ಬೆಂಗಳೂರು(ಆ.14): ‘ಪೊಲೀಸರನ್ನು ಕೊಂದು ಬಿಡಿ, ಆರೋಪಿ ನವೀನ್‌ ರಕ್ಷಣೆಗೆ ಕೊಟ್ಟ ಪೊಲೀಸರನ್ನು ಜೀವಂತ ಬಿಡಬೇಡಿ ಎಂದು ಕೂಗಿಕೊಳ್ಳುತ್ತ ಠಾಣೆ ಮೇಲೆ ದಾಳಿ ನಡೆಸಿದರು. ಪೆಟ್ರೋಲ್‌ ಬಾಂಬ್‌ ಸಿಡಿಸಿದರು, ಬೆಂಕಿ ಹಚ್ಚಿ, ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದರು....’

"

ಇದು ತಮ್ಮ ಠಾಣೆ ಮೇಲೆ ಮಂಗಳವಾರ ರಾತ್ರಿ ಬೆಂಗಳೂರಿನ 2 ಪೊಲೀಸ್‌ ಠಾಣೆಗಳ ಮೇಲೆ ನಡೆದ ದಾಳಿ ಭೀಕರತೆ ಕುರಿತು ಡಿ.ಜೆ.ಹಳ್ಳಿ ಇನ್ಸ್‌ಪೆಕ್ಟರ್‌ ಕೇಶವಮೂರ್ತಿ ಅವರು ‘ಪ್ರಾಥಮಿಕ ವರ್ತಮಾನ ವರದಿ’ಯಲ್ಲಿ (ಎಫ್‌ಐಆರ್‌) ಘಟನೆಯ ಭೀಕರತೆಯನ್ನು ಉಲ್ಲೇಖಿಸಿದ್ದಾರೆ.

ದಾಳಿ ವೇಳೆ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿಯಿಂದ ಬಂದೂಕುಗಳನ್ನು ಕಸಿದುಕೊಂಡ ಆರೋಪಿಗಳು, ಅವುಗಳಿಂದ ಪೊಲೀಸರ ಮೇಲೆ ಗುಂಡು ಹಾರಿಸಲು ನಡೆಸಿದ ಯತ್ನ ವಿಫಲವಾಯಿತು. ‘ಫೇಸ್‌ಬುಕ್‌ನಲ್ಲಿ ಇಸ್ಲಾಂ ಧರ್ಮಗುರು ಮಹಮ್ಮದ್‌ ಪೈಗಂಬರ್‌ ಕುರಿತು ಅವಹೇಳನಕಾರಿ ಪೋಸ್ಟ್‌ ಹಾಕಿದ್ದ ಆರೋಪಿ ಕೊಲೆ ಮಾಡಿಯೇ ತೀರುತ್ತೇವೆ’ ಎಂದು ಘೋಷಣೆ ಕೂಗಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಆತ್ಮರಕ್ಷಣೆಗೆ ಗುಂಡು ಹಾರಿಸಲಾಯಿತು ಎಂದು ವಿವರಿಸಲಾಗಿದೆ.

ಎಫ್‌ಐಆರ್‌ ಪೂರ್ಣ ವಿವರ:

ಫೇಸ್‌ಬುಕ್‌ನಲ್ಲಿ ಮೊಹಮ್ಮದರ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಅಪ್‌ಲೋಡ್‌ ಮಾಡಿದ ಪ್ರಕರಣ ಸಂಬಂಧ ಆರೋಪಿ ಪಿ.ನವೀನ್‌ನನ್ನು ಬಂಧಿಸಿ ರಾತ್ರಿ 8 ಗಂಟೆಗೆ ಠಾಣೆಗೆ ಕರೆ ತರಲಾಯಿತು. ಆರೋಪಿ ಮೇಲೆ ಹಲ್ಲೆ ನಡೆಸುವ ಉದ್ದೇಶದಿಂದ ಠಾಣೆಯ ಸ್ವಲ್ಪ ದೂರದಲ್ಲಿ ಆರೋಪಿಗಳಾದ ಅಫ್ನಾನ್‌, ಮುಜಾಮಿಲ್‌ ಪಾಷಾ, ಸೈಯದ್‌ ಮಸೂದ್‌, ಅಯಾಜ್‌, ಅಲ್ಲಾಬಕಾಶ್‌ ಕದ್ದು ನಿಂತಿದ್ದರು. ರಾತ್ರಿ 8.45ಕ್ಕೆ ಏಕಾಏಕಿ ಈ ಐವರು, 300ಕ್ಕೂ ಅಧಿಕ ಜನರೊಂದಿಗೆ ಮಚ್ಚು, ದೊಣ್ಣೆ, ಲಾಂಗ್‌, ರಾಡು, ಕಲ್ಲು, ಇಟ್ಟಿಗೆ, ಪೆಟ್ರೋಲ್‌ ಬಾಂಬ್‌ ಹಿಡಿದುಕೊಂಡು ‘ಪೊಲೀಸರನ್ನು ಕೊಲ್ಲಿ..ಪೊಲೀಸರನ್ನು ಬಿಡಬೇಡಿ..ಅವರನ್ನು ಮುಗಿಸಿಬಿಡಿ’ ಎಂದು ಘೋಷಣೆ ಕೂಗುತ್ತಾ ಠಾಣೆ ಮೇಲೆ ದಾಳಿ ನಡೆಸಿದರು.

