ಸಾಲ ಮಾಡಿ ಕಾಂಗ್ರೆಸ್‌ ನಾಯಕರನ್ನು ಸಾಕುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ಈ ಕಾಂಗ್ರೆಸಿಗರಿಗೆ ಗಂಜಿ ಕೇಂದ್ರವಾಗಿದೆ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ.

ಬೆಂಗಳೂರು (ಮಾ.07): ಸಾಲ ಮಾಡಿ ಕಾಂಗ್ರೆಸ್‌ ನಾಯಕರನ್ನು ಸಾಕುತ್ತಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರವು ಈ ಕಾಂಗ್ರೆಸಿಗರಿಗೆ ಗಂಜಿ ಕೇಂದ್ರವಾಗಿದೆ ಎಂದು ಕೇಂದ್ರ ಬೃಹತ್‌ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 4.48 ಲಕ್ಷ ಕೋಟಿ ರು. ಬಜೆಟ್‌ ಮಂಡಿಸಿದ್ದಾರೆ. ರಾಜ್ಯದ ಈಗಿನ ಒಟ್ಟು ಸಾಲ 8.24 ಲಕ್ಷ ಕೋಟಿ ರು. ಆಗಿದೆ. ಈ ಸಾಲ ಕಳೆದ ವರ್ಷದಿಂದ ಈ ವರ್ಷಕ್ಕೆ 1.16 ಲಕ್ಷ ಕೋಟಿ ರು.ನಿಂದ 1.32 ಲಕ್ಷ ಕೋಟಿ ರು.ಗೆ ಏರಿದೆ. ಮುಂದಿನ ವರ್ಷಕ್ಕೆ 9 ಲಕ್ಷ ಕೋಟಿ ರು. ಮೀರುವುದು ಗ್ಯಾರಂಟಿ. ಈ ಸಾಲದ ಗ್ಯಾರಂಟಿ ಭೀತಿ ಹುಟ್ಟಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸಾಲ ಮಾಡುತ್ತಿದ್ದೀರಿ, ಸರಿ. ಅದನ್ನು ಯಾವುದಕ್ಕೆ ಬಳಕೆ ಮಾಡುತ್ತಿದ್ದೀರಿ? ಸಾಲಕ್ಕೆ ತಕ್ಕಂತೆ ಬಂಡವಾಳ ವೆಚ್ಚವೂ ಆಗಬೇಕಲ್ಲವೇ? ದುರಂತವೆಂದರೆ, ಬಂಡವಾಳ ವೆಚ್ಚ ಎಲ್ಲಿದೆಯೋ ಕಳೆದ ಮೂರು ವರ್ಷಗಳಿಂದ ಅಲ್ಲೇ ಇದೆ. ಇವರು ಸಾಲ ಮಾಡಿ ಮೋಜು ಮಾಡುತ್ತಿದ್ದಾರೆ. ಸಾಲದ ಮೇಲೆ ಸಾಲ ಮಾಡಿ 140ಕ್ಕೂ ಹೆಚ್ಚು ಕಾಂಗ್ರೆಸ್ ನಾಯಕರಿಗೆ ಕ್ಯಾಬಿನೆಟ್ ದರ್ಜೆ, ಸ್ಟೇಟ್ ಮಿನಿಸ್ಟರ್ ದರ್ಜೆ ದಯಪಾಲಿಸಿ ಪೊಗದಸ್ತಾಗಿ ಸಾಕುತ್ತಿದ್ದಾರೆ ಎಂದು ಅವರು ಪ್ರಕಟಣೆ ಮೂಲಕ ಕಿಡಿಕಾರಿದ್ದಾರೆ.

ಸಾಲದ ಕೂಪಕ್ಕೆ ನೂಕುವ ಬಜೆಟ್‌: ಅನುತ್ಪಾದಕ ವೆಚ್ಚಕ್ಕೆ ಹಣ ಪೋಲಾಗುತ್ತಿದ್ದು, ಈ ಸರ್ಕಾರವು ಕಾಂಗ್ರೆಸ್ ಕಾರ್ಯಕರ್ತರಿಗೆ ಗಂಜಿ ಕೇಂದ್ರವಾಗಿದೆ. ಸಾಲದ ದುಡ್ಡು ಅವರ ಕಿಸೆಗೆ ಹೋಗಿ ಸೇರುತ್ತಿದೆ. ವೋಟು ಕೊಟ್ಟ ಮಹಾಪಾಪಕ್ಕೆ ಜನತೆಯನ್ನು ಶಾಶ್ವತವಾಗಿ ಸಾಲದ ಕೂಪಕ್ಕೆ ನೂಕುವ ಧಾರುಣ ಬಜೆಟ್ ಇದಾಗಿದೆ. ಮುಂಬರುವ ಸರ್ಕಾರಗಳಿಗೆ ಕಾಂಗ್ರೆಸ್ ಸರ್ಕಾರ ಸೃಷ್ಟಿಸುವ ಸಾಲ ಗುಂಡಿಯನ್ನು ಮುಚ್ಚುವುದೇ ಕೆಲಸ ಆಗಲಿದೆ ವ್ಯಂಗ್ಯವಾಡಿದ್ದಾರೆ.

ಬಜೆಟ್‌ನ ಸುದೀರ್ಘ ಪ್ರಲಾಪ ಆಲಿಸಿದೆ. ಅವರಿಗೆ 17ನೇ ಬಜೆಟ್ ಮಂಡಿಸಿದ ಖುಷಿ, ಜನರಿಗೆ ಬರೆ ಎಳೆಸಿಕೊಂಡ ಬಿಸಿ. ದಾಖಲೆ ಮಾಡಲು ಹೋಗಿ ರಾಜ್ಯದ ಆರ್ಥಿಕತೆಯನ್ನು ದಿಕ್ಕಾಪಾಲಾಗಿಸಿದ್ದಾರೆ ಸ್ಲೋಗನ್‌ ರಾಮಯ್ಯ ಎಂದು ಸಿಎಂರನ್ನು ಲೇವಾಡಿ ಮಾಡಿದ್ದಾರೆ.

ಕೇಂದ್ರ ಹಣ ಬರುವ ಹಣ ಕಡಿಮೆಯಾಗಿಲ್ಲ

ಮುಖ್ಯಮಂತ್ರಿಗಳು ಕೇಂದ್ರದ ನಿಂದನೆಯನ್ನು ಈ ಬಾರಿಯೂ ಮುಂದುವರಿಸಿದರು, ಅದು ಅಗತ್ಯವಿರಲಿಲ್ಲ. ಒಕ್ಕೂಟ ವ್ಯವಸ್ಥೆಯ ಮೂಲತತ್ವವನ್ನೇ ಮರೆತು ತಮ್ಮ ಸರ್ಕಾರದ ಕೆಟ್ಟ ಮಾದರಿಯನ್ನು ಪ್ರಚಾರ ಮಾಡಿಕೊಂಡು ಆತ್ಮರತಿ ಮೆರೆದಿದ್ದಾರೆ. 16ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆ ಪಾಲನ್ನು ಶೇ.3.61ರಿಂದ ಶೇ.4.7ಕ್ಕೆ ಏರಿಸಲಾಗಿದೆ. ಇದರಿಂದ ಅನಾಮತ್ತಾಗಿ 11 ಸಾವಿರ ಕೋಟಿ ರು.ಗೂ ಹೆಚ್ಚು ಹಣ ರಾಜ್ಯಕ್ಕೆ ಹರಿದುಬರುತ್ತದೆ.

ಕೇಂದ್ರದಿಂದ ಹಣ ಬರುವುದು ಕಡಿಮೆ ಆಗಿಲ್ಲ ಎಂಬುದನ್ನು ಅವರ ಬಜೆಟ್ ಪುಸ್ತಕವೇ ಹೇಳುತ್ತದೆ ಎಂದಿದ್ದಾರೆ. ಆದಾಯದ ಕೊರತೆ, ಸತತವಾಗಿ ಹೆಚ್ಚುತ್ತಿರುವ ಸಾಲದ ಪ್ರಮಾಣ ಕಳವಳಕಾರಿ. ಅನುದಾನ ಹಂಚಿಕೆಯಲ್ಲಿ ತಾಳಮೇಳವಿಲ್ಲ. ಲೆಕ್ಕಾಚಾರ ಹಳಿತಪ್ಪಿದೆ ಎಂಬುದಕ್ಕೆ ಬಜೆಟ್ ಪುಸ್ತಕವೇ ಸ್ಪಷ್ಟ ಸಾಕ್ಷಿ. ನಿರೀಕ್ಷೆಗಳನ್ನು ಸೃಷ್ಟಿಸಿ, ಅತೀವ ನಿರಾಸೆ ಉಂಟು ಮಾಡಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.