜಾಗಗಳನ್ನು ಅತಿಕ್ರಮಿಸಿಕೊಂಡಿರುವ ಭೂಗಳ್ಳರಿಗೆ ಬೆಂಗಳೂರು ದಕ್ಷಿಣ ನಗರ ಪಾಲಿಕೆಯು ಬಿಸಿ ಮುಟ್ಟಿಸಿದೆ. ನಗರದ ಬೊಮ್ಮನಹಳ್ಳಿ ವಲಯದ ಅರಕೆರೆ ವ್ಯಾಪ್ತಿಯ ಶಾಂತಿನಿಕೇತನ ಬಡಾವಣೆಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ಸುಮಾರು 10 ಕೋಟಿ ರೂಪಾಯಿ ಮೌಲ್ಯದ ನಾಗರೀಕ ಸೌಲಭ್ಯ (C.A.) ನಿವೇಶನಗಳನ್ನು ಪಾಲಿಕೆಯ ಆಯುಕ್ತರಾದ ಕೆ.ಎನ್. ರಮೇಶ್ ನೇತೃತ್ವದಲ್ಲಿ ಯಶಸ್ವಿಯಾಗಿ ವಶಕ್ಕೆ ಪಡೆಯಲಾಗಿದೆ.

Add Asianetnews Kannada as a Preferred SourcegooglePreferred

ಏನಿದು ಪ್ರಕರಣ?

ಅರಕೆರೆ ವ್ಯಾಪ್ತಿಯ ಶಾಂತಿನಿಕೇತನ ಬಡಾವಣೆಯ ಸರ್ವೇ ನಂಬರ್ 76 ರಲ್ಲಿ ಬರುವ ನಿವೇಶನ ಸಂಖ್ಯೆ 15 ಮತ್ತು 16 ಸೇರಿದಂತೆ ಇತರೆ ಸಿ.ಎ. ನಿವೇಶನಗಳನ್ನು ಸಾರ್ವಜನಿಕ ಉಪಯೋಗಕ್ಕಾಗಿ ಮೀಸಲಿಡಲಾಗಿತ್ತು. ಆದರೆ, ಈ ಬೆಲೆಬಾಳುವ ಜಾಗವನ್ನು ಕೆಲವು ವ್ಯಕ್ತಿಗಳು ಅತಿಕ್ರಮಿಸಿಕೊಂಡು ಕಾನೂನುಬಾಹಿರವಾಗಿ ಕಟ್ಟಡ ನಿರ್ಮಾಣ ಮಾಡುತ್ತಿದ್ದರು. ಈ ಸಂಬಂಧ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ (14427/2021) ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು 2024ರ ಡಿಸೆಂಬರ್ 03 ರಂದು ಈ ಜಾಗವನ್ನು ಪಾಲಿಕೆಯ ಸುಪರ್ದಿಗೆ ನೀಡುವಂತೆ ಆದೇಶ ಹೊರಡಿಸಿತ್ತು.

ಪಾಲಿಕೆಯ ಭರ್ಜರಿ ಕಾರ್ಯಾಚರಣೆ:

ಘನ ನ್ಯಾಯಾಲಯದ ಆದೇಶವಿದ್ದರೂ ಸಹ, ಈ ಜಾಗದಲ್ಲಿ ಅತಿಕ್ರಮಣ ಮುಂದುವರಿದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತ ಕೆ.ಎನ್. ರಮೇಶ್ ಅವರು ಇಂದು (ಮಾರ್ಚ್ 07, 2026) ಖುದ್ದು ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದರು. ಪೊಲೀಸರ ಬಿಗಿ ರಕ್ಷಣೆಯೊಂದಿಗೆ ಅಕ್ರಮವಾಗಿ ನಿರ್ಮಿಸಲಾಗುತ್ತಿದ್ದ ಕಟ್ಟಡಗಳನ್ನು ತೆರವುಗೊಳಿಸಲಾಯಿತು. ಅಷ್ಟೇ ಅಲ್ಲದೆ, ಕಟ್ಟಡ ನಿರ್ಮಾಣಕ್ಕಾಗಿ ಸ್ಥಳದಲ್ಲಿ ಇರಿಸಲಾಗಿದ್ದ ಮರಳು, ಇಟ್ಟಿಗೆ ಸೇರಿದಂತೆ ಇತರೆ ಸಾಮಗ್ರಿಗಳನ್ನು ಪಾಲಿಕೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

10 ಕೋಟಿ ಮೌಲ್ಯದ ಆಸ್ತಿ:

ವಶಪಡಿಸಿಕೊಳ್ಳಲಾದ ಒಟ್ಟು 20,000 ಚದರ ಅಡಿ ವಿಸ್ತೀರ್ಣದ ಈ ಸಿ.ಎ. ನಿವೇಶನಗಳ ಪ್ರಸ್ತುತ ಮಾರುಕಟ್ಟೆ ಮೌಲ್ಯ ಅಂದಾಜು 10 ಕೋಟಿ ರೂಪಾಯಿಗಳಾಗಿವೆ. 'ಈ ಜಾಗಗಳನ್ನು ಇನ್ನು ಮುಂದೆ ಸಾರ್ವಜನಿಕರ ಉಪಯೋಗಕ್ಕೆ, ಅಂದರೆ ಉದ್ಯಾನವನ, ಗ್ರಂಥಾಲಯ ಅಥವಾ ನಾಗರೀಕ ಸೌಲಭ್ಯ ಕೇಂದ್ರಗಳ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು' ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ಎಚ್ಚರಿಕೆ ಫಲಕ ಅಳವಡಿಕೆ:

ಭವಿಷ್ಯದಲ್ಲಿ ಇಂತಹ ಅತಿಕ್ರಮಣಗಳು ಮರುಕಳಿಸದಂತೆ ತಡೆಯಲು, ವಶಪಡಿಸಿಕೊಂಡ ಜಾಗದಲ್ಲಿ 'ಇದು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸ್ವತ್ತು' ಎಂಬ ಅಧಿಕೃತ ನಾಮಫಲಕವನ್ನು ಅಳವಡಿಸಲಾಗಿದೆ. ಅಕ್ರಮ ಒತ್ತುವರಿ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಈ ಸಂದರ್ಭದಲ್ಲಿ ಎಚ್ಚರಿಕೆ ನೀಡಿದರು.

ಈ ಮಹತ್ವದ ಕಾರ್ಯಾಚರಣೆಯ ಸಂದರ್ಭದಲ್ಲಿ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತರಾದ ಸತೀಶ್ ಬಾಬು, ಮುಖ್ಯ ಅಭಿಯಂತರರಾದ ಕೆ.ವಿ. ರವಿ ಹಾಗೂ ಪಾಲಿಕೆಯ ಇತರೆ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಪಾಲಿಕೆಯ ಈ ದಕ್ಷ ಕ್ರಮಕ್ಕೆ ಶಾಂತಿನಿಕೇತನ ಬಡಾವಣೆಯ ನಿವಾಸಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.