ಬೆಂಗಳೂರು ದಾಂಧಲೆ: ಎಸ್‌ಡಿಪಿಐ ಮುಖಂಡರಿಂದ 3 ಸಲ ಗಲಭೆಗೆ ಸಂಚು..!

ಆಗ ಹೆಡ್‌ ಕಾನ್‌ಸ್ಟೇಬಲ್‌ ಶ್ರೀಧರ್‌ ತಲೆಗೆ ಕಲ್ಲು ಬಿದ್ದು ತೀವ್ರ ಗಾಯವಾಯಿತು. ತಕ್ಷಣವೇ ಘಟನೆ ಬಗ್ಗೆ ಮೇಲಾಧಿಕಾರಿಗಳಿಗೆ ತಿಳಿಸಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜನೆಗೆ ಮನವಿ ಮಾಡಲಾಯಿತು. ಗಲಭೆಕೋರರಿಗೆ ಶಾಂತಿ ಕಾಪಾಡುವಂತೆ ವಿನಂತಿಸಿದೆ. ಆದರೂ ಠಾಣೆ ಹೊರ-ಒಳಗೆ ಖಾಸಗಿ ಮತ್ತು ಸರ್ಕಾರಿ ವಾಹನಗಳಿಗೆ ಬೆಂಕಿ ಹಚ್ಚಿದರು. ಠಾಣೆಯೊಳಗೆ ನುಗ್ಗಿ ಪೀಠೋಪಕರಣ, ಕಿಟಕಿ-ಬಾಗಿಲುಗಳನ್ನು ಧ್ವಂಸಗೊಳಿಸಿದರು. ನೆಲಮಹಡಿಯಲ್ಲಿದ್ದ ಪೊಲೀಸರ ಖಾಸಗಿ ವಾಹನಗಳಿಗೆ ಬೆಂಕಿ ಹಚ್ಚಿದರು. ತಕ್ಷಣವೇ ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಠಾಣಾ ವ್ಯಾಪ್ತಿ 144 ಸೆಕ್ಷನ್‌ ಜಾರಿಯಾಗಿದೆ. ನೀವು ಇಲ್ಲಿಂದ ಹೋಗುವಂತೆ ಸೂಚನೆ ಕೊಟ್ಟರೂ ಕೇಳಿಲ್ಲ. ಆರೋಪಿ ನವೀನ್‌ಗೆ ರಕ್ಷಣೆ ಕೊಟ್ಟಿರುವ ಪೊಲೀಸರನ್ನು ಮುಗಿಸಿ ಬಿಡಿ ಎಂದು ದಾಳಿ ನಡೆಸಿದರು.

ಆತ್ಮರಕ್ಷಣೆ ಸಲುವಾಗಿ ಗಲಭೆಕೋರರನ್ನು ಚದುರಿಸಲು ಅಶ್ರುವಾಯು ಸೆಲ್‌ಗಳನ್ನು ಸಿಡಿಸಲಾಯಿತು. ಅದಕ್ಕೂ ಜಗ್ಗದ ಕಿಡಿಗೇಡಿಗಳು ಪೊಲೀಸರನ್ನು ಮುಗಿಸಿ ಬಿಡಿ ಎಂದು ಕೂಗಿಕೊಂಡು ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದರು. ನಮ್ಮ ಉದ್ದೇಶವನ್ನು (ನವೀನ್‌ನನ್ನು ಕೊಲೆ) ಮಾಡಿಯೇ ತೀರುತ್ತೇವೆ. ಪೊಲೀಸರಿಂದ ಏನು ಮಾಡಲು ಸಾಧ್ಯವಿಲ್ಲವೆಂದು ಕೊಲೆಗೆ ಯತ್ನಿಸಿದರು. ಆತ್ಮರಕ್ಷಣೆಗೆ ಗಾಳಿಯಲ್ಲಿ ಗುಂಡು ಹಾರಿಸಿದಾಗಲು ಪರಿಸ್ಥಿತಿ ಹತೋಟಿಗೆ ಬಾರದೆ ವಿಕೋಪಕ್ಕೆ ತಿರುಗಿತು. ಈ ಹಂತದಲ್ಲಿ ಗಾಳಿಯಲ್ಲಿ ಹಾರಿಸಿದ ಗುಂಡುಗಳು ಕೆಲ ಗಲಭೆಕೋರರಿಗೆ ತಗುಲಿ ಕುಸಿದು ಬಿದ್ದರು. ಕೆಲವರು ತಪ್ಪಿಸಿಕೊಂಡು ಓಡಿದರು. ಗುಂಡೇಟಿನಿಂದ ಗಾಯಗೊಂಡು ಒದ್ದಾಡುತ್ತಿದ್ದರು. ತಕ್ಷಣವೇ ಪ್ರಕರಣಕ್ಕೆ ಪ್ರಚೋದನೆ ನೀಡಿದ ಆರೋಪಿಗಳಾದ ಅಫ್ನಾನ್‌, ಮುಜಾಮಿಲ್‌ ಪಾಷಾ, ಸೈಯದ್‌ ಮಸೂದ್‌, ಅಯಾಜ್‌ ಹಾಗೂ ಅಲ್ಲಾ ಬಕಾಶ್‌ ಅವರನ್ನು ವಶಕ್ಕೆ ಪಡೆಯಲಾಯಿತು ಎಂದು ಇನ್ಸ್‌ಪೆಕ್ಟರ್‌ ಕೇಶವಮೂರ್ತಿ ಎಫ್‌ಐಆರ್‌ನಲ್ಲಿ ವಿವರಿಸಿದ್ದಾರೆ